
ಕ್ಲಾರೆನ್ಸ್ ಶಾಲೆಯ 500 ವಿದ್ಯಾರ್ಥಿಗಳು, 21 ಸಿಬ್ಬಂದಿಗೆ ಜ್ವರ
ಬೆಂಗಳೂರು: ರಿಚರ್ಡ್ಸ್ ಟೌನ್‌ನ ಕ್ಲಾರೆನ್ಸ್ ಶಾಲೆಯ 500 ವಿದ್ಯಾರ್ಥಿಗಳು, 21 ಸಿಬ್ಬಂದಿಗೆ ಜ್ವರ ಕಾಣಿಸಿಕೊಂಡ ಕಾರಣ ಐದು ದಿನ ರಜೆ ಘೋಷಿಸಲಾಗಿದೆ. ‘ಕ್ಲಾರ್ಕ್ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಸೃಷ್ಟಿಯಾಗಿರುವ ಅನೈರ್ಮಲ್ಯವೇ ಇದಕ್ಕೆ ಕಾರಣ’ ಎಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದೆ.
‘2,500 ವಿದ್ಯಾರ್ಥಿಗಳಿದ್ದು, ಶೇ 20ರಷ್ಟು ಮಂದಿ ಜ್ವರ, ಶೀತ, ಮೈ–ಕೈನೋವು ಬಾಧೆಯಿಂದ ಗೈರಾಗಿದ್ದರು. ಇವರಲ್ಲಿ ಇಬ್ಬರಿಗೆ ಎಚ್1ಎನ್1 ಸೋಂಕು ದೃಢಪಟ್ಟಿತ್ತು. ಒಬ್ಬರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರದಿಂದ ಬಾಧಿತರಾದವರ ಸಂಖ್ಯೆ ಹೆಚ್ಚಾದ್ದರಿಂದ ಆ.14ರಿಂದ 18ರವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ’ ಎಂದು ಆಡಳಿತಾಧಿಕಾರಿ ಪ್ರೇಮ್ ರುಬೇನ್ ತಿಳಿಸಿದರು.
‘ಕ್ಲಾರ್ಕ್ ರಸ್ತೆ, ಪಾಟರಿ ರಸ್ತೆ, ಜಾನ್ ಆರ್ಮ್‌ಸ್ಟ್ರಾಂಗ್ ಹಾಗೂ ವಿವಿಯಾನಿ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳು ಆಹಾರ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದು, ಪಾದಚಾರಿ ಮಾರ್ಗದಲ್ಲಿ ಓಡಾಡುವುದೂ ಕಷ್ಟವಾಗಿದೆ. ಬಸ್ ನಿಲ್ದಾಣದಲ್ಲಿ ಕಬಾಬ್ ಸೇರಿದಂತೆ ತಿನಿಸುಗಳನ್ನು ತಯಾರಿಸಿ ಮಾರುತ್ತಿದ್ದಾರೆ. ಅಲ್ಲಿಯೇ ತ್ಯಾಜ್ಯ ಬಿಸಾಡುತ್ತಿದ್ದು, ಸೊಳ್ಳೆ– ನೊಣಗಳು ಉತ್ಪತ್ತಿಯಾಗುತ್ತಿವೆ’ ಎಂದು ದೂರಿದ್ದಾರೆ.
ತ್ಯಾಜ್ಯದ ತಾಣ: ಶಾಲೆಯ ಕ್ಲಾರ್ಕ್ ರಸ್ತೆ ಕಿಂಡರ್‌ಗಾರ್ಟನ್ ಗೇಟ್ ಬಳಿ ಎಳನೀರು ವ್ಯಾಪಾರಿಯೊಬ್ಬರು ತೆಂಗಿನಕಾಯಿಗಳನ್ನು ಅಲ್ಲಿಯೇ ಬಿಸಾಡುವುದು ಕಂಡುಬಂತು. ಕಬಾಬ್ ವ್ಯಾಪಾರಿಯೊಬ್ಬರು ಸಂಜೆ 6ರ ನಂತರ ವಹಿವಾಟು ಆರಂಭಿಸುತ್ತಿದ್ದು, ಬಸ್‌ನಿಲ್ದಾಣದ ಬಳಿ ಕರಿದ ಎಣ್ಣೆ, ಆಹಾರ ತ್ಯಾಜ್ಯ ಬಿಸಾಡಲಾಗುತ್ತಿದೆ. ಅದರಿಂದ ಬೀದಿ ನಾಯಿಗಳ ಹಾವಳಿ ಉಂಟಾಗಿದೆ. ಕಬಾಬ್ ಖರೀದಿಸಲು ಬರುವ ಮದ್ಯ ವ್ಯಸನಿಗಳು ಶಾಲೆಯ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
ಶಾಲೆಯ 50 ಮೀಟರ್ ಒಳಗೆ ಕರಿದ ತಿಂಡಿ, ಹೆಚ್ಚು ಕೊಬ್ಬು, ಸಕ್ಕರೆ ಮತ್ತು ಉಪ್ಪಿನಾಂಶದ ತಿನಿಸುಗಳನ್ನು ಮಾರಾಟ ಮಾಡದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸೂಚನೆಯಿದ್ದರೂ ತಳ್ಳುಗಾಡಿಗಳಲ್ಲಿ ಐಸ್‌ಕ್ರೀಮ್, ಫಲೂದಾ, ಕುಲ್ಫಿ, ಮೋಮೊ, ಕಬ್ಬಿನಹಾಲು, ಸಿಹಿ ಮೆಕ್ಕೆಜೋಳ, ಸೇರಿದಂತೆ ವಿವಿಧ ತಿನಿಸುಗಳ ಮಾರಾಟ ನಡೆದಿದೆ. ಫುಟ್‌ಪಾತ್, ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದರೂ ತೆರವು ಮಾಡಲು ಪಾಲಿಕೆ ಮುಂದಾಗಿಲ್ಲ.
ಬಾರದ ಬಸ್‌ಗಳು: ಕ್ಲಾರ್ಕ್ ರಸ್ತೆಯಲ್ಲಿನ ಶಾಲೆ ಎದುರಿನ ಬಸ್‌ನಿಲ್ದಾಣಕ್ಕೆ ಬಸ್‌ಗಳೇ ಬರುವುದಿಲ್ಲ. ಕಾರು, ಬೈಕ್‌ಗಳ ಪಾರ್ಕಿಂಗ್ ತಾಣವಾಗಿ ಬದಲಾಗಿದೆ. ಪಾದಚಾರಿ ಮಾರ್ಗದಲ್ಲಿ ತಳ್ಳುಗಾಡಿಗಳನ್ನು ಸಾಲಾಗಿ ನಿಲ್ಲಿಸಲಾಗಿದೆ.
‘ಕ್ಲಾರ್ಕ್ ರಸ್ತೆ ಫುಡ್‌ಸ್ಟ್ರೀಟ್ ಆಗಿ ಬದಲಾಗಿದೆ. ಅನೈರ್ಮಲ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಬರುತ್ತಿವೆ. ನಿಯಮದಂತೆ ನೈರ್ಮಲ್ಯ ಕಾಪಾಡಲು ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಪ್ರೇಮ್ ರುಬೇನ್ ಕೋರಿದರು.
ಪರಿಶೀಲಿಸಲಾಗಿದೆ: ಆರೋಗ್ಯಾಧಿಕಾರಿ
‘ಶಾಲೆಯ ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡಿದ್ದು ಅದಕ್ಕೆ ಬೀದಿ ವ್ಯಾಪಾರಿಗಳು ಸೃಷ್ಟಿಸಿರುವ ಅನೈರ್ಮಲ್ಯ ಕಾರಣವೆಂದು ಶಾಲೆಯ ಆಡಳಿತ ಮಂಡಳಿ ಆರೋಪಿಸಿದೆ. ಪಾಲಿಕೆ ವತಿಯಿಂದ ಪರಿಶೀಲಿಸಲಾಗಿದೆ’ ಎಂದು ಬೆಂಗಳೂರು ಉತ್ತರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಿದ್ಧಪ್ಪಾಜಿ ಗೌಡ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಶಾಲೆಯವರು ಮುನ್ನೆಚ್ಚರಿಕೆಯಿಂದ ರಜೆ ನೀಡಿದ್ದಾರೆ. ಬೀದಿಬದಿ ವ್ಯಾಪಾರಕ್ಕೂ ಶಾಲೆಯ ವಿದ್ಯಾರ್ಥಿಗಳಿಗೆ ಜ್ವರ ಬಂದಿರುವುದಕ್ಕೂ ಸಂಬಂಧವಿಲ್ಲ. ನಿಯಮದಂತೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುವಂತಿಲ್ಲ. ತೆರವಿಗೆ ಪಾಲಿಕೆ ಎಂಜಿನಿಯರ್‌ಗಳಿಗೆ ಶಾಲೆಯ ಸುತ್ತಲು ನೈರ್ಮಲ್ಯ ಕಾಪಾಡಲು ಸ್ವಚ್ಛತಾ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.