
ಡಿ.ಕೆ. ಶಿವಕುಮಾರ್ 100 ದಿನಗಳ ಸಾಧನೆ ಶೂನ್ಯ ಸಂಪಾದನೆ: ಗೋವಿಂದ ಕಾರಜೋಳ ಆರೋಪ
ಚಿತ್ರದುರ್ಗ: ‘ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ 100 ದಿನಗಳ ಸಾಧನೆ ಶೂನ್ಯ ಸಂಪಾದನೆಯಾಗಿದೆ. ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಕೇವಲ ಬಿಳಿ ಕಾಗದದ ಮೇಲೆ ಸಹಿ ಮಾಡುವುದೇ ಸಾಧನೆ ಎಂದು ಮುಖ್ಯಮಂತ್ರಿ ಭಾವಿಸಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
‘ಮುಂಬರುವ ಹಿರಿಯೂರು ಉಪ ಚುನಾವಣೆ ಕಾರಣಕ್ಕೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಗಿಮಿಕ್ ಮಾಡುತ್ತಿದೆ. ಮುಖ್ಯಮಂತ್ರಿ ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಅತ್ಯಾಚಾರ, ಕೊಲೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅಧಿಕಾರಿ ವರ್ಗದ ಮೇಲೆ ಹಿಡಿತ ಇಲ್ಲವಾಗಿದೆ. ಬರಗಾಲ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಹಿರಿಯೂರು ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗಿದೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಪರಿಹಾರ ಕ್ರಮ ಕೈಗೊಳ್ಳಬಹುದು. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ವಹಿಸುತ್ತಿಲ್ಲ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸ್ಥಿರವಾದ ಆಡಳಿತ ನೀಡಿದ್ದಾರೆ. ಪ್ರಪಂಚದ ಎಲ್ಲ ದೇಶಗಳ ಜತೆ ಉತ್ತಮ ಬಾಂಧವ್ಯ, ವ್ಯವಹಾರ ಹೊಂದಿದ್ದಾರೆ. 25 ವರ್ಷ ಯಾವುದೇ ಕಳಂಕವಿಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಸೆ.17ರಿಂದ ಅ.17ರವರೆಗೆ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ’ ಎಂದು ಹೇಳಿದರು.
‘ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಘೋಷಿಸಿದ್ದು ನಿಜ. ಕೇಂದ್ರ ಸರ್ಕಾರ ಬಜೆಟ್ನಲ್ಲೇ ಹಣ ಘೋಷಿಸಿದೆ. ಆದರೆ ಕೇಂದ್ರ ಸರ್ಕಾರದ ಷರತ್ತುಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡಿಲ್ಲ. ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸಿದರೆ ಕೇಂದ್ರಕ್ಕೆ ಹೊರೆಯಾಗಲಿದೆ. ವಿವಿಧ ರಾಜ್ಯಗಳಲ್ಲಿ ಅನೇಕ ಯೋಜನೆಗಳಿವೆ, ಎಲ್ಲವೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರೆ ಹೊರೆಯಾಗುತ್ತದೆ’ ಎಂದು ತಿಳಿಸಿದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷ ಡಾ. ಸಿದ್ಧಾರ್ಥ ಗುಂಡಾರ್ಪಿ, ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ವಕ್ತಾರ ನಾಗರಾಜ್ ಬೇದ್ರೆ, ಸಹ ವಕ್ತಾರ ನವೀನ್ ಚಾಲುಕ್ಯ, ಬಸಮ್ಮ, ಸಂಪತ್ ಕುಮಾರ್ ಇದ್ದರು.