
Yash: ರಾವಣನ ದುಷ್ಟತನ ಜಾಸ್ತಿಯಾದಾಗಲೇ ರಾಮನ ಒಳ್ಳೆತನ ಜಗತ್ತಿಗೆ ತಿಳಿಯೋದು: 7 ಸಿನಿಮಾ ಕೈತಪ್ಪಿದ ಬಗ್ಗೆ ರಾಕಿಭಾಯ್ ಮಾತು
Yash: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸರಣಿ ಸಿನಿಮಾಗಳ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರ ನಟನೆ, ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಟಾಕ್ಸಿಕ್ ಹಾಗೂ ರಾಮಾಯಣ ರಿಲೀಸ್‌ಗೆ ಜಗತ್ತು ಎದುರು ನೋಡುವ ಹಾಗೆ ಯಶ್ ಮಾಡಿದ್ದಾರೆ. ನಿನ್ನೆ ತಾನೇ ಪ್ರಸಾರವಾದ ʼಆಪ್ ಕಿ ಅದಾಲತ್ʼ ಕಾರ್ಯಕ್ರಮದಲ್ಲಿ ಯಶ್ ತಾನು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗ ೭ ಸಿನಿಮಾಗಳು ಕೈತಪ್ಪಿದ ಬಗ್ಗೆ ಹೇಳಿದ್ದಾರೆ. ತಾನು ಸಿನಿಮಾ ಇಂಡಸ್ಟ್ರಿಗೆ ಆಗಷ್ಟೇ ಕಾಲಿಡುತ್ತಿದ್ದರೂ ಸಿನಿಮಾ ಆಯ್ಕೆ ವಿಚಾರದಲ್ಲಿ ಎಷ್ಟು ಕಟ್ಟುನಿಟ್ಟಾಗಿದ್ದೆ ಎಂಬುದನ್ನು ಅವರು ಬಿಚ್ಚಿಟ್ಟಿದ್ದಾರೆ.
ಟಿವಿ ಸೀರಿಯಲ್‌ನಲ್ಲಿನ ದಿನಗಳನ್ನು ನೆನಪಿಸಿಕೊಂಡ ಯಶ್
ಆಪ್ ಕಿ ಅದಾಲತ್ ಎಂಬ ರಜತ್ ಶರ್ಮಾ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಶ್ ತಾನು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಂದಗೋಕುಲ ಎಂಬ ಸೀರಿಯಲ್‌ನಲ್ಲಿ ಆಗ ಯಶ್ ನಟಿಸುತ್ತಿದ್ದರು. ಅದರಲ್ಲಿ ರಾಧಿಕಾ ಪಂಡಿತ್ ಅವರೂ ಜೊತೆಯಾಗಿ ನಟಿಸಿದ್ದು ವಿಶೇಷ. ರಜತ್ ಶರ್ಮಾ ಅವರು ಆ ಬಗ್ಗೆ ಪ್ರಶ್ನೆ ಕೇಳುತ್ತ, ʼಸೀರಿಯಲ್ ದಿನಗಳಲ್ಲೇ ಏಳು ಸಿನಿಮಾಗಳು ಕೈತಪ್ಪಿ ಹೋಗಿರಬೇಕಲ್ವಾ? ನೀವು ಸ್ಕ್ರಿಪ್ಟ್ ಕೇಳಿದಿರಿ ಎಂಬ ಕಾರಣಕ್ಕೆ ನಿಮ್ಮನ್ನು ಸಿನಿಮಾದಿಂದ ಕೈಬಿಟ್ಟರಂತೆʼ ಎಂದರು. ಇದಕ್ಕೆ ಉತ್ತರಿಸಿದ ಯಶ್, ʼಸಿನಿಮಾದಲ್ಲಿ ನಟಿಸಬೇಕು ಅಂತ ಹೇಳಿದಾಗ ಸ್ಕ್ರಿಪ್ಟ್ ಕೇಳೋದು ತಪ್ಪಾ? ಸಿನಿಮಾದ ಬಗ್ಗೆ ಏನೂ ಗೊತ್ತಿಲ್ಲದೇ ಹೇಗೆ ಒಪ್ಪಿಕೊಂಡು ನಟಿಸಲಿ? ಅವತ್ತು ಸ್ಕ್ರಿಪ್ಟ್ ಕೇಳಿದೆ ಅನ್ನುವ ಕಾರಣಕ್ಕೆ ನನ್ನನ್ನು ತಮ್ಮ ಪ್ರಾಜೆಕ್ಟ್‌ನಿಂದ ಕೈ ಬಿಟ್ಟವರೆಲ್ಲ ಈಗ ಎಲ್ಲಿದ್ದಾರೆ!ʼ ಎಂದು ಡೇರಿಂಗ್ ಉತ್ತರ ನೀಡಿದರು. ʼನಾನು ಅವತ್ತೇ ಕೈತಪ್ಪಿದ ಆ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲʼ ಎಂದರು.
ಸ್ಟಾರ್‌ಡಂ ಬಗ್ಗೆ ಯಶ್ ಮಾತು
ಯಶ್ ಸಿನಿಮಾ ಜರ್ನಿಯ ಬಗ್ಗೆ ಮಾತನಾಡುತ್ತ ಯಶ್ ಸಿನಿಮಾರಂಗದಲ್ಲಿ ಬೆಳೆಯುತ್ತ ಹೋದ ದಿನಗಳನ್ನು ನೆನಪಿಸಿಕೊಂಡ ರಜತ್ ಶರ್ಮಾ ಕಷ್ಟದ ದಿನಗಳಿಂದ ಈಗ ಒಬ್ಬ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹೊರಟಿರುವ ಸ್ಟಾರ್ ಗಿರಿಯ ಬಗ್ಗೆ ಪ್ರಶ್ನೆ ಮಾಡಿದರು. ʼನೀವು ಸಿನಿಮಾರಂಗದಲ್ಲಿ ಬೆಳೆಯುತ್ತ ಹೋದಂತೆ ನಿಮ್ಮ ಸಂಭಾವನೆ ಹೆಚ್ಚಾಗುತ್ತ ಹೋಯ್ತು, ಈಗ ನೀವು ಅತ್ಯಧಿಕ ಸಂಭಾವನೆ ಪಡೆಯುವ ನಟ. ನನಗೆ ಬಂದ ಸುದ್ದಿಯ ಪ್ರಕಾರ ನೀವು 50 ಕೋಟಿ ಸಂಭಾವನೆ ನಿರೀಕ್ಷಿಸುತ್ತೀರಂತೆ, ಹೌದಾ?ʼ ಎಂದು ಕೇಳಿದರು. ʼಅದಕ್ಕಿಂತಲೂ ಜಾಸ್ತಿ ಸರ್ʼ ಎಂದು ಯಶ್ ಅಚ್ಚರಿಗೆ ನೂಕಿದರು. ಅದಕ್ಕೆ ಕಾರಣವನ್ನೂ ನೀಡಿದರು. ತಾನು ಒಂದು ಸಿನಿಮಾ ಒಪ್ಪಿಕೊಂಡ ಮೇಲೆ ನನ್ನ ಪಾತ್ರ ನಿರ್ವಹಿಸಿ ಸಂಭಾವನೆ ತೆಗೆದುಕೊಂಡು ಸುಮ್ಮನೆ ಎದ್ದು ಹೋಗಲ್ಲ. ಸಿನಿಮಾವನ್ನು ಸಂಪೂರ್ಣ ನನ್ನ ಸಿನಿಮಾ ಎಂದು ಒಪ್ಪಿಕೊಂಡು ಅದರ ಪ್ರತೀ ಹೆಜ್ಜೆಯಲ್ಲೂ ಭಾಗಿಯಾಗುತ್ತೇನೆ. ಅದಕ್ಕಾಗಿ ಹಗಲಿರುಳೂ ಕಷ್ಟಪಡುತ್ತೇನೆ. ಅದನ್ನು ಯಶಸ್ಸಿನ ಉತ್ತುಂಗಕ್ಕೇರಿಸಲು ಶ್ರಮಿಸುತ್ತೇನೆʼ ಎಂದರು.
ರಾಮಾಯಣದಲ್ಲಿ ರಾಮನ ಬದಲು ರಾವಣನ ಪಾತ್ರ ಆಯ್ಕೆ ಮಾಡಿದ್ದು ಯಾಕೆ ?
ಯಶ್ ʼರಾಮಾಯಣʼ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು. ಹೀಗಿರುವಾಗ ರಾಮನ ಪಾತ್ರದಲ್ಲೇ ನಟಿಸಬಹುದಿತ್ತಲ್ವಾ, ವಿಲನ್ ರಾವಣನ ಪಾತ್ರವನ್ನು ಆರಿಸಿದ್ದು ಯಾಕೆ ಎಂಬ ಪ್ರಶ್ನೆ ಬಂತು. ಅದಕ್ಕೆ ಯಶ್ ಅವರದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ರು. ʼಶ್ರೀ ರಾಮ ಪ್ರಭುವಿನ ಒಳ್ಳೆಯತನ ಜಗತ್ತಿಗೆ ತಿಳಿಯಬೇಕಾದರೆ ರಾವಣನ ದುಷ್ಟತನ ಏನು ಅನ್ನುವುದೂ ತಿಳಿಯಬೇಕು. ನನಗಿಂತ ಚೆನ್ನಾಗಿ ರಾವಣನ ಪಾತ್ರವನ್ನು ಮತ್ಯಾರೂ ಅಭಿನಯಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾವಣನ ಪಾತ್ರವನ್ನೇ ಆರಿಸಿಕೊಂಡೆʼ ಎಂದರು. ʼಅಂದರೆ ರಾಮನ ಒಳ್ಳೆಯತನ ಕಾಣಬೇಕು ಅನ್ನುವ ಕಾರಣಕ್ಕೆ ರಾವಣನ ದುಷ್ಟತನದ ಪಾತ್ರ ಮಾಡಲು ಹೊರಟಿರಿʼ ಎಂದು ರಜತ್ ಶರ್ಮಾ ಕಾಲೆಳೆದದ್ದೂ ಆಯ್ತು.
ಶನಿವಾರ ರಾತ್ರಿ ಹತ್ತು ಗಂಟೆಗೆ ಪ್ರಸಾರವಾದ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಯಶ್ ಅವರು ಅತಿಥಿಯಾಗಿ ಭಾಗವಹಿಸಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಅತ್ಯಧಿಕ ಸಂಖ್ಯೆಯ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಂದಿಷ್ಟು ಮಂದಿ ಯಶ್‌ಗೆ ಪ್ರಶ್ನೆಯನ್ನೂ ಕೇಳಿದರು.