
ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಸಾಫ್ಟ್‌ವೇರ್ ಎಂಜಿನಿಯರ್‌ಗೆ ₹1.81 ಲಕ್ಷ ವಂಚನೆ
ಕಲಬುರಗಿ: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಪ್ರಚೋದಿಸಿದ ಸೈಬರ್ ವಂಚಕರು ಸಾಫ್ಟ್‌ವೇರ್ ಎಂಜಿನಿಯರ್‌ಗೆ ₹1.81 ಲಕ್ಷ ದೋಖಾ ಮಾಡಿದ್ದಾರೆ.
ನಗರದ ಸ್ವಾರಗೇಟ್ ಪ್ರದೇಶದ ನಿವಾಸಿ, ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣದ ಗದ್ಲೇಗಾಂವ ಗ್ರಾಮದ ಸಾಫ್ಟ್‌ವೇರ್ ಎಂಜಿನಿಯರ್ ಮಹಾದೇವ ತೇಗಾಂವ ಹಣ ಕಳೆದುಕೊಂಡವರು.
ಸಾಮಾಜಿಕ ಜಾಲತಾಣದಲ್ಲಿ ಬಂದ ಪಾರ್ಟ್‌ಟೈಂ ಕೆಲಸದ ಸಂದೇಶ ಬೆನ್ನತ್ತಿದ ಮಹಾದೇವ ಅವರಿಂದ ವಂಚಕರು ಆರಂಭದಲ್ಲಿ ಹೂಡಿಕೆ ಮಾಡಿಸಿ, ಅದಕ್ಕೆ ಸಾಕಷ್ಟು ಲಾಭವನ್ನೂ ಕೊಟ್ಟು ನಂಬಿಕೆ ಬರುವಂತೆ ಮಾಡಿದ್ದರು.
‘ಒಮ್ಮೆ ₹10 ಸಾವಿರ ಹೂಡಿಕೆ ಮಾಡಿದಾಗ ₹15,061 ಬಂದಿತ್ತು. ಮತ್ತೊಮ್ಮೆ ₹10 ಸಾವಿರ ಹೂಡಿಕೆ ಮಾಡಿದಾಗ ಇನ್ನೂ ₹21,265 ಹೂಡಿಕೆ ಮಾಡುವಂತೆ ತಿಳಿಸಿದರು. ಆಗ ಒಟ್ಟು ₹43,949 ಬಂದಿತ್ತು. ಅದನ್ನು ವಿತ್‌ಡ್ರಾ ಕೂಡ ಮಾಡಿಕೊಂಡಿದ್ದೆ. ನಂತರ ಕಂಪನಿಯ 26ನೇ ವಾರ್ಷಿಕೋತ್ಸವ ಇದ್ದು, ಹೂಡಿಕೆ ಮಾಡಿದ ಹಣಕ್ಕೆ ಶೇ50ರಷ್ಟು ಬೋನಸ್ ನೀಡುವುದಾಗಿ ಆಮಿಷ ಒಡ್ಡಿದರು. ನಾನು ಆಗಸ್ಟ್ 24ರಂದು ಒಂದೇ ದಿನ ನಾಲ್ಕು ಹಂತದಲ್ಲಿ ₹1,84,711 ಹೂಡಿಕೆ ಮಾಡಿಸಿ ವಂಚಿಸಿದ್ದಾರೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಾದೇವ ಅವರು ತಿಳಿಸಿದ್ದಾರೆ.