ಯಾವುದೇ ಷರತ್ತಿಲ್ಲದೆ ಮಹಿಳಾ ಮೀಸಲು ಕಾಯ್ದೆ ಜಾರಿಗೊಳಿಸಿ: ಕೇಂದ್ರಕ್ಕೆ ರಾಹುಲ್

ಯಾವುದೇ ಷರತ್ತಿಲ್ಲದೆ ಮಹಿಳಾ ಮೀಸಲು ಕಾಯ್ದೆ ಜಾರಿಗೊಳಿಸಿ: ಕೇಂದ್ರಕ್ಕೆ ರಾಹುಲ್

ಯಾವುದೇ ಷರತ್ತಿಲ್ಲದೆ ಮಹಿಳಾ ಮೀಸಲು ಕಾಯ್ದೆ ಜಾರಿಗೊಳಿಸಿ: ಕೇಂದ್ರಕ್ಕೆ ರಾಹುಲ್

ನವದೆಹಲಿ: ಮಹಿಳಾ ಮೀಸಲಾತಿ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಲೋಕಸಭೆಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಯೊಂದಿಗೆ ಹೊಂದಾಣಿಕೆ ಮಾಡದೆ ತಕ್ಷಣವೇ ಜಾರಿಗೊಳಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆ ಕುರಿತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಸದ್ಯದ 543 ಸದಸ್ಯ ಬಲದ ಲೋಕಸಭೆಯಲ್ಲೇ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ರಾಹುಲ್ ಒತ್ತಾಯಿಸಿದ್ದಾರೆ.

ಮಹಿಳಾ ಸಬಲೀಕರಣ ಕುರಿತು ರಾಹುಲ್ ಅವರ ವಿಡಿಯೊ ಹೇಳಿಕೆಯನ್ನು ಬಳಸಿಕೊಂಡು ರಿಜಿಜು ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಕೋರಿದ್ದರು. ಈ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ ರಾಹುಲ್, ಮಹಿಳಾ ಮೀಸಲಾತಿ ಮಸೂದೆಯನ್ನು ಈಗಾಗಲೇ ಕಾಂಗ್ರೆಸ್‌ನ ಪೂರ್ಣ ಬೆಂಬಲದೊಂದಿಗೆ ಅಂಗೀಕರಿಸಲಾಗಿದೆ, ಸರ್ಕಾರ ಅದನ್ನು ಏಕೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ರಿಜಿಜು ಜೀ, ಸಂಸದೀಯ ವ್ಯವಹಾರಗಳ ಸಚಿವರಾಗಿ ನಿಮಗಿಂತ ಚೆನ್ನಾಗಿ ಯಾರಿಗೆ ತಿಳಿದಿರಲು ಸಾಧ್ಯ?, 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್‌ನ ಸಂಪೂರ್ಣ ಬೆಂಬಲದೊಂದಿಗೆ ಅಂಗೀಕರಿಸಲಾಗಿದೆ. ಪ್ರಶ್ನೆಯೇನೆಂದರೆ, ಮೂರು ವರ್ಷಗಳ ನಂತರವೂ ಅದನ್ನು ಏಕೆ ಜಾರಿಗೊಳಿಸಿಲ್ಲ. ಈಗ ಅನಗತ್ಯವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಯೊಂದಿಗೆ ಏಕೆ ಹೊಂದಾಣಿಕೆ ಮಾಡಲು ಬಯಸುತ್ತೀರಿ?, 2023ರ ಮಹಿಳಾ ಮೀಸಲು ಕಾಯ್ದೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೊಳಿಸಿ’ ಎಂದು ಆಗ್ರಹಿಸಿದ್ದಾರೆ.

‘ಭಾರತದಲ್ಲಿ ಮಹಿಳೆಯರ ಶಕ್ತಿ ಬಂಧಿಯಾಗಿದೆ. ಅವರ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡುತ್ತಿಲ್ಲ. ನನ್ನ ಪ್ರಕಾರ, ಮಹಿಳೆಯರು ತಮ್ಮನ್ನು ತಾವು ವ್ಯಕ್ತಪಡಿಸದಿದ್ದರೆ ಯಾವುದೇ ದೇಶ ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮ ದೇಶವು ಮಹಿಳೆಯರ ಅಭಿವ್ಯಕ್ತಿಯಿಲ್ಲದೆ ಅಪೂರ್ಣವಾಗಿದೆ ಎಂಬುದನ್ನು ಜನರಿಗೆ ಅರ್ಥೈಸುವುದೇ ನನ್ನ ಮತ್ತು ದೇಶದ ರಾಜಕೀಯವು ಹೇಗಿರಬೇಕು ಎಂಬುದರ ಉದ್ದೇಶವಾಗಿದೆ’ ಎಂದಿದ್ದಾರೆ.

ರಾಹುಲ್ ವಿಡಿಯೊ ಉಲ್ಲೇಖಿಸಿದ ರಿಜಿಜು, ‘ಇದು ಕಾಂಗ್ರೆಸ್ ಪಕ್ಷದಿಂದ ಧನಾತ್ಮಕ ಸಂದೇಶವೆಂದು ತೋರುತ್ತದೆ. ಮಹಿಳೆಯರ ಕುರಿತು ರಾಹುಲ್ ಗಾಂಧಿ ಅವರಲ್ಲಿ ಗಮನಾರ್ಹ ಮನಃಪರಿವರ್ತನೆ ಕಂಡುಬಂದಿದೆ. ಈಗ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಮಸೂದೆಯನ್ನು ಷರತ್ತಿಲ್ಲದೆ ಬೆಂಬಲಿಸುವುದಾಗಿ ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆಯನ್ನು ಜಾರಿಗೆ ತಂದು, ನಂತರ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಜಾರಿಗೊಳಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಿಜಿಜು ಉಲ್ಲೇಖಿಸುತ್ತಿದ್ದರು. ಆದರೆ, ಮೋದಿ ಸರ್ಕಾರದ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮಗೆ ಅನುಕೂಲವಾಗಲೆಂದು ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆ ಜಾರಿಗೊಳಿಸುವ ಉದ್ದೇಶ ಹೊಂದಿದೆ ಎಂಬುದು ವಿಪಕ್ಷಗಳ ಆರೋಪ.

ರಿಜಿಜು ಕಳೆದ ವಾರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್ ಮತ್ತು ಗೌರವ್ ಗೊಗೋಯ್ ಅವರನ್ನು ಭೇಟಿಯಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮಸೂದೆ ಜಾರಿ ಕುರಿತು ಚರ್ಚಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ