
Sandalwood: ‘ನೂರು ಜನ್ಮಕು... ’ ಹಿಂದಿನ ಕಥೆ
ಸುಮಾರು ಮೂರು ದಶಕಗಳ ಹಿಂದೆ ತೆರೆಕಂಡ ‘ಅಮೆರಿಕಾ! ಅಮೆರಿಕಾ!!’ ಸಿನಿಮಾದ ‘ನೂರು ಜನ್ಮಕು..ನೂರಾರು ಜನ್ಮಕೂ’ ಹಾಡು ಇನ್ನೂ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ಈ ಹಾಡಿನ ಟ್ಯೂನ್ ಕೇಳಿದಾಕ್ಷಣ ಹಾಡು ತನ್ನಿಂದ ತಾನೇ ಹರಿಯಲಾರಂಭಿಸುತ್ತದೆ. ಈ ಹಾಡಿನ ಹಿಂದಿರುವ ಕಥೆಯನ್ನು ಇತ್ತೀಚೆಗೆ ‘ಅಮೆರಿಕಾ ಅಮೆರಿಕಾ–2’ ಚಿತ್ರದ ‘ರನ್ ರನ್’ ಹಾಡಿನ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ಮೆಲುಕು ಹಾಕಿದರು.
ಟ್ಯೂನ್ 49: ‘ನನ್ನ ಈ ಸಿನಿಪಯಣ ಆರಂಭವಾಗಿದ್ದು ಒಂದು ಸ್ಕ್ರಾಚ್ ಟ್ಯೂನ್‌ನಿಂದ’ ಎಂದು ಮಾತು ಆರಂಭಿಸಿದ ಮನೋಮೂರ್ತಿ, ‘ಆ ಟ್ಯೂನ್ ಸಂಖ್ಯೆಯೇ 49. ಅದು ‘ನೂರು ಜನ್ಮಕು ..’ ಟ್ಯೂನ್. ಅಮೆರಿಕದ ಸನ್ನಿವೇಲ್‌ನಲ್ಲಿದ್ದಾಗ ಸುಮಾರು 75 ಸ್ಕ್ರಾಚ್ ಟ್ಯೂನ್‌ಗಳನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ಬಳಿ ತೆಗೆದುಕೊಂಡು ಹೋಗಿದ್ದೆ. ನಾಗತಿಹಳ್ಳಿ ಕಾಫಿ ಮಾಡುತ್ತಾ ಇವುಗಳನ್ನು ಕೇಳುತ್ತಿದ್ದರು. ನಾನು ಒಂದೊಂದು ಟ್ಯೂನ್ ಹಾಕಿದಂತೆ ‘ನೆಕ್ಸ್ಟ್..ನೆಕ್ಸ್ಟ್’ ಎನ್ನುತ್ತಿದ್ದರು. ಈ ಟ್ಯೂನ್ ನಂಬರ್ 49 ಕೇಳಿದ ಬಳಿಕ ‘ಇನ್ನೊಮ್ಮೆ..ಇನ್ನೊಮ್ಮೆ’ ಎಂದರು. ಆ ಸಂದರ್ಭದಲ್ಲಿ ನನಗೊಂದು ಸಣ್ಣ ಅವಕಾಶ ಸಿಗುವ ಭರವಸೆ ಮೂಡಿತು. ಅಲ್ಲಿಂದ ನನ್ನ ಹಾಗೂ ನಾಗತಿಹಳ್ಳಿ ಅವರ ಪಯಣ ಇಲ್ಲಿಯವರೆಗೂ ಸಾಗಿಬಂದಿದೆ’ ಎಂದರು.
ಆಕಾಶದಲ್ಲಿ ಬರೆದ ಸಾಹಿತ್ಯ: ಹಾಡಿನ ಸಾಹಿತ್ಯದ ಕುರಿತು ಮಾತನಾಡಿದ ನಾಗತಿಹಳ್ಳಿ, ‘ಇದು ಸ್ಯಾನ್‌ಫ್ರಾನ್ಸಿಸ್ಕೋದಿಂದ ಸಿಂಗಪುರದ ವಿಮಾನಯಾನದಲ್ಲಿ ಬರೆದ ಹಾಡು. ಅಲ್ಲಿ ಬರೆದಿದ್ದು ಆಕಸ್ಮಿಕ ಅಷ್ಟೇ. ಭಾರತಕ್ಕೆ ಬರುವ ಹಿಂದಿನ ದಿನ ‘ಟ್ಯೂನ್ 49’ ಕೊಟ್ಟಿದ್ದರು. ಇದರೊಳಗೆ ಒಂದು ಯಾತನೆ, ಪ್ರೇಮದ ನಿವೇದನೆ, ಒಂದು ಜೀವ ಇದೆ ಎನ್ನುವುದು ನನ್ನ ಈ ಬರೆಯುವ ಕೈಗಳಿಗೆ ತಿಳಿಯಿತು. ‘ಸೂರ್ಯ’ನ ಭಾವುಕತೆಗೆ ಇದು ಸೂಕ್ತವಾಗಿತ್ತು. ಆ ಕಾಲದಲ್ಲಿ ಬೆಂಗಳೂರಿಗೆ ನೇರ ವಿಮಾನ ಸಂಪರ್ಕವಿರಲಿಲ್ಲ. ಸಿಂಗಪುರಕ್ಕೆ ತೆರಳಿ ಅಲ್ಲಿಂದ ಬರಬೇಕು. ನಾನು ಕಿಟಕಿ ಬದಿಯ ಪ್ರಯಾಣಿಕ. ಆ ಸಂದರ್ಭದಲ್ಲಿ ಅತಿ ಸುದೀರ್ಘವಾದ ವಿಮಾನ ಪಯಣದಲ್ಲಿ ಒಂದೊಳ್ಳೆಯ ಸೂರ್ಯೋದಯ–ಸೂರ್ಯಾಸ್ತ, ಸುಂದರವಾದ ಮೋಡಗಳು ಸೆಳೆದವು. ಅಲ್ಲಿ ನನಗೆ ಈ ಹಾಡಿನ ಪದಗಳ ಲಹರಿ ಹರಿಯಿತು. ನಾನು ಗದ್ಯ ಬರಹಗಾರ. ಆದರೆ ಅಪರೂಪಕ್ಕೆ ನನ್ನೊಳಗೆ ಕವಿ ಹುಟ್ಟುತ್ತಾನೆ. ನನ್ನ ಗದ್ಯದಲ್ಲಿ ಪದ್ಯ ಇದೆ ಎನ್ನುತ್ತಾರೆ. ಸಿಂಗಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ಅದರ ಚಕ್ರಗಳು ‘ಗಡ ಗಡ..’ ಎನ್ನುತ್ತಾ ನೆಲಕ್ಕೆ ಸ್ಪರ್ಶಿಸಿದ ಕ್ಷಣದಲ್ಲಿ ಹಾಡು ಮುಗಿದಿತ್ತು. ನಾನು ಹಾಡಿನೊಳಗೆ ಅಷ್ಟೊಂದು ಕಳೆದು ಹೋಗಿದ್ದೆ. ಬಳಿಕ ಮನೋಮೂರ್ತಿ ಅವರು ಭಾರತಕ್ಕೆ ಬಂದು ಪುಟಾಣಿ ಸ್ಟುಡಿಯೊದಲ್ಲಿ ರೆಕಾರ್ಡ್ ಮಾಡಿದರು. ರಾಜೇಶ್ ಕೃಷ್ಣನ್ ಕೂಡಾ ಹೊಸಬ. ತಂತ್ರಜ್ಞರೂ ಹೊಸಬರು. ಹೀಗೆ ಸೃಷ್ಟಿಯಾಯಿತು ‘ನೂರು ಜನ್ಮಕು..’ ಎನ್ನುತ್ತಾ ಅವರು ಮಾತಿಗೆ ವಿರಾಮವಿತ್ತರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-51-1233337460