
Snake: ಕಾರು, ಸ್ಕೂಟರ್, ಟಾಯ್ಲೆಟ್ ಒಳಗಡೆ ಹಾವು ಸೇರಿಕೊಳ್ಳುವುದೇಕೆ? ಇಲ್ಲಿದೆ ಅದರ ಹಿಂದಿನ ಕಾರಣ
ಕಾರಿನ ಎಂಜಿನ್ ಒಳಗೆ ಹೆಬ್ಬಾವು ಸುರುಳಿ ಹಾಕಿಕೊಂಡು ಕುಳಿತುಕೊಳ್ಳುವುದು, ಮನೆ ಮುಂದೆ ನಿಲ್ಲಿಸಿರುವ ಸ್ಕೂಟರ್ ಒಳಗೆ ಹಾವು ನುಸುಳಿಕೊಂಡಿರುವ ಸುದ್ದಿಗಳನ್ನು ಅಲ್ಲಲ್ಲಿ ನೀವು ಕೂಡಾ ಕೇಳಿರಬಹುದು. ಆದರೆ ಹಾವು ಯಾಕೆ ಯಾವಾಗಲೂ ವಾಹನಗಳ ಎಂಜಿನ್ ಅನ್ನೇ ಹುಡುಕಿಕೊಂಡು ಅದರೊಳಗೆ ನುಸುಳಿ ಕೂರುತ್ತವೆ ಎನ್ನುವುದರ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಕಾರು, ಸ್ಕೂಟರ್ ಮತ್ತು ಶೌಚಾಲಯಗಳು ಹಾವಿಗೆ ನಿಜವಾಗಿಯೂ ಅಗತ್ಯವಿರುವ ನಿರ್ದಿಷ್ಟ ವಾತಾವರಣವನ್ನು ಒದಗಿಸಿ ಕೊಡುತ್ತವೆಯಂತೆ. ಇದೇ ಕಾರಣಕ್ಕೆ ಹಾವುಗಳು ಈ ಜಾಗವನ್ನು ಹೆಚ್ಚು ಇಷ್ಟಪಡುವುದು.
ಇದೆಲ್ಲದರ ಹಿಂದಿನ ಜೈವಿಕ ಕಾರಣ
ಹಾವುಗಳು ಶೀತರಕ್ತ ಪ್ರಾಣಿ. ಅಂದರೆ ಅವು ಸಸ್ತನಿಗಳಂತೆ ತಮ್ಮ ದೇಹದ ಶಾಖವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ, ಹೊರಗಿವ ವಾತಾವರಣ ತುಂಬಾ ತಂಪಾದಾಗ ಅದನ್ನು ನಿಯಂತ್ರಿಸಲು ಹಾವು ತನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತವೆ. ಇನ್ನು ಹೊರಗಿನ ಶಾಖ ಹೆಚ್ಚಾದಾಗ ತಂಪಾದ ಸ್ನಾನಗೃಹಗಳು, ಒದ್ದೆಯಾದ ಪೈಪ್‌ಲೈನ್‌ಗಳು ಮತ್ತು ಪಾರ್ಕಿಂಗ್ ಸ್ಥಳಗಳನ್ನು ಹಾವುಗಳು ಕೂಡಾ ಹುಡುಕಿಕೊಂಡು ಬರುತ್ತವೆ. ಅಂದರೆ ಹಾವು ಋತು ಮತ್ತು ದಿನದ ಸಮಯವನ್ನು ಅವಲಂಬಿಸಿ, ಉಷ್ಣತೆಯನ್ನು ಹೊಂದಿಸಿಕೊಳ್ಳುವ ಕಾರಣಕ್ಕಾಗಿ ಕಾರುಗಳು, ಸ್ಕೂಟರ್‌ಗಳು ಮತ್ತು ಶೌಚಾಲಯಗಳನ್ನು ಹುಡುಕಿಕೊಂಡು ಬರುತ್ತವೆ.
ಹಾವು ಬಯಸುವ ವಾತಾವರಣವನ್ನು ಕಾರಿನ ಎಂಜಿನ್ ನೀಡುತ್ತದೆ. ಈ ಎಂಜಿನ್ ಯಾವಾಗಲೂ ಬಿಸಿಯಾಗಿರುತ್ತದೆ. ಅದರಲ್ಲಿಯೂ ಡ್ರೈವ್ ಮಾಡಿದ ತಕ್ಷಣ ಇದು ಬಿಸಿಯಾಗಿರುತ್ತದೆ. ಜೊತೆಗೆ ಕತ್ತಲೆಯಾದ ಸಂಧುಗಳು ಹಾವು ಕುಳಿತುಕೊಳ್ಳಲು ಬೇಕಾಗಿರುವ ವಾತಾವರಣವನ್ನು ಒದಗಿಸಿ ಕೊಡುತ್ತದೆ. ಪಾರ್ಕ್ ಮಾಡಿದ ವಾಹನಗಳು ಅದರಲ್ಲಿಯೂ ಗಾರ್ಡನ್, ಪೊದೆಗಳು ಅಥವಾ ತೆರೆದ ಚರಂಡಿಗಳ ಬಳಿ ನಿಲ್ಲಿಸಿರುವ ವಾಹನಗಳು, ಇಲಿಗಳಿಗೂ ಅಡಗು ತಾಣಗಳಾಗಿ ಇರುತ್ತವೆ. ಈ ಜಾಗದಲ್ಲಿ ಇಲಿಗಳು ಮನೆ ಮಾಡುವುದರಿಂದ ಹಾವುಗಳು ಅವುಗಳನ್ನು ಹುಡುಕಿಕೊಂಡು ಬಂದು ಎಂಜಿನ್ ತಲುಪಿ ಬಿಡುತ್ತವೆ.
ಇನ್ನು ಮಳೆಗಾಲದಲ್ಲಿ ಹಾವಿನ ಬಿಲಗಳಿಗೆ ನೀರು ಹೊಕ್ಕಿ ಆ ಪರಿಸರ ಪೂರ್ತಿ ಒದ್ದೆಯಾಗಿರುತ್ತವೆ, ಈ ಸಮಯದಲ್ಲಿ ಹಾವು ಬೆಚ್ಚಗಿನ ವಾತಾವರಣವನ್ನು ಹುಡುಕಿಕೊಂಡು ಬಂದು ಕಾರು, ಜೀಪು, ಸ್ಕೂಟರ್ ಎಂಜಿನ್ ಒಳಗೆ ನುಸುಳುತ್ತವೆ.
ಶೌಚಾಲಯಗಳು ಮತ್ತು ಸ್ನಾನಗೃಹಗಳು
ಕೆಲವೊಮ್ಮೆ ಶೌಚಾಲಯದ ಕಮೋಡ್‌ನಲ್ಲಿ ಹಾವು ಕಾಣಿಸಿಕೊಳ್ಳುವಾಗ ಆಶ್ಚರ್ಯವಾಗುತ್ತದೆ. ಆದರೆ ಇದು ಯಾವುದೇ ಪವಾಡವೇನಲ್ಲ. ಹಾವುಗಳು ಸಾಮಾನ್ಯವಾಗಿ ಡ್ರೈನೇಜ್ ಪೈಪ್, ತೆರೆದ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್‌ಗಳ ಮೂಲಕ ಅಲ್ಲಿಗೆ ಬರುತ್ತವೆ. ಈ ಪೈಪ್‌ಗಳ ಮೂಲಕ ಚಲಿಸುವ ಇಲಿ ಅಥವಾ ಕಪ್ಪೆಯ ವಾಸನೆಯನ್ನು ಅನುಸರಿಸಿಕೊಂಡು ಹಾವುಗಳು ಕೂಡಾ ಅಲ್ಲಿಗೆ ತಲುಪುತ್ತವೆ. ನೆಲ ಮಹಡಿಯ ಸ್ನಾನಗೃಹಗಳು, ಹಳೆಯ ಕೊಳಾಯಿಗಳು ಮತ್ತು ತೆರೆದ ಚರಂಡಿಗಳು ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಿಗೆ ಹತ್ತಿರವಿರುವ ಮನೆಗಳು, ತೆರೆದ ಪೈಪ್‌ಗಳನ್ನು ಹೊಂದಿರುವ ಮನೆಗಳಲ್ಲಿ ಈ ಅಪಾಯ ಹೆಚ್ಚಿರುತ್ತವೆ.
ಈ ಅಪಾಯದಿಂದ ತಪ್ಪಿಸಲು ಏನು ಮಾಡಬೇಕು?
ಹಾಗಂತ ಪಾರ್ಕ್ ಮಾಡಿರುವ ಎಲ್ಲಾ ಕಾರು, ಸ್ಕೂಟರ್ ಎಂಜಿನ್ ಒಳಗೆ ಹಾವು ಹೋಗುತ್ತದೆ. ಅಥವಾ ಎಲ್ಲಾ ಶೌಚಾಲಯಗಳಲ್ಲಿಯೂ ಹಾವು ಬರುತ್ತದೆ ಎಂದಲ್ಲ. ಈ ಅಪಾಯವನ್ನು ತಪ್ಪಿಸಲು ಕೆಲವು ಮಾರ್ಗಗಳಿವೆ. ದೊಡ್ಡದಾಗಿ ಬೆಳೆದ ಪೊದೆಗಳು ಅಥವಾ ಗಾರ್ಡನ್ ಬಳಿ ವಾಹನವನ್ನು ಪಾರ್ಕ್ ಮಾಡುವ ಬದಲು ಉತ್ತಮ ಬೆಳಕು ಇರುವ ತೆರೆದ ಜಾಗದಲ್ಲಿ ಪಾರ್ಕ್ ಮಾಡಿದರೆ ಈ ಅಪಾಯ ಕಡಿಮೆ. ಆಗಾಗ ಬಾನೆಟ್ ಅಡಿಯಲ್ಲಿ ಪರಿಶೀಲಿಸುವುದು ಒಳ್ಳೆಯದು. ಅದರಲ್ಲಿಯೂ ತುಂಬಾ ಸಮಯದವೆರೆಗೆ ಕಾರನ್ನು ಹೊರಗೆ ತೆಗೆಯದೆ ಇದ್ದರೆ ಕಾರಿನ ಎಂಜಿನ್, ಬಾನೆಟ್ ಚೆಕ್ ಮಾಡಿದರೆ ಒಳ್ಳೆಯದು.
ಇನ್ನು ಟಾಯ್ಲಟ್ ಡ್ರೈನ್ ಕವರ್‌ಗಳು ಸರಿಯಾಗಿದೆಯೇ ನೋಡಿಕೊಳ್ಳಿ. ಬಳಕೆಯಲ್ಲಿಲ್ಲದಿದ್ದಾಗ ಕಮೋಡ್ ಮುಚ್ಚಳವನ್ನು ಮುಚ್ಚಿಡಿ. ಸೆಪ್ಟಿಕ್ ಟ್ಯಾಂಕ್ ಅಥವಾ ತೆರೆದ ಪೈಪ್‌ಗಳನ್ನು ಮುಚ್ಚುವುದರಿಂದ ಹಾವುಗಳು ಒಳಗೆ ಬರಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನಿಮ್ಮ ಕಾರು, ಸ್ಕೂಟರ್ ಎಂಜಿನ್ ಒಳಗೆ, ಟಾಯ್ಲಟ್‌ನಲ್ಲಿ ಹಾವು ಸೇರಿಕೊಂಡಿದ್ದರೆ ಅದನ್ನು ನೀವೇ ಹೊರ ತೆಗೆಯಲು ಪ್ರಯತ್ನಿಸಬೇಡಿ. ತಕ್ಷಣ ಹಾವು ಹಿಡಿಯುವವರನ್ನು ಅಥವಾ ಅರಣ್ಯ ಇಲಾಖೆಯವರನ್ನು ಕರೆಸಿ ಹಾವನ್ನು ರಕ್ಷಿಸಿ.