
PV Web Exclusive: ಕಲಬುರಗಿಯ ಶರಣಬಸವೇಶ್ವರರ ಭಕ್ತಿ ಸಿಂಚನವೂ, ದಾಸೋಹಗುಣವೂ...
ಕಲಬುರಗಿ: ಬಹುತೇಕ ದೇವಸ್ಥಾನಗಳಲ್ಲಿ ಅಮಾವಾಸ್ಯೆ, ಜಾತ್ರೆ, ಹಬ್ಬ–ಹರಿದಿನಗಳಲ್ಲಿ ಭಕ್ತರಿಗೆ ‘ಪ್ರಸಾದ’ ಏರ್ಪಡಿಸಲಾಗುತ್ತದೆ. ಕೆಲವು ದೇವಸ್ಥಾನಗಳಲ್ಲಿ ನಿತ್ಯವೂ ದಾಸೋಹ ಸೇವೆ ಇರುತ್ತದೆ. ಆದರೆ, ಇವೆರಡನ್ನೂ ಮೀರಿದ ‘ದಾಸೋಹಗುಣ’ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಅನಾವರಣಗೊಳ್ಳುತ್ತದೆ. ಅದಕ್ಕೆ ಶ್ರಾವಣ ಸೋಮವಾರ ವೇದಿಕೆ ಒದಗಿಸುತ್ತದೆ.
19ನೇ ಶತಮಾನದ ಆಕರ್ಷಕ ಕಪ್ಪುಗಲ್ಲಿನ ಈ ದೇವಸ್ಥಾನವು ಪ್ರತಿ ಶ್ರಾವಣದಲ್ಲಿ ಮುಂಗಾರು ಮಳೆ ಹನಿಗಳಿಗೂ, ಭಕ್ತಿಯ ಸಿಂಚನಕ್ಕೂ, ದಾಸೋಹಗುಣ ಅನಾವರಣಕ್ಕೂ ಒಟ್ಟೊಟ್ಟಿಗೇ ಸಾಕ್ಷಿಯಾಗುತ್ತದೆ. ಒಂದೆಡೆ ಶರಣಬಸವೇಶ್ವರ ದಾಸೋಹ ವರ್ಷವಿಡೀ ಸಾಗುತ್ತದೆ. ಮತ್ತೊಂದೆಡೆ ಶ್ರಾವಣ ಸೋಮವಾರಗಳಂದು ಭಕ್ತರ ‘ದಾಸೋಹಗುಣ’ ಅನಾವರಣಗೊಳ್ಳುತ್ತದೆ.
ಬದುಕಿನಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ದೇವರ ಮೊರೆ ಹೋಗುವುದು ಸಹಜ. ಅದು ತೀರಿದರೆ ದೇವರಿಗೇ ವಿಶೇಷ ಪೂಜೆಯೋ, ಇಲ್ಲವೇ ಕಾಣಿಕೆಯೋ ಸಲ್ಲಿಸಿ ಹರಕೆ ತೀರಿಸುವುದೂ ಮಾಮೂಲು. ಆದರೆ, ಈ ಭಾಗದಲ್ಲಿ ಇಷ್ಟಾರ್ಥ ನೆರವೇರಿದರೆ ಅದನ್ನು ತೀರಿಸಲು ಜನರಿಗೆ ಭಕ್ಷ್ಯಗಳ ದಾಸೋಹ ಮಾಡಲಾಗುತ್ತದೆ. ಏಕೆಂದರೆ, ಶರಣಬಸವೇಶ್ವರರ ಸನ್ನಿಧಾನವು ಕಾಯಕ–ದಾಸೋಹ ಗುಣದೊಂದಿಗೆ ಶರಣರೇ ‘ದೈವತ್ವ’ಕ್ಕೆ ಏರಿದ ನೆಲ. ಇಲ್ಲಿ ದಾಸೋಹವು ‘ಸೇವಾ ಪರಿಕಲ್ಪನೆ’ಯಾಗಿ ಬೆಳೆದಿದೆ.
ವಿಭೂತಿ ಬಳಿದುಕೊಂಡ ಮಧ್ಯ ವಯಸ್ಕ ಭಕ್ತರೊಬ್ಬರು ಸ್ಟೀಲ್ ಡಬ್ಬಿ ಬಿಚ್ಚಿ ಸುತ್ತಲಿನವರಿಗೆ ಸಜ್ಜಕ ಹಂಚುತ್ತಾರೆ. ಮತ್ತೊಬ್ಬ ಯುವತಿ ಬುತ್ತಿ ಬಿಚ್ಚಿ ಕರೆಕರೆದು ಮೊಸರನ್ನ ಉಣಬಡಿಸುತ್ತಾರೆ. ಇನ್ನೆರಡು ಹೆಜ್ಜೆ ದೂರದಲ್ಲಿ ನಿಂತಿದ್ದ ಮಧ್ಯ ವಯಸ್ಕ–ಯುವಕರು ಸೇರಿ ಕಾರಿನ ಡಿಕ್ಕಿ ತೆರೆದು ಬಾಳೆಹಣ್ಣು, ನೀರಿನ ಬಾಟಲಿ ವಿತರಿಸುತ್ತಾರೆ. ಅದರ ಎದುರೇ ವಾಹನಗಳಲ್ಲಿ ದೊಡ್ಡ ಬೋಗಾಣಿಗಳನ್ನಿಟ್ಟು ಕೆಲವರು ಪುಲಾವ್, ಶಿರಾ ಹಂಚುತ್ತಾರೆ. ಪಕ್ಕದಲ್ಲೇ ಹಾಕಿದ್ದ ಟೆಂಟ್‌ಗಳಲ್ಲಿ ಪ್ಲೇಟ್ ಹಿಡಿದು ನಿಂತವರು ‘ಅಪ್ಪ’ನ ಭಕ್ತರಿಗೆ ಉಣಬಡಿಸಲು ತರಹೇವಾರಿ ಭಕ್ಷ್ಯಗಳೊಂದಿಗೆ ಕಾಯುತ್ತಾರೆ...
–ಹೀಗೆ ಶ್ರೀಸಾಮಾನ್ಯರೂ ಬೆವರು ಸುರಿಸಿ ಮಾಡಿದ ಕಾಯಕದಿಂದ ಬಂದ ಹಣದಲ್ಲಿ ಕೈಲಾದಷ್ಟು ವೆಚ್ಚ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ಮನೆಗಳಲ್ಲಿ ಸಿದ್ಧಪಡಿಸಿಕೊಂಡು ತರುತ್ತಾರೆ. ಅದನ್ನು ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ‘ಅಪ್ಪ’ನ ಭಕ್ತರಿಗೆ ಹಂಚುತ್ತಾರೆ. ಹರಕೆಯ ತೀರಿಸುವ ನೆಪದಲ್ಲಿ ಅನ್ನ ಹಂಚಿ ಖುಷಿ ಪಡುವ ಭಕ್ತಿಯೇ ಅನನ್ಯ.
ಶರಣಬಸವೇಶ್ವರರ ದೇವಸ್ಥಾನ ಭಕ್ತಿಯ ಕೇಂದ್ರವಾದರೆ, ಅಲ್ಲಿಗೆ ಬರುವ ಭಕ್ತರಿಗೆ ‘ಪ್ರಸಾದ’ ಉಣಬಡಿಸುವ ತಾಣ ಶರಣಬಸವೇಶ್ವರರ ದಾಸೋಹ ಮಹಾಮನೆ. ಇಲ್ಲಿ ವರ್ಷವಿಡೀ ಬರುವ ಭಕ್ತರಿಗೆಲ್ಲ ಅನ್ನ ದಾಸೋಹ ಇರುತ್ತದೆ. ಈ ‘ದಾಸೋಹಕ್ಕೆ ತಮ್ಮದೊಂದು ಹಿಡಿಕಾಳು ಇರಲಿ’ ಎಂದು ಈ ಭಾಗದ ಅನ್ನದಾತರು ಅಪೇಕ್ಷಿಸುತ್ತಾರೆ. ಅದಕ್ಕಾಗಿಯೇ ಪ್ರತಿ ಸಲವೂ ಮುಂಗಾರು, ಹಿಂಗಾರು ಬೆಳೆಗಳ ಒಂದಿಷ್ಟು ಪಾಲು ತಂದು ‘ದಾಸೋಹ’ಕ್ಕೆ ಅರ್ಪಿಸುತ್ತಾರೆ. ನೂರಾರು ಕಿಲೊಮೀಟರ್ ದೂರದಿಂದ ಧಾನ್ಯಗಳನ್ನು ಗಂಟು, ಮೂಟೆಗಳಲ್ಲಿ ತಂದು ಸರದಿಗೆ ನಿಂದು ‘ಅಪ್ಪ’ನ ದಾಸೋಹಕ್ಕೆ ಸಲ್ಲಿಸುವ ರೈತರ ಭಕ್ತಿ ನಿಬ್ಬೆರಗು ಮೂಡಿಸುತ್ತದೆ.
ಒಂದೆಡೆ, ಶ್ರಾವಣ ಸೋಮವಾರಗಳಂದು ವ್ಯಾಪಾರಿಗಳು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳೂ ಸಾಮೂಹಿಕವಾಗಿ ತರಹೇವಾರಿ ಭಕ್ಷ್ಯಗಳನ್ನು ಸಿದ್ಧಪಡಿಸಿ ದಾಸೋಹ ಮಾಡುತ್ತವೆ. ಮತ್ತೊಂದೆಡೆ, ಜಿಲ್ಲೆಯ ಅಡತಿ ಅಂಗಡಿ ವ್ಯಾಪಾರಿಗಳು ಲಾರಿಗಟ್ಟಲೇ ಧಾನ್ಯಗಳನ್ನು ಶರಣಬಸವೇಶ್ವರರ ದಾಸೋಹಕ್ಕೆ ಒಪ್ಪಿಸಿ ಕೃತಾರ್ಥರಾಗುತ್ತಾರೆ.
ಅರೆ ಕಂಬ, ಬಿಡಿ ಕಂಬ, ಜೋಡಿ ಕಂಬ ಹಾಗೂ 36 ಕಮಾನುಗಳನ್ನು ಹೊಂದಿರುವ ಈ ವಿಶಿಷ್ಟ ದೇವಸ್ಥಾನದಲ್ಲಿ ಗುರು ಮರುಳಸಿದ್ಧರು ಹಾಗೂ ಶಿಷ್ಯ ಶರಣಬಸವೇಶ್ವರರ ಜಂಟಿ ಮೂರ್ತಿಗಳಿವೆ. ಇಬ್ಬರ ಗದ್ದುಗೆಗೂ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ವರ್ಷವಿಡೀ ನಿತ್ಯ ಸೂರ್ಯೋದಯಕ್ಕೂ ಮುನ್ನವೇ ಪೂಜೆ ನಡೆಯುತ್ತದೆ. ಆದರೆ, ಈ ಪೂಜೆಯು ಶ್ರಾವಣ ಮಾಸದಲ್ಲಿ ವಿಶೇಷ ಆಕರ್ಷಣೆ ಪಡೆಯುತ್ತದೆ.
ನಸುಕಿನಲ್ಲೇ ಎದ್ದು ಶುಚಿರ್ಭೂತರಾಗಿ ಬ್ರಾಹ್ಮಿ ಮುಹೂರ್ತದ ಹೊತ್ತಿಗೆ ಭಕ್ತರು ಕಾಲ್ನಡಿಗೆಯ ಮೂಲಕ ದೇವಸ್ಥಾನ ತಲುಪಿರುತ್ತಾರೆ. ಹಣೆಯಲ್ಲಿ ವಿಭೂತಿ, ಕೈಯಲ್ಲಿ ಪುಷ್ಪ–ಬಿಲ್ವಪತ್ರೆ ಹಿಡಿದು ‘ಮೊದಲ ಪೂಜೆ’ ನೋಟ ಕಣ್ತುಂಬಿಕೊಳ್ಳಲು ಕಾದು ನಿಲ್ಲುತ್ತಾರೆ.
ಬೆಳಗಿನ ಪೂಜೆಯ ನಂತರ ಗರ್ಭಗುಡಿ ದ್ವಾರ ಪರದೆ ಸರಿಯುತ್ತಲೇ ಕಾದುನಿಂತ ಭಕ್ತಗಣ ‘ಶರಣಬಸವೇಶ್ವರ ಮಹಾರಾಜಕೀ ಜೈ’ ಎಂಬ ಘೋಷಣೆ ಮೊಳಗಿಸುತ್ತದೆ. ಒಂದೆಡೆ ಘಂಟಾನಾದ, ಮತ್ತೊಂದೆಡೆ ಭಕ್ತರ ಜೈಕಾರ ಬೆಳಗಿನ ಪರಿಸರಕ್ಕೆ ವಿಶೇಷ ಪ್ರಭೆ ತುಂಬುತ್ತದೆ.
ಶ್ರಾವಣ ಮಾಸದ ಅಂಗವಾಗಿ ಶರಣ ಬಸವೇಶ್ವರರ ದೇವಸ್ಥಾನ ಆವರಣದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶರಣ ಬಸವೇಶ್ವರರ ಸಂಸ್ಥಾನ, ಡಾ.ಶರಣಬಸವೇಶ್ವರ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರತಿವರ್ಷ ಶರಣಬಸವೇಶ್ವರರ ಪುಣ್ಯಸರಣೆ, ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ವರ್ಷ 40 ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ ಈ ವರ್ಷ ‘ಶರಣಬಸವೇಶ್ವರ ಲೀಲಾಮೃತ’ ಪುರಾಣ ಪ್ರವಚನ ಏರ್ಪಡಿಸಲಾಗಿದೆ. ಸುಂಟನೂರಿನ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ನಿತ್ಯ ಸಂಜೆ 7ರಿಂದ 8ರ ತನಕ ಭಕ್ತರಿಗೆಲ್ಲ ಪ್ರವಚನದ ಸಾರ ಉಣಬಡಿಸುತ್ತಿದ್ದಾರೆ.
ನಿತ್ಯ ಭಜನೆ ಸಂಜೆ 6ರಿಂದ 7ರ ತನಕ ಭಕ್ತಿ ಸಂಗೀತ ಭಜನಾ ಸೇವೆ ಏರ್ಪಡಿಸಲಾಗಿದ್ದು, ನಿತ್ಯ ಒಂದೊಂದು ಭಜನಾ ಸಂಘಗಳು 40 ದಿನಗಳ ಕಾಲ ಭಕ್ತಿ ಸಂಗೀತ ಸುಧೆ ಉಣಬಡಿಸಿ, ಭಕ್ತರ ಮನವನ್ನು ಮುದಗೊಳಿಸುತ್ತಿವೆ. ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮನೆಯ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಕಳೆದ ವರ್ಷ ದೇಹ ತ್ಯಜಿಸಿದ್ದರು. ವಿವಿಧ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಸ್ಮರಿಸಲು 40 ದಿನಗಳ ಕಾಲ 40 ತಜ್ಞರಿಂದ ವಿಶೇಷ ಉಪನ್ಯಾಸ ಮಾಲಿಕೆಯನ್ನೂ ನಡೆಸಲಾಗುತ್ತಿದೆ.