
ದಾವಣಗೆರೆ |ಮಳೆ ಬಂದರೂ ದೂರಾಗಿಲ್ಲ ‘ಬರದ ಛಾಯೆ’: ಆತಂಕ ಮೂಡಿಸುವಂತಿದೆ ಐಎಂಡಿ ವರದಿ
ದಾವಣಗೆರೆ: ಜುಲೈ ಕೊನೆಯ ವಾರದಿಂದ ಜಿಲ್ಲೆಯಾದ್ಯಂತ ಆಗಾಗ ವರುಣ ಆರ್ಭಟಿಸುತ್ತಿದ್ದರೂ, ‘ಬರದ ಛಾಯೆ’ ಮಾತ್ರ ದೂರವಾಗಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ರೈತರು ಕಡಿಮೆ ನೀರು ಬೇಡುವ ಅಲ್ಪಾವಧಿಯ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಆದರೂ, ಬಿತ್ತನೆ ಕಾರ್ಯ ಅರ್ಧದಷ್ಟೂ ಪೂರ್ಣಗೊಂಡಿಲ್ಲ.
ಜಿಲ್ಲೆಯಲ್ಲಿ ಮಳೆಯ ಕೊರತೆ ಸದ್ಯ ಶೇ 37ರಷ್ಟಿದೆ. ಜೂನ್ ಹಾಗೂ ಜುಲೈನಲ್ಲಿ ಮಳೆ ಕೊರತೆಯ ಪ್ರಮಾಣ ಕ್ರಮವಾಗಿ ಶೇ 53 ಹಾಗೂ ಶೇ 38ರಷ್ಟಿತ್ತು. ಜುಇಲೈ ಅಂತ್ಯದಿಂದಲೇ ಜಿಲ್ಲೆಯ ವಿವಿಧೆಡೆ ವರ್ಷಧಾರೆ ಆಗುತ್ತಿರುವ ಕಾರಣ ಕೊರತೆಯ ಪ್ರಮಾಣ ಕೊಂಚ ತಗ್ಗಿದೆ. ಆದರೆ, ‘ಬರಪೀಡಿತ’ ಎಂಬ ಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ.
ಜಿಲ್ಲೆಯ ಪೈಕಿ ಚನ್ನಗಿರಿ ತಾಲ್ಲೂಕಿನಲ್ಲಿ ಮಳೆಯ ಕೊರತೆ ಪ್ರಮಾಣ (ಶೇ 48ರಷ್ಟು) ಇದೆ. ಇನ್ನುಳಿದಂತೆ, ಹೊನ್ನಾಳಿ ತಾಲ್ಲೂಕಿನಲ್ಲಿ ಶೇ 47ರಷ್ಟು ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಶೇ 46ರಷ್ಟು ಮಳೆ ಕೊರತೆ ಉಂಟಾಗಿದೆ. ಹರಿಹರ ತಾಲ್ಲೂಕಿನಲ್ಲಿ ಶೇ 26ರಷ್ಟು, ದಾವಣಗೆರೆ ತಾಲ್ಲೂಕಿನಲ್ಲಿ ಶೇ 23ರಷ್ಟು, ಜಗಳೂರು ತಾಲ್ಲೂಕಿನಲ್ಲಿ ಶೇ 21ರಷ್ಟು ವರ್ಷಾಧಾರೆಯ ಕೊರತೆ ಕಾಡುತ್ತಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಿದೆ. ಮಳೆ ಕೊರತೆ ಉಂಟಾಗಲಿರುವ ಜಿಲ್ಲೆಗಳ ಪೈಕಿ ದಾವಣಗೆರೆಯೂ ಸೇರಿರುವುದು ರೈತರ ಪಾಲಿಗೆ ಆತಂಕಕಾರಿಯಾಗಿದೆ. ಈ ಬಗ್ಗೆ ಐಎಂಡಿ ವರದಿ ನೀಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಆಗಸ್ಟ್ 11ರ ವರೆಗೂ ಜಿಲ್ಲೆಯಲ್ಲಿ ಕೇವಲ ಶೇ 40ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 2,14,938 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಇದುವರೆಗೂ 84,760 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
49,303 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 22,785 ಹೆಕ್ಟೇರ್‌ನಲ್ಲಿ ರಾಗಿ, 4,340 ಹೆಕ್ಟೇರ್‌ನಲ್ಲಿ ಭತ್ತ, 3,253 ಹೆಕ್ಟೇರ್‌ನಲ್ಲಿ ತೊಗರಿ ಹಾಗೂ 1,482 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ, ಹತ್ತಿ, ಸೋಯಾಬೀನ್ ಹಾಗೂ ಇನ್ನಿತರ ಬೆಳೆಗಳನ್ನೂ ಅಲ್ಪ ಪ್ರಮಾಣದಲ್ಲಿ ಬಿತ್ತಲಾಗಿದೆ. ಮಳೆ ಕೊರತೆಯ ಕಾರಣಕ್ಕೆ ರಾಗಿಯನ್ನೇ ಹೆಚ್ಚಿನ ರೈತರು ನೆಚ್ಚಿಕೊಂಡಿದ್ದಾರೆ ಎನ್ನುತ್ತಿವೆ ಕೃಷಿ ಇಲಾಖೆಯ ಅಂಕಿ– ಅಂಶಗಳು.
‘ರಾಗಿ, ಮೆಕ್ಕೆಜೋಳ, ಕುಂಬಳ ಕಾಯಿ ಹೆಚ್ಚು ಬಿತ್ತನೆಯಾಗಿದೆ. ಕಳೆ ತೆಗೆಯುವ, ರಸಗೊಬ್ಬರ ಹಾಕುವ ಹಾಗೂ ಎಡೆಕುಂಟೆ ಹಾಕುವ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದ ರೈತ ಕೆ.ಬಿ. ರವಿ ಹೇಳಿದರು.
‘ಸಚಿವರು ಬರ ಪರಿಶೀಲನೆ ನಡೆಸಲಿ’
‘ಜಿಲ್ಲೆಯ ಕೆಲವೆಡೆ ಪ್ರಸಕ್ತ ವರ್ಷ ಹದವಾದ ಮಳೆ ಸುರಿದಿಲ್ಲ. ನೂತನ ಸಚಿವ ಕೆ.ಎಸ್. ಬಸವಂತಪ್ಪ ಅವರು ಮಾಯಕೊಂಡ ಕ್ಷೇತ್ರದಲ್ಲಿ ಮಾತ್ರ ಬರ ಪರಿಶೀಲನೆ ನಡೆಸಿದ್ದಾರೆ.
ಮತ್ತೊಬ್ಬ ಹಿರಿಯ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸರ್ಕಾರ ಜಿಲ್ಲೆಯ ಬರ ವೀಕ್ಷಣೆಗೆ ನೇಮಿಸಿದ್ದರೂ ಅವರು ಜಿಲ್ಲೆಯ ಯಾವ ಭಾಗಕ್ಕೂ ಬಂದಿಲ್ಲ. ದಾವಣಗೆರೆಗೂ ಭೇಟಿ ನೀಡಿಲ್ಲ. ಶೀಘ್ರವೇ ಅವರು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು. ಸರ್ಕಾರ ‘ಬರಪೀಡಿತ ಜಿಲ್ಲೆ’ ಎಂದು ಘೋಷಿಸಿ, ಪರಿಹಾರ ನೀಡಬೇಕು. ಇಲ್ಲವಾದರೆ ರೈತರ ಸ್ಥಿತಿ ಬಿಗಡಾಯಿಸಲಿದೆ. ಹೋರಾಟ ಅನಿವಾರ್ಯವೂ ಆಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್ ಹೇಳಿದರು.
‘ಸಚಿವರು ಜಿಲ್ಲೆಗಳಿಗೆ ಖುದ್ದು ತೆರಳಿ ಬರ ಅಧ್ಯಯನ ನಡೆಸಿ, ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದರು. ಆದರೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಂದಿಗೂ ಜಿಲ್ಲೆಗೆ ಕಾಲಿಟ್ಟಿಲ್ಲ. ಅವರು ಎಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ರೈತಪರ ಕೆಲಸ ಮಾಡುವ ಇಚ್ಛಾಶಕ್ತಿ ಸಚಿವರಿಗೆ ಇದ್ದಂತಿಲ್ಲ’ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ದೂರಿದರು.
ಬೆಳೆಗಳಿಗೆ ಜೀವ ತುಂಬಿದ ಮಳೆ
ಜುಲೈ ಕೊನೆಯ ವಾರದಿಂದ ಸುರಿಯುತ್ತಿರುವ ಮಳೆಯು ಮೆಕ್ಕೆಜೋಳ, ರಾಗಿ ಹಾಗೂ ಇನ್ನಿತರ ಬೆಳೆಗಳಿಗೆ ಜೀವ ತುಂಬಿದೆ. ಮಳೆಯಿಲ್ಲದೆ ಬಾಡುತ್ತಿದ್ದ ಬೆಳೆಗಳು ವರುಣನ ಕೃಪೆಯಿಂದ ಮತ್ತೆ ನಳನಳಿಸುತ್ತಿವೆ. ರೈತರು ಬೆಳೆಗಳಿಗೆ ಗೊಬ್ಬರ ಹಾಕುವುದು, ಕಳೆ ತೆಗೆಯುವುದು ಹಾಗೂ ಎಡೆಕುಂಟೆ ಹೊಡೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಲು ವರ್ಷಾಧಾರೆಯು ಸಹಕಾರಿಯಾಗಿದೆ. ಮಳೆಯಿಂದಾಗಿ ಕಳೆದ ಎರಡು ವಾರಗಳಿಂದ ಬಿತ್ತನೆ ಪ್ರಮಾಣವೂ ಜಾಸ್ತಿ ಆಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-43-2102010826