
ಭಟ್ಕಳ: ಅಪಘಾತ ವಲಯವಾದ ಮುರಿನಕಟ್ಟೆ
ಭಟ್ಕಳ: ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ–66ರಲ್ಲಿನ ಮುರಿನಕಟ್ಟೆ ಸ್ಥಳೀಯ ಆಡಳಿತಕ್ಕೆ ಬಗೆಹರಿಸಲಾಗದ ಕಗ್ಗಂಟಾದರೆ, ಇನ್ನೊಂದೆಡೆ ಈ ಪ್ರದೇಶ ಪ್ರತಿನಿತ್ಯ ಅಪಘಾತ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಉದ್ದೇಶಕ್ಕೆ ತೆರವು ಮಾಡಿದ್ದ ಮುರಿನಕಟ್ಟೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸಿ ನೀಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ವರ್ಷಗಳ ಹೋರಾಟದ ಬಳಿಕ ಜಿಲ್ಲಾಡಳಿತ ಕೆಲ ತಿಂಗಳ ಹಿಂದೆ ಹೆದ್ದಾರಿ ಪಕ್ಕದಲ್ಲಿ ಕಟ್ಟೆ ನಿರ್ಮಿಸಿತ್ತು.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಯುವಕರು ಪೊಲೀಸರ ಸಮ್ಮುಖದಲ್ಲಿಯೆ ಕಟ್ಟೆಯನ್ನು ಒಡೆದು ಹಾಕಿದ್ದರು. ಇದಾದ ಬಳಿಕ ಜಿಲ್ಲಾಡಳಿತ ಹೆದ್ದಾರಿಯ ಮಧ್ಯದ ಡಿವೈಡರ್‌ನಲ್ಲಿ ಕಟ್ಟೆ ನಿರ್ಮಿಸಿತ್ತು. ಹೆದ್ದಾರಿ ಅಂಚಿನಲ್ಲಿ ತಾತ್ಕಾಲಿಕ ಇರಿಸಿರುವ ಅಮ್ಮನ ಹೊರೆಯನ್ನು ಇನ್ನೂ ತನಕ ಡಿವೈಡರ್ ಮಧ್ಯದಲ್ಲಿರುವ ಕಟ್ಟೆಯೊಳಗೆ ಸ್ಥಳಾಂತರ ಮಾಡಿಲ್ಲ. ಈಗ ಈ ತಾತ್ಕಾಲಿಕ ಅಮ್ಮನ ಹೊರೆ ಇರಿಸದ ಪ್ರದೇಶ ಅಪಘಾತ ಪ್ರದೇಶವಾಗಿ ಮಾರ್ಪಟ್ಟಿದೆ.
‘ಡಿವೈಡರ್ ಮಧ್ಯೆ ಕಟ್ಟೆ ನಿರ್ಮಾಣಕ್ಕೂ ಮುಂಚೆ ಈ ಪ್ರದೇಶದಲ್ಲಿ ದ್ವಿಪಥ ರಸ್ತೆ ಇರುವ ಕಾರಣ ವಾಹನ ಸವಾರರು ನಿಧಾನವಾಗಿ ಸಾಗುತ್ತಿದ್ದರು. ಆದರೆ ಅದನ್ನು ಚತುಷ್ಪಥವಾಗಿ ವಿಸ್ತರಿಸಿದ ನಂತರ ವೇಗವಾಗಿ ಬರುವ ವಾಹನಗಳು ಅಪಘಾತಗೊಳಗಾಗುತ್ತಿದೆ. ರಸ್ತೆ ಅಂಚಿನಲ್ಲಿರುವ ಮಾರಿ ಹೊರೆಯನ್ನು ಸ್ಥಳಾಂತರ ಮಾಡದೆ ಇಟ್ಟಿರುವ ಕಾರಣ ತಿರುವು ಮುರುವಾದ ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ವೇಗದ ಮಿತಿ ಕಡಿಮೆಗೊಳಿಸುವ ಭರದಲ್ಲಿ ಅಪಘಾತವಾಗುತ್ತಿದೆ’ ಎನ್ನುತ್ತಾರೆ ಸ್ಥಳೀಯರು.
‘ಜಿಲ್ಲಾಡಳಿತ ನಿರ್ಮಿಸಿದ ಕಟ್ಟೆ ನಮ್ಮ ಧಾರ್ಮಿಕ ಭಾವನೆಯ ಸ್ವರೂಪದಲ್ಲಿಲ್ಲ. ನಮ್ಮ ಬೇಡಿಕೆಯಂತೆ ಈಗ ನಿರ್ಮಿಸಿದ ಕಟ್ಟೆಯನ್ನು ಮರುವಿನ್ಯಾಸ ಮಾಡಿಕೊಟ್ಟರೆ ನಾವು ಹೊರೆಯನ್ನು ಸ್ಥಳಾಂತರ ಮಾಡುತ್ತೇವೆ’ ಎಂದು ಸ್ಥಳೀಯರಾದ ಸುಬ್ರಾಯ ನಾಯ್ಕ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-20-651279878