SIR| ಹೆಸರು ಕೈಬಿಟ್ಟಿದ್ದಕ್ಕೆ ಪ್ರಕಾಶ್ ರಾಜ್ ಆಕ್ಷೇಪ: ಚುನಾವಣಾಧಿಕಾರಿ ಸ್ಪಷ್ಟನೆ

SIR| ಹೆಸರು ಕೈಬಿಟ್ಟಿದ್ದಕ್ಕೆ ಪ್ರಕಾಶ್ ರಾಜ್ ಆಕ್ಷೇಪ: ಚುನಾವಣಾಧಿಕಾರಿ ಸ್ಪಷ್ಟನೆ

SIR| ಹೆಸರು ಕೈಬಿಟ್ಟಿದ್ದಕ್ಕೆ ಪ್ರಕಾಶ್ ರಾಜ್ ಆಕ್ಷೇಪ: ಚುನಾವಣಾಧಿಕಾರಿ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ (ಎಎಸ್‌ಡಿಡಿಒ) ಎಂದು ನಮೂದಿಸಲಾಗಿರುವುದಕ್ಕೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

2026ರ ಜೂನ್ 16ರವರೆಗೆ ನವೀಕರಿಸಲಾದ ಮತದಾರರ ಪಟ್ಟಿಯ ಪ್ರಕಾರ, ಪ್ರಕಾಶ್‌ ರಾಜ್‌ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಸಕ್ರಿಯ ಮತದಾರರಾಗಿದ್ದರೂ, ನಿಗದಿತ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಜಗದೀಶ್ ಜಿ. ಸ್ಪಷ್ಟಪಡಿಸಿದ್ದಾರೆ.

ಎಸ್‌ಐಆರ್‌ ಕುರಿತು ಪ್ರಕಾಶ್‌ ರಾಜ್‌ ಮಾಡಿರುವ ಆರೋಪಗಳು ಸುಳ್ಳು. ಅವರು (ಪ್ರಕಾಶ್‌ ರಾಜ್‌) 163 ಶಾಂತಿನಗರ ವಿಧಾನಸಭಾ ಕ್ಷೇತ್ರದ ನೋಂದಾಯಿತ ಮತದಾರರಾಗಿದ್ದಾರೆ (ಕ್ರಮ ಸಂಖ್ಯೆ 970, ಭಾಗ ಸಂಖ್ಯೆ 1) ಎಂದು ಜಗದೀಶ್ ದೃಢಪಡಿಸಿದ್ದಾರೆ.

‘ಮನೆ-ಮನೆ ಪರಿಶೀಲನೆ ವೇಳೆ ಪ್ರಕಾಶ್ ರಾಜ್ ಅವರು ನೋಂದಾಯಿತ ವಿಳಾಸವಾದ ನಂ. 266, ಗಾರ್ಡನ್ ಅಪಾರ್ಟ್‌ಮೆಂಟ್‌ನಿಂದ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಬಿಎಲ್‌ಒ ಅವರಿಗೆ ತಿಳಿದುಬಂದಿದೆ. ಬಿಎಲ್‌ಒ ಅವರು ನೆರೆಹೊರೆಯವರು ಹಾಗೂ ಪ್ರಾಪರ್ಟಿ ಮ್ಯಾನೇಜರ್ ಅವರೊಂದಿಗೆ ವಿಚಾರಣೆ ನಡೆಸಿದ್ದು, ನಟ ಕಳೆದ ನಾಲ್ಕು ವರ್ಷಗಳಿಂದ ಈ ಫ್ಲಾಟ್‌ನಲ್ಲಿ ವಾಸಿಸುತ್ತಿಲ್ಲ ಮತ್ತು ಪ್ರಸ್ತುತ ಬೇರೆ ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂದು ಫ್ಲಾಟ್ ಮಾಲೀಕರು ದೃಢಪಡಿಸಿದ್ದಾರೆ’ ಎಂದು ಜಗದೀಶ್ ವಿವರಿಸಿದ್ದಾರೆ.

ಬಿಎಲ್‌ಒ ಮಾಹಿತಿ ಆಧಾರದ ಮೇಲೆ ಸ್ಥಳ ಪರಿಶೀಲನಾ ವರದಿ ಸಿದ್ಧಪಡಿಸಲಾಯಿತು ಮತ್ತು ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮತದಾರರ ಹೆಸರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ (ಎಎಸ್‌ಡಿಡಿಒ) ಎಂದು ನಮೂದಿಸಲಾಯಿತು ಎಂದೂ ಅವರು ಉಲ್ಲೇಖಿಸಿದ್ದಾರೆ.

‘ಇದೇ ವಿಚಾರವಾಗಿ ನಾನು ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿಭಿನ್ನ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ದೃಢಪಡಿಸಿದ್ದಾರೆ. ಅವರು (ಪ್ರಕಾಶ್ ರಾಜ್) ಬಿಎಲ್‌ಒ ಮೂಲಕ ಪ್ರಸ್ತುತ ವಾಸವಿರುವ ವಿಳಾಸವನ್ನು ಉಲ್ಲೇಖಿಸಿ ಫಾರ್ಮ್-6 ಅನ್ನು ಸಲ್ಲಿಸಬಹುದು’ ಎಂದಿದ್ದಾರೆ.

‘ಎಸ್‌ಐಆರ್‌ ಬಳಿಕ ಮತದಾನದ ಹಕ್ಕು ಕಳೆದುಕೊಂಡ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬ. ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿದ್ದೇನೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೇ ವಾಸಿಸುತ್ತೇನೆ. ಇಲ್ಲಿ ಶಾಲೆ, ಕಾಲೇಜು ಶಿಕ್ಷಣ ಪಡೆದಿದ್ದೇನೆ. ರಂಗಭೂಮಿಯಲ್ಲೂ ಕೆಲಸ ಮಾಡಿದ್ದೇನೆ. ಇದೇ ಕ್ಷೇತ್ರದಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈಗ ಆಟ ಶುರುವಾಗಿದೆ. ನನ್ನ ಮತದಾನದ ಗುರುತಿನ ಚೀಟಿಯನ್ನು ಮರಳಿ ಪಡೆಯಲು ನಾನು ಯಾವ ಪ್ರಕ್ರಿಯೆ ಅನುಸರಿಸಬೇಕು, ಯಾವೆಲ್ಲ ದಾಖಲೆಗಳನ್ನು ತೋರಿಸಬೇಕು ಎಂಬುದನ್ನು ನೋಡೋಣ’ ಎಂದು ವಿಡಿಯೊದಲ್ಲಿ ಪ್ರಕಾಶ್ ರಾಜ್ ಹೇಳಿಕೊಂಡಿದ್ದರು.

‘ಒಂದು ಸಣ್ಣ ಮಾತು... ನಿಮ್ಮನ್ನು ಬೆಂಬಲಿಸದ ಕೆಲ ನಾಗರಿಕರ ಮತದಾನದ ಹಕ್ಕನ್ನು ನಿರಾಕರಿಸಲು ನೀವು ನಿಮ್ಮ ಅಧಿಕಾರವನ್ನು ಬಳಸಬಹುದು. ಆದರೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ನಮ್ಮ ಶಕ್ತಿಯನ್ನು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಸೇಂಟ್‌ ಜೋಸೆಫ್ಸ್‌ ಇಂಡಿಯನ್‌ ಸ್ಕೂಲ್‌ ಮತಗಟ್ಟೆ ವ್ಯಾಪ್ತಿಯ ಮತದಾರರಾಗಿದ್ದ ಪ್ರಕಾಶ್‌ ರಾಜ್‌, 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ