‘ಅಯೋಗ್ಯ–2’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲೇ ಸಾಗುವ ಸಿದ್ದೇಗೌಡನ ಕಥೆ!

‘ಅಯೋಗ್ಯ–2’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲೇ ಸಾಗುವ ಸಿದ್ದೇಗೌಡನ ಕಥೆ!

‘ಅಯೋಗ್ಯ–2’ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲೇ ಸಾಗುವ ಸಿದ್ದೇಗೌಡನ ಕಥೆ!

ಎಂಟು ವರ್ಷಗಳ ಹಿಂದೆ ತೆರೆಕಂಡ ‘ಅಯೋಗ್ಯ’ ಸಿನಿಮಾದ ಮುಂದುವರಿದ ಭಾಗ ಇದು. ಅವೇ ಪಾತ್ರಗಳು ಇಲ್ಲಿವೆ. ಎರಡನೇ ಭಾಗದಲ್ಲಿ ನಿರ್ದೇಶಕರು ಸಿದ್ಧಸೂತ್ರಕ್ಕೆ ಅಂಟಿಕೊಂಡೇ ಕಥಾನಾಯಕ ‘ಸಿದ್ದೇಗೌಡ’ನ ಕಥೆ ಹೆಣೆದಿದ್ದಾರೆ. ಹಳ್ಳಿಯಲ್ಲಿನ ‘ರಾಜಕೀಯ’ಕ್ಕೆ ರಾಜ್ಯ ರಾಜಕಾರಣದ ಸ್ಪರ್ಶ ನೀಡಿದ್ದಾರೆ.

ಮೊದಲನೇ ಭಾಗವನ್ನು ನೋಡದೇ ಇರುವವರಿಗಾಗಿ ಇಲ್ಲಿ ಆರಂಭದಲ್ಲೇ ಆ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ‘ಸಿದ್ದೇಗೌಡ’(ಸತೀಶ್‌ ನೀನಾಸಂ) ಮಾರಗೌಡನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ. ‘ನಂದಿನಿ’ ಸ್ವಶಕ್ತಿಯಿಂದ (ರಚಿತಾ ರಾಮ್‌) ಸರ್ಕಾರಿ ನೌಕರಿ ಪಡೆದಿದ್ದಾಳೆ. ಆಕೆಗೆ ನೌಕರಿಗೆ ಹೋಗುವ ಇಚ್ಛೆ. ‘ಸಿದ್ದೇಗೌಡ’ನ ತಾಯಿಗೆ ಸೊಸೆ ಮನೆಯಲ್ಲೇ ಇರಬೇಕು ಹಾಗೂ ಮಗ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಬೇಕೆಂಬ ಆಸೆ. ‘ಬಚ್ಚೇಗೌಡ’(ರವಿಶಂಕರ್‌) ತನ್ನ ಬೆಂಬಲಿಗನನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಿದ್ದಾನೆ. ಸಿದ್ದೇಗೌಡ–ಬಚ್ಚೇಗೌಡನ ನಡುವೆ ಮುಂದುವರಿದ ರಾಜಕೀಯದ ಆಟವೇ ಎರಡನೇ ಭಾಗದ ಕಥೆ.

ಕಥೆಯು ಸಿದ್ಧಸೂತ್ರಕ್ಕೆ ವಾಲಲಿದೆ ಎನ್ನುವ ಮುನ್ಸೂಚನೆಯನ್ನು ಚಿತ್ರದ ಆರಂಭಿಕ ದೃಶ್ಯಗಳೇ ನೀಡುತ್ತವೆ. ಅದರಂತೆ ಒಂದು ಹಾಡು, ಫೈಟ್‌ ಇಲ್ಲಿದೆ. ಹಳ್ಳಿಯಲ್ಲಿನ ರಾಜಕೀಯ ಕುರಿತು ಇನ್ನಷ್ಟು ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ರಚಿಸಿದ್ದರೆ ಒಂದೊಳ್ಳೆಯ ರಾಜಕೀಯ ವಿಡಂಬನೆ ಚಿತ್ರವಾಗುವ ಸಾಮರ್ಥ್ಯ ಕಥೆಗಿತ್ತು. ಹಳ್ಳಿಯಲ್ಲಿ ರೆಸಾರ್ಟ್‌ ರಾಜಕೀಯ, ಹೆದ್ದಾರಿ ನೆಪದಲ್ಲಿ ಹಳ್ಳಿ ಜನರ ಎತ್ತಂಗಡಿ ವಿಷಯವನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದೆ. ಆದರೆ ಈ ವಿಷಯಗಳಲ್ಲಿ ಕಥಾನಾಯಕಿಯ ಬಳಕೆಯನ್ನು ನಿರ್ದೇಶಕರು ಮರೆತಿದ್ದಾರೆ. ಸರ್ಕಾರಿ ಉದ್ಯೋಗಿಯಾಗಿರುವ ‘ನಂದಿನಿ’ ಪಾತ್ರದ ಅನುಪಸ್ಥಿತಿಯು ಬರವಣಿಗೆಯ ಕೊರತೆಯನ್ನು ತೋರಿಸುತ್ತದೆ. ‘ನಂದಿನಿ’ ಪಾತ್ರ ಆಗಾಗ ಪ್ರತ್ಯಕ್ಷವಾಗಿ ಮಾಯವಾಗಿ ಬಿಡುತ್ತದೆ. ನಾಯಕನಿಗಷ್ಟೇ ಪ್ರಧಾನವಾಗಿ ಕಥೆಯನ್ನು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಲವೆಡೆ ಸಂಭಾಷಣೆ ಕೃತಕವಾಗಿದೆ. ‘ಹುಡ್ಗೀರು ಡೇಂಜರಸ್‌’ ಹಾಗೂ ‘ಮಿಲ್ಕಿ ಬ್ಯೂಟಿ’ ಹಾಡುಗಳು ಸಿದ್ಧಸೂತ್ರದ ಇನ್ನೆರಡು ಉದಾಹರಣೆಗಳು.

ಮೊದಲ ಭಾಗದಲ್ಲಿ ‘ಭೈರತಿ ಗುಂಡ್ಕಲ್‌’ ಆಗಿದ್ದ ಸಾಧು ಕೋಕಿಲ ಈ ಭಾಗದಲ್ಲಿ ‘ರಾಗಿ ಭಾಯ್‌’ ಆಗಿ ಬಂದು ಕೆಲ ಕಾಲ ಸೆಳೆಯುತ್ತಾರೆ. ಅವರ ಪಾತ್ರದ ಬರವಣಿಗೆ, ನಟನೆ ಚೆನ್ನಾಗಿದೆ. ರವಿಶಂಕರ್‌ ಪಾತ್ರವು ‘ಅಧ್ಯಕ್ಷ’ನ ‘ಶಿವರುದ್ರೇಗೌಡ’ ಆಗಿ ಬದಲಾಗುತ್ತಿರುವುದನ್ನು ಪ್ರತ್ಯಕ್ಷವಾಗಿ ಅನುಭವಿಸಬಹುದು. ಸತೀಶ್‌ ನೀನಾಸಂ, ರಚಿತಾ ರಾಮ್‌, ‘ಬೆಣ್ಣೆ’, ‘ಮಟನ್‌’ ಆಗಿ ಗಿರೀಶ್‌ ಶಿವಣ್ಣ, ಶಿವರಾಜ್‌ ಕೆ.ಆರ್‌.ಪೇಟೆ ನಟನೆ ಚೆನ್ನಾಗಿದೆ.

ಮೊದಲ ಭಾಗದಂತೆ ಗುನುಗುವಂತ ಹಾಡುಗಳು ಇಲ್ಲಿಲ್ಲ. ಮೂರನೇ ಭಾಗವನ್ನು ಘೋಷಿಸಲಾಗಿದೆ. ‘ಸಿದ್ದೇಗೌಡ’ನ ಕಥೆ ಆರಂಭವಾಗುವುದೇ ‘ಊರಿಗೆ ಮೋರಿ ಕಟ್ಟಿಸಿಕೊಡುತ್ತೇನೆ’ ಎಂದು ಅಮ್ಮನಿಗೆ ನೀಡುವ ಪ್ರತಿಜ್ಞೆಯಿಂದ. ನಾಯಕನ ಆ ಪ್ರತಿಜ್ಞೆಯನ್ನು ಈಡೇರಿಸುವ ಗೋಜಿಗೆ ನಿರ್ದೇಶಕರು ಎರಡನೇ ಭಾಗದಲ್ಲೂ ಹೋಗಿಲ್ಲ. ಮೂರನೇ ಭಾಗದಲ್ಲಾದರೂ ಇದು ಈಡೇರುವುದೇ? ಕಾಯಬೇಕು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ