PV Web Exclusive: ಇದು ದ್ರಾಕ್ಷಿಯಲ್ಲ, ಕಾಡಿಂದ ತಂದ ಈ ಹಣ್ಣು ಕಾಸನ್ನೂ ತಂತು!

PV Web Exclusive: ಇದು ದ್ರಾಕ್ಷಿಯಲ್ಲ, ಕಾಡಿಂದ ತಂದ ಈ ಹಣ್ಣು ಕಾಸನ್ನೂ ತಂತು!

PV Web Exclusive: ಇದು ದ್ರಾಕ್ಷಿಯಲ್ಲ, ಕಾಡಿಂದ ತಂದ ಈ ಹಣ್ಣು ಕಾಸನ್ನೂ ತಂತು!

ಕೆಂಪು ದ್ರಾಕ್ಷಿ (ರೆಡ್ ಗ್ಲೋಬ್‌) ಗೊಂಚಲಿನಂತೆ ಕಾಣುವ ಈ ಹಣ್ಣು ನೋಟದಲ್ಲೇ ಕಣ್ಸೆಳೆಯುತ್ತದೆ. ಗುಲಾಬಿ ಮಿಶ್ರಿತ ಕೆಂಬಣ್ಣದ ಈ ಹಣ್ಣು ಗೊಂಚಲು ಗೊಂಚಲಾಗಿ ಮರದಲ್ಲಿ ಜೋತಾಡುವುದನ್ನು ನೋಡುವುದೇ ಸೊಬಗು. ಪಶ್ಚಿಮಘಟ್ಟದ ಸೆರಗಿನಲ್ಲಿ ನೆರಳು ಆಶ್ರಯಿಸಿ ಬೆಳೆಯುವ ಹಣ್ಣು ಈಗ ಕಾಡಿನಿಂದ ನಾಡಿಗೆ ಬಂದು ಪರಿಮಳ ಸೂಸುತ್ತಿದೆ. 

ಇದರ ಹೆಸರು ಕೋಳಿಜುಟ್ಟು ಅಥವಾ ಕೋಳಿ ಕುಕ್ಕೆ. ಸ್ಥಳೀಯವಾಗಿ ಇದಕ್ಕೆ ಮೈಂದಪುಳಿ ಎಂತಲೂ ಹೇಳುತ್ತಾರೆ. ಕೋಳಿಜುಟ್ಟು ಹಣ್ಣಿನ ವೈಜ್ಞಾನಿಕ ಹೆಸರು baccaurea courtallensis. ಪಶ್ಚಿಮ ಘಟ್ಟದಲ್ಲಿ ಅಳಿವಿನಿಂಚಿನಲ್ಲಿರುವ ಸಸ್ಯವಿದು. ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಈ ತಳಿಯನ್ನು ‘Near Threatened’ ಎಂದು ಗುರುತಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯ ವಾಸ್ತುತಜ್ಞ ಎಸ್.ಎಂ. ಪ್ರಸಾದ್ ಮುನಿಯಂಗಳ ಅವರು ಇದನ್ನು ತೋಟದ ಅಂಚಿನಲ್ಲಿ ನಾಟಿ ಮಾಡಿದ್ದು, ನಾಲ್ಕು ವರ್ಷದ ಗಿಡ ಈಗ ಮೈತುಂಬ ಹಣ್ಣು ಹೊದ್ದುಕೊಂಡು ಗೆಜ್ಜೆ ಕಟ್ಟಿದಂತೆ ಕಂಗೊಳಿಸುತ್ತಿದೆ. 

‘ತೆಂಗು– ಕಂಗು ಮುಖ್ಯ ಬೆಳೆಗಳು. ಪರ್ಯಾಯ ಬೆಳೆಗಳ ಬಗ್ಗೆ ರೈತರು ಯೋಚಿಸಲೇ ಬೇಕಲ್ವ. ಸಾಮಾನ್ಯವಾಗಿ ತೋಟದಲ್ಲಿ ಬೆಳೆಸುವ ಪರ್ಯಾಯ ಬೆಳೆಗಳಿಗಿಂತ ಭಿನ್ನವಾದ ಗಿಡಗಳನ್ನು ನಾಟಿ ಮಾಡಬೇಕೆಂದು ಯೋಚಿಸುತ್ತಿದ್ದೆ. ಒಮ್ಮೆ ಯೂಟ್ಯೂಬ್ ನೋಡುತ್ತಿರುವಾಗ ಕೇರಳ ವಯನಾಡ್‌ನ ಕೃಷಿಕರೊಬ್ಬರು ಕೋಳಿಜುಟ್ಟು ಬೆಳೆಸಿ ಉತ್ತಮ ಫಸಲು ತೆಗೆದಿರುವ ಬಗ್ಗೆ ಮತ್ತು ಇದನ್ನು ಪ್ರಶಂಸಿಸಿ ಅಲ್ಲಿನ ಕೃಷಿ ಸಚಿವರು ಆ ಕೃಷಿಕರ ಮನೆಗೇ ಬಂದು ಪ್ರಶಸ್ತಿ ನೀಡಿರುವ ವಿಷಯ ಗಮನ ಸೆಳೆದಿತ್ತು. ಇದಕ್ಕೆ ಸರಿಯಾಗಿ, ಸ್ಥಳೀಯ ಅರಣ್ಯ ನರ್ಸರಿಗೆ ಗಿಡ ಖರೀದಿಸಲು ಹೋದಾಗ, ಕೋಳಿಜುಟ್ಟು ಮುಂದಿನ ಸಾಲಿನಲ್ಲಿ ಕುಳಿತು, ನಗೆ ಬೀರಿತು. 20 ಗಿಡಗಳನ್ನು ಖರೀದಿಸಿ ತಂದು, ತೋಟದ ಅಂಚಿನಲ್ಲಿ ನಾಟಿ ಮಾಡಿದ್ದೆ’ ಎನ್ನುತ್ತಾರೆ ಎಸ್.ಎಂ. ಪ್ರಸಾದ್.

2022ರ ಜೂನ್‌ನಲ್ಲಿ ಅವರು ನಾಟಿ ಮಾಡಿರುವ ಗಿಡಗಳಲ್ಲಿ ಒಂದೆರಡು ಗಿಡಗಳು ಬದುಕಿಲ್ಲ. ಕಳೆದ ವರ್ಷ ಒಂದು ಗಿಡ 50–60 ಕಾಯಿ ಬಿಟ್ಟಿತ್ತು. ಹಣ್ಣನ್ನು ನೋಡುವ ತವಕದಲ್ಲಿ, ಒಂದಿಷ್ಟು ಕಾಯಿಗಳನ್ನೇ ಕೊಯ್ದು ಪರೀಕ್ಷಿಸಿದ್ದೇ ಆಯಿತು. ಪೂರ್ಣ ಬಲಿಯುವಷ್ಟರಲ್ಲಿ ಅರ್ಧದಷ್ಟು ಕಾಯಿಗಳು ಖಾಲಿಯಾಗಿದ್ದವು. ಈ ವರ್ಷ ಇನ್ನೊಂದು ಗಿಡ ಫಸಲು ನೀಡಿದೆ. ಸರಾಸರಿ 25–30 ಕೆ.ಜಿ.ಯಷ್ಟು ಇಳುವರಿ ಬಂದಿದ್ದು, ಕಾಯಿ ಬಲಿತು ಈಗ ಎಲ್ಲವೂ ಕೆಂಪು ಬಣ್ಣ ಮೆತ್ತಿಕೊಂಡಿವೆ.

ಪ್ರಸಾದ್ ಅವರು ಹೇಳುವಂತೆ, ‘ಕೋಳಿಜುಟ್ಟು ಮರದಲ್ಲಿ ಗಂಡು ಮತ್ತು ಹೆಣ್ಣು ಜಾತಿ ಇರುತ್ತವೆ. ಗಂಡು ಮರ ಹೂಗಳನ್ನು ಮಾತ್ರ ಬಿಡುತ್ತದೆ. ಹೆಣ್ಣು ಮರ ಕಾಯಿ ಬಿಡುತ್ತದೆ. ತೋಟದಲ್ಲಿ ಎರಡೂ ಮರಗಳು ಇದ್ದಾಗ ಮಾತ್ರ ಫಲ ಬರುತ್ತದೆ. ಗಿಡಗಳ ಪ್ರತ್ಯೇಕತೆ ಗುರುತಿಸಲು ಸಾಧ್ಯವಾಗಿಲ್ಲ, ಆದರೆ, ಈ ಬಾರಿ ತುಸು ಚೂಪಾದ ಎಲೆ ಇರುವ ಗಿಡಕ್ಕೆ ಕಾಯಿಗಳು ಬಂದಿವೆ. ಮಾರ್ಚ್ ಕೊನೆಯಲ್ಲಿ ಹೂ ಅರಳಿದರೆ, ಕಾಯಿ ಮೊಳೆತು, ಬಲಿತು ಹಣ್ಣಾಗುವಾಗ ಜುಲೈ ತಿಂಗಳು ಅರ್ಧ ದಾಟುತ್ತದೆ.’  

‘ಹುಳಿ–ಸಿಹಿ ಮಿಶ್ರಿತ ಹಣ್ಣನ್ನು ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ದೊರಗು ಮೈಯ ಒಳಗೆ ಬಿಳಿಯಾದ ಮೃದು ತಿರುಳು ಇರುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲಿನ ಜನರಿಗೆ ಈ ಹಣ್ಣು ಪರಿಚಿತ. ಅದರಲ್ಲೂ ಸುಬ್ರಹ್ಮಣ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ದಾರಿಯ ಬಾಯಿಚಪಲ ತೀರಿಸುವ ಹಣ್ಣು ಇದು. ಸುಬ್ರಹ್ಮಣ್ಯ– ಗುತ್ತಿಗಾರು ನಡುವಿನ ಅರಣ್ಯದಲ್ಲಿ ಈ ಹಣ್ಣಿನ ಮರಗಳಿವೆ. ಈ ಬಾರಿ ಸುಬ್ರಹ್ಮಣ್ಯದಲ್ಲಿ ಕಾಡಿನಿಂದ ತಂದ ಈ ಹಣ್ಣನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನೂ ಕಂಡಿದ್ದೇನೆ. ಕೆ.ಜಿ.ಯೊಂದಕ್ಕೆ ₹100ರಂತೆ ಮಾರಾಟವಾಗಿದೆ. ಆದರೆ, ಕೇರಳದಲ್ಲಿ ಇದಕ್ಕೆ ಉತ್ತಮ ದರವಿದೆ. ಕೆ.ಜಿ.ಯೊಂದಕ್ಕೆ ₹450ರವರೆಗೂ ಸಿಗುತ್ತಿದೆ. ಅಲ್ಲಿ ಇದನ್ನು ರೈತರು ವಾಣಿಜ್ಯಿಕವಾಗಿ ಬೆಳೆಯುತ್ತಾರೆ’ ಎನ್ನುತ್ತಾರೆ ಪ್ರಸಾದ್. 

‘ಮೈಂದಪುಳಿ ಕಾಯಿಯಿಂದ ಉಪ್ಪಿನಕಾಯಿ ತಯಾರಿಸಬಹುದು. ಜ್ಯೂಸ್, ಜಾಮ್, ಜೆಲ್ಲಿ ಕೂಡ ಸಿದ್ಧಪಡಿಸಬಹುದು. ವಿಟಮಿನ್ ಸಿ ಹೇರಳವಾಗಿರುವ ಇದರಲ್ಲಿ ಔಷಧೀಯ ಗುಣಗಳು ಇವೆ. ಹೆಚ್ಚು ಸಂಶೋಧನೆಗಳು ನಡೆದಲ್ಲಿ, ಭವಿಷ್ಯದಲ್ಲಿ ಔಷಧಕ್ಕೆ ಬಳಕೆಯಾಗಬಹುದೆಂಬ ಉದ್ದೇಶದಿಂದ ಇವುಗಳನ್ನು ನಾಟಿ ಮಾಡಿದ್ದೇನೆ. ತೋಟದ ಸುತ್ತಲೂ ಸುಮಾರು 100 ಗಿಡಗಳು ಇವೆ. ನಾವು ಅಡಿಕೆ ತೋಟಕ್ಕೆ ಹಾಕುವ ‘ಮಲೇಷಿಯಾ ಸೂಪರ್ ಆ್ಯಶ್’ ಅನ್ನು ಈ ಗಿಡಗಳಿಗೂ ಹಾಕಿದ್ದರಿಂದ ಒಳ್ಳೆ ದಷ್ಟಪುಷ್ಟವಾಗಿ ಮೇಲೆದ್ದಿವೆ. ಇದೇ ಕಾರಣಕ್ಕೆ ಹಣ್ಣುಗಳೂ ಹೆಚ್ಚು ಸಿಹಿ ಅಂಶ ಹೊಂದಿರಬಹುದು’ ಎಂದು ಅವರು ಅಭಿಪ್ರಾಯ ಹಂಚಿಕೊಂಡರು. 

ಬಳಂಜ ಫಾರ್ಮ್‌ನ ಅನಿಲ್ ಬಳಂಜ ಅವರು ಆರೆಂಟು ವರ್ಷಗಳ ಹಿಂದೆಯೇ ಕಾಡಿನ ಈ ಗಿಡವನ್ನು ಬೆಳೆಸಿ ಫಲ ಪಡೆದಿದ್ದಾರೆ.

ನರ್ಸರಿಗೆ ತಂದರು: ಪಂಜ ಸುತ್ತಮುತ್ತ ಕಾಡಿನಲ್ಲಿ ಓಡಾಡುವಾಗ ಈ ಮರದ ಬಗ್ಗೆ ಆಕರ್ಷಿತರಾದ ಪಂಜ ವಲಯದ ಅಂದಿನ ಆರ್‌ಎಫ್‌ಒ ಪ್ರವೀಣ್ ಕುಮಾರ್ ಶೆಟ್ಟಿ, ಇವುಗಳನ್ನು ಅರಣ್ಯ ನರ್ಸರಿಯಲ್ಲಿ ಬೆಳೆಸುವ ಪ್ರಯತ್ನ ಮಾಡಿದರು. ಪ್ರಸ್ತುತ ಸುಳ್ಯ, ಸುಬ್ರಹ್ಮಣ್ಯ ಕಲ್ಲಾಜೆ, ಪಂಜ ಏನಕಲ್ಲು ಅರಣ್ಯ ನರ್ಸರಿಗಳಲ್ಲಿ ಕೋಳಿಜುಟ್ಟು ಸಸಿಗಳನ್ನು ಬೆಳೆಸಿ, ಅರಣ್ಯದಲ್ಲಿ ನಾಟಿ ಮಾಡಲಾಗುತ್ತಿದೆ. ಒಂದು ದಶಕದಲ್ಲಿ ನರ್ಸರಿಯಲ್ಲಿ ಬೆಳೆಸಿದ ಗಿಡಗಳ ಸಂಖ್ಯೆ ಲಕ್ಷ ದಾಟಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 

‘ಪಂಜ ವಲಯ ಕಾಡಿನಲ್ಲಿ ಸುತ್ತಾಡುವಾಗ ಕೋಳಿಜುಟ್ಟು ಮರ ನನ್ನನ್ನು ಸೆಳೆಯಿತು. ಆ ವೇಳೆ ನನಗೆ ಇದರ ವೈಜ್ಞಾನಿಕ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಆಗ ಪಿಲಿಕುಳದಲ್ಲಿದ್ದ ವಿಜ್ಞಾನಿ ಸೂರ್ಯಪ್ರಕಾಶ್ ಶೆಣೈ, ರಾಮಕೃಷ್ಣ ಮರಾಠೆ ಅವರ ಸಹಕಾರದಲ್ಲಿ ಸಮಗ್ರ ಮಾಹಿತಿ ಸಿಕ್ಕಿತು. ಆ ನಂತರ ನರ್ಸರಿಯಲ್ಲಿ ಈ ಗಿಡ ಬೆಳೆಸಲು ಯೋಚಿಸಿದೆವು. 2016ರಿಂದ ಈವರೆಗೂ ಪ್ರತಿವರ್ಷ ಇಲಾಖೆ ನರ್ಸರಿಯಲ್ಲಿ ಈ ಸಸಿಗಳನ್ನು ಬೆಳೆಸಲಾಗುತ್ತಿದೆ. ಬೀಜ ಹಾಕಿ ಬೆಳೆಸುವ ಗಿಡ, ನಾಟಿ ಮಾಡಿದ ಮೇಲೆ ಮರವಾಗಿ 15–25 ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಕಾಂಡದಿಂದ ಹೂಗಳು ಅರಳಿ, ಹಣ್ಣು ಕೊಡುತ್ತವೆ’ ಎನ್ನುತ್ತಾರೆ ಪ್ರಸ್ತುತ ಉಡುಪಿಯಲ್ಲಿ ಅರಣ್ಯ ವಿಚಕ್ಷಣಾ ದಳದ ಅಧಿಕಾರಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ. 

‘ಕಾಡುಪ್ರಾಣಿಗಳಿಗೆ ಇದು ಪ್ರಿಯವಾದ ಹಣ್ಣು. ಮಂಗಗಳಿಗಂತೂ ಅಚ್ಚುಮೆಚ್ಚು. ತೋಟದ ಅಂಚಿನಲ್ಲಿ ಇವುಗಳನ್ನು ನಾಟಿ ಮಾಡಿದರೆ, ಮಂಗಗಳ ಹಾವಳಿಯಿಂದ ತೋಟ ರಕ್ಷಿಸಿಕೊಳ್ಳಬಹುದು’ ಎಂಬುದು ಅವರು ನೀಡುವ ಸಲಹೆ. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ