
ಸಾರಿಗೆ ನೌಕರರಿಗೂ‘HRMS’: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಅನುಷ್ಠಾನ
ಹುಬ್ಬಳ್ಳಿ: ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನೌಕರಸ್ನೇಹಿ ವ್ಯವಸ್ಥೆ ಹಾಗೂ ಕಾರ್ಯಕ್ಷಮತೆ ವೃದ್ಧಿಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (ಎನ್‌ಡಬ್ಲೂಕೆಆರ್‌ಟಿಸಿ) ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್) ಅನುಷ್ಠಾನಕ್ಕೆ ಮುಂದಾಗಿದೆ.
ಸದ್ಯ ಈ ಡಿಜಿಟಲ್ ವ್ಯವಸ್ಥೆಯ ಪ್ರಾಯೋಗಿಕತೆ ಯಶಸ್ವಿಯಾಗಿದ್ದು, ಮೊದಲ ಹಂತದಲ್ಲಿ ಹುಬ್ಬಳ್ಳಿ ಕೇಂದ್ರ ಕಚೇರಿ ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗಿದೆ. ಸೆಪ್ಟೆಂಬರ್‌ನಿಂದ ಸಂಸ್ಥೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲೂ ಎಚ್‌ಆರ್‌ಎಂಎಸ್ ಲಭ್ಯವಾಗಲಿದ್ದು, ಸಾರಿಗೆ ನೌಕರರಿಗೆ ಆ್ಯಪ್ ಮೂಲಕ ಬೆರಳಂಚಿನಲ್ಲೇ ಸಮಗ್ರ ಮಾಹಿತಿ ದೊರೆಯಲಿದೆ. ಕೆಎಸ್‌ಆರ್‌ಟಿಸಿ ಹೊರತುಪಡಿಸಿ ಸಾರಿಗೆ ಇಲಾಖೆಯಲ್ಲಿ ಎಚ್‌ಆರ್‌ಎಂಎಸ್ ಸಾಫ್ಟ್‌ವೇರ್ ಹಾಗೂ ಆ್ಯಪ್ ಪರಿಚಯಿಸಿದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎನ್‌ಡಬ್ಲ್ಯುಕೆಆರ್‌ಟಿಸಿ ಪಾತ್ರವಾಗಲಿದೆ.
ಹಾಜರಾತಿ, ವೇತನ ಪ್ರಕ್ರಿಯೆ, ಬಡ್ತಿ, ವರ್ಗಾವಣೆ, ರಜೆ ನಿರ್ವಹಣೆ, ಸೇವಾ ದಾಖಲಾತಿ, ಆಡಳಿತಾತ್ಮಕ ಪ್ರಕ್ರಿಯೆ ಹೀಗೆ ಎಲ್ಲದರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ ಸುಲಭ ನಿರ್ವಹಣೆಗೆ ಸಹಕಾರಿಯಾಗುವ ಸಾಫ್ಟ್‌ವೇರ್ ಹಾಗೂ ಆ್ಯಪ್ ಇದಾಗಿದೆ. ಇದರಿಂದ ಮಾನವ ಸಂಪನ್ಮೂಲ, ಖರ್ಚು– ವೆಚ್ಚ ಉಳಿತಾಯದ ಜೊತೆಗೆ ಸಾರಿಗೆ ನೌಕರರು ಪ್ರತಿಯೊಂದು ಮಾಹಿತಿಗಾಗಿಯೂ ಕಚೇರಿಗೆ ಅಲೆದಾಡುವುದು, ವಾರಗಟ್ಟಲೇ ಕಾಯುವುದು ತಪ್ಪಲಿದೆ.
ಬೆಂಗಳೂರಿನ ‘ಕ್ಯಾರಿಟರ್’ ಕಂಪನಿಯು ಎಚ್‌ಆರ್‌ಎಂಎಸ್ ತಂತ್ರಾಂಶ ಸಿದ್ಧಪಡಿಸಿದ್ದು, ನಿರ್ವಹಣೆಗಾಗಿ 5 ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ ಸೇರಿ 6 ಜಿಲ್ಲೆ, 9 ವಿಭಾಗಗಳನ್ನು ಒಳಗೊಂಡಿದೆ. ಸಂಸ್ಥೆಯಲ್ಲಿ 22 ಸಾವಿರ ನೌಕರರಿದ್ದು, ಈವರೆಗೂ ಅವರ ಎಲ್ಲ ದಾಖಲೆಗಳನ್ನು ಕಾಗದದಲ್ಲೇ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ಪ್ರತಿಯೊಂದು ಕೆಲಸವು ನಿಧಾನವಾಗಿ ನಡೆಯುತ್ತಿತ್ತು. ಇದೀಗ ಸಾರಿಗೆ ನೌಕರರು ಬಳಸಲು ಎಚ್‌ಆರ್‌ಎಂಎಸ್ ಆ್ಯಪ್ ಹಾಗೂ ಆಡಳಿತದ ದೃಷ್ಟಿಯಿಂದ ಕಚೇರಿಗಳಲ್ಲಿ ದಾಖಲೆಗಳ ನಿರ್ವಹಣೆಗೆ ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ. ಇದರಿಂದ ಸಮಯ, ಕಾಗದ ಬಳಕೆ ಉಳಿತಾಯದ ಜೊತೆಗೆ ಎಲ್ಲ ಪ್ರಕ್ರಿಯೆಗಳು ವೇಗವಾಗಿ ನಡೆಯಲಿವೆ. ಅಲ್ಲದೆ, ನಿಖರ ಮಾಹಿತಿ ದೊರೆಯಲಿದೆ’ ಎಂದು ಮುಖ್ಯ ಗಣಕ ವ್ಯವಸ್ಥಾಪಕ ಶ್ರೀನಾಥ ಜಿ. ಮಾಹಿತಿ ನೀಡಿದರು.
ಮೊಬೈಲ್ ಆ್ಯಪ್‌ನಲ್ಲೇ ನಿರ್ವಹಣೆ
‘ಈವರೆಗೆ ಹಾಜರಾತಿ ನಮೂದು, ರಜೆ, ಬಡ್ತಿ, ಅಪಘಾತ ಹಾಗೂ ಅಶಿಸ್ತು ನಡವಳಿಕೆ ಕಂಡುಬಂದರೆ ನೌಕರರ ವಿರುದ್ಧ ಕ್ರಮ, ವರ್ಗಾವಣೆ, ಇವೆಲ್ಲವೂ ಮ್ಯಾನ್ಯುಯೆಲ್ ಆಗಿ ನಡೆಯುತ್ತಿತ್ತು. ಇನ್ನು ಮುಂದೆ ಎಚ್‌ಆರ್‌ಎಂಎಸ್ ಮೂಲಕವೇ ನಿರ್ವಹಿಸಲಾಗುತ್ತದೆ. ಪ್ರತಿದಿನದ ಹಾಜರಾತಿ, ತಮಗೆ ಯಾವ ದಿನ ರಜೆ ಬೇಕು ಎಂಬುದನ್ನು ನೌಕರರು ಎಚ್‌ಆರ್‌ಎಂಎಸ್ ಮೊಬೈಲ್ ಆ್ಯಪ್‌ನಲ್ಲೇ ನಮೂದಿಸಬೇಕು. ಅದನ್ನಾಧರಿಸಿ ವಿಭಾಗ ಮತ್ತು ಘಟಕ ಮುಖ್ಯಸ್ಥರು ರಜೆ ಮಂಜೂರು ಮಾಡುತ್ತಾರೆ’ ಎಂದು ಕೇಂದ್ರ ಕಚೇರಿಯ ಇಲಾಖಾ ಮುಖ್ಯಸ್ಥ ಎಂ.ಬಿ.ಕಪಲಿ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-24-1890026057