ಭಾಲ್ಕಿ | 13 ತಿಂಗಳಿಂದ ಅತಿಥಿ ಶಿಕ್ಷಕರಿಗೆ ಸಿಗದ ಗೌರವಧನ

ಭಾಲ್ಕಿ | 13 ತಿಂಗಳಿಂದ ಅತಿಥಿ ಶಿಕ್ಷಕರಿಗೆ ಸಿಗದ ಗೌರವಧನ

ಭಾಲ್ಕಿ | 13 ತಿಂಗಳಿಂದ ಅತಿಥಿ ಶಿಕ್ಷಕರಿಗೆ ಸಿಗದ ಗೌರವಧನ

ಭಾಲ್ಕಿ: ಸುಮಾರು 13 ತಿಂಗಳುಗಳಿಂದ ಪ್ರತಿನಿತ್ಯ ಪೂರ್ವ ಪ್ರಾಥಮಿಕ ಮಕ್ಕಳ (ಎಲ್ ಕೆಜಿ, ಯುಕೆಜಿ) ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಆಯಾಗಳು ಗೌರವಧನ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಾಲ್ಲೂಕಿನ ಧನ್ನೂರ, ಕೆರೂರ, ಭಾತಂಬ್ರಾ, ವಾಂಜರಖೇಡ, ಕೋನ ಮೇಳಕುಂದಾ, ಡಾವರಗಾಂವ, ನೀಲಮನಳ್ಳಿ, ಬೀರಿ (ಬಿ), ಸಿದ್ದೇಶ್ವರ, ನೇಳಗಿ, ತಳವಾಡ (ಎಂ), ಜಾಯಗಾಂವ, ಲಂಜವಾಡ, ಬಾಳೂರ, ಚಳಕಾಪುರ ಸೇರಿದಂತೆ ಸುಮಾರು 20 ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಆದೇಶದ ಮೇರೆಗೆ 2025-26ರಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ.

ಈ ಶಾಲೆಗಳಲ್ಲಿ ಮಕ್ಕಳ ಕಲಿಕೆಗೋಸ್ಕರ ಸುಮಾರು 21 ಅತಿಥಿ ಶಿಕ್ಷಕಿಯರು, 20 ಜನ ಆಯಾಗಳು 2025ರ ಜೂನ್ ತಿಂಗಳಿಂದ ಇಲ್ಲಿಯವರೆಗೆ (ಏಪ್ರಿಲ್, ಮೇ ತಿಂಗಳು ಹೊರತುಪಡಿಸಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಗೌರವಧನವಿಲ್ಲದೆ ತಮ್ಮ ಜೀವನ ಮತ್ತು ಕುಟುಂಬ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ.

ನಮ್ಮ ಉದ್ಯೋಗದಿಂದ ಕುಟುಂಬದ ಆರ್ಥಿಕ ಸಂಕಷ್ಟ ಸ್ವಲ್ಪಮಟ್ಟಿಗಾದರೂ ನಿವಾರಣೆಯಾಗುತ್ತದೆ. ಜೊತೆಗೆ ಮಕ್ಕಳಿಗೆ ಜ್ಞಾನ ಹಂಚುವ ಮೂಲಕ ನಮ್ಮ ಜ್ಞಾನವು ಕೂಡ ಹೆಚ್ಚಾಗುತ್ತದೆ ಎಂದು ಅತಿಥಿ ಶಿಕ್ಷಕರಾಗಿ ಸೇವೆಗೆ ಸೇರಿಕೊಂಡಿದ್ದೇವೆ. ಸರ್ಕಾರದ ನಿಯಮದಂತೆ ತುಂಬಾ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ.

ಪಾಲಕರ ಮನವೊಲಿಸಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುತ್ತಿದ್ದೇವೆ. ನಮ್ಮ ಕಾರ್ಯದಿಂದ ಪಾಲಕರು ತುಂಬಾ ಸಂತುಷ್ಟರಾಗಿದ್ದಾರೆ. ಅವರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಆದರೆ ನಮಗೆ ಗೌರವಧನ ಸಿಗದೆ ಇರುವುದು ತುಂಬಾ ಬೇಸರ ಮೂಡಿಸಿದೆ ಎಂದು ಅತಿಥಿ ಶಿಕ್ಷಕಿಯರಾದ ಮಹಾದೇವಿ ಹಡಪದ, ಜ್ಯೋತಿ ಸಂತೋಷ ವಾಂಜರಖೇಡ ಅಸಮಾಧಾನ ವ್ಯಕ್ತಪಡಿಸಿದರು.

ಜೂನ್ 2025ರಿಂದ ಇಲಾಖೆಯ ನಿಯಮಾನುಸಾರ ಮಕ್ಕಳಿಗೆ ಬೋಧನೆ ನಡೆಸಿ, ಹಾಜರಾತಿ ಹಾಗೂ ಅಗತ್ಯ ದಾಖಲೆಗಳನ್ನು ಪ್ರತಿ ತಿಂಗಳು ಸಲ್ಲಿಸಿದ್ದರೂ, ಅತಿಥಿ ಶಿಕ್ಷಕರಿಗೆ ₹12,000, ಆಯಾಗಳಿಗೆ ₹6,250 ಮಾಸಿಕ ಗೌರವಧನ ಮಂಜೂರಾಗಿಲ್ಲ.

ಸರ್ಕಾರದ ವ್ಯವಸ್ಥೆ ತುಂಬಾ ವಿಚಿತ್ರವಾಗಿದೆ. ಸರ್ಕಾರಿ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ಸಂಬಳ ದೊರೆಯುತ್ತದೆ. ಅದೇ ಶಾಲೆಯಲ್ಲಿ ನಾವು ಕೂಡ ಸರ್ಕಾರದ ನಿಯಮವನ್ನು ಪಾಲಿಸಿಕೊಂಡು ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದರೂ ಕೂಡ ನಮಗೆ ನಿಗದಿಪಡಿಸಿದ ಅಲ್ಪಗೌರವಧನವೂ ಸುಮಾರು 13 ತಿಂಗಳವರೆಗೆ ದೊರೆಯುವುದಿಲ್ಲ ಎಂದರೆ ಏನರ್ಥ ಎಂದು ಸುವರ್ಣ ಧನ್ನೂರೆ ಸೇರಿದಂತೆ ಇತರ ಅತಿಥಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎರಡು ಸಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಒಂದು ಬಾರಿ ಸೇರಿದಂತೆ ಒಟ್ಟು ಮೂರು ಸಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಸಂಬಂಧಪಟ್ಟವರು ಶೀಘ್ರದಲ್ಲಿ ನಮ್ಮ ಗೌರವಧನ ಬಿಡುಗಡೆ ಆಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನಾವೆಲ್ಲರೂ ಶಾಲೆಗಳನ್ನು ಬಹಿಷ್ಕರಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವರಿದ್ದೇವೆ ಎಂದು ಅತಿಥಿ ಶಿಕ್ಷಕಿಯರು ‘ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ