
Video: ಮಗನ ಜತೆ ವೇದಿಕೆ ಮೇಲೆ ‘ಮೇಘ ಬಂತು ಮೇಘ’ ಹಾಡು ಹಾಡಿದ ನಟ ನವೀನ್ ಕೃಷ್ಣ
ಕನ್ನಡದ ನಟ ನವೀನ್ ಕೃಷ್ಣ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ವೇದಿಕೆ ಮೇಲೆ ತಮ್ಮ ಗಾಯನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಶಿವಪ್ರಸಾದ್ ಪಾತ್ರದಲ್ಲಿ ನಟಿಸುವ ಮೂಲಕವೇ ಮನೆ ಮಾತಾದರು.
ನಟನೆ, ನಿರ್ದೇಶನ, ಬರವಣಿಗೆ ಹೀಗೆ ಹಲವು ಹಂತಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ನವೀನ್ ಕೃಷ್ಣ ತಮ್ಮ ಅದ್ಭುತ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಟ ನವೀನ್ ಕೃಷ್ಣ ಅವರ ಮಗ ಹರುಷ್ ನವೀನ್ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ನಿನ್ನೆ (ಆ.7) ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿತ್ತು.
ಅದರಲ್ಲಿ ಮಗನೊಂದಿಗೆ ನಟ ನವೀನ್ ಕೃಷ್ಣ ಅವರು, ‘ಮಣ್ಣಿನ ದೋಣಿ’ ಚಿತ್ರದ ವರನಟ ಡಾ.ರಾಜ್‌ಕುಮಾರ್ ಅವರು ಹಾಡಿದ ‘ಮೇಘ ಬಂತು ಮೇಘ’ ಹಾಡನ್ನು ವೇದಿಕೆ ಮೇಲೆ ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರು ಅಪ್ಪ, ಮಗನ ಹಾಡನ್ನು ಕೇಳಿ ಖುಷಿಪಟ್ಟಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಭಕ್ತಿಪ್ರಧಾನ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಗೆ ನಿರ್ದೇಶನ ಮಾಡುತ್ತಿದ್ದಾರೆ.