
PV Web Exclusive: ಹಾಕಿ ಕೊಡಗಿಗೆ ಬಂದ ಕುತೂಹಲಕಾರಿ ಕಥೆ
ಮಡಿಕೇರಿ: ಕೊಡಗು ಭಾರತದ ಹಾಕಿಯ ತೊಟ್ಟಿಲು ಎಂದೇ ಹೆಸರಾಗಿದೆ. ಕೊಡಗಿನಲ್ಲಿ ದೇಶಭಕ್ತಿ, ಸೈನಿಕರು, ಕಾಫಿ, ಪ್ರಕೃತಿ ಸೌಂದರ್ಯ ಹೇಗಿದೆಯೋ ಹಾಗೆಯೇ ಹಾಕಿ ಕ್ರೀಡೆಯೂ ಹಾಸುಹೊಕ್ಕಾಗಿದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಮಾತ್ರವಲ್ಲ ದೇಶದ ಬೇರೆಲ್ಲೂ ಕಾಣಸಿಗದಂತಹ ಹಾಕಿ ಕ್ರೀಡೆ ಇಲ್ಲಿ ಕಣ್ಣಿಗೆ ಸಿಗುತ್ತದೆ. ಒಂದು ಬಗೆಯಲ್ಲಿ ಕೊಡಗಿನ ಸಂಸ್ಕೃತಿಯೊಂದಿಗೆ ಹಾಕಿ ಸಹ ಮಿಳಿತವಾಗಿದೆ.
ವಿಶ್ವದಲ್ಲೇ ಅತಿ ದೊಡ್ಡ ಕೌಟುಂಬಿಕ ಹಾಕಿ ಪಂದ್ಯಾವಳಿ ಸಹ ಇಲ್ಲಿ ಪ್ರತಿ ವರ್ಷ ನಡೆಯುತ್ತದೆ. ಇದು ಈಗಾಗಲೇ ಜಾಗತಿಕ ದಾಖಲೆಯ ಪುಟಗಳಲ್ಲಿ ಸೇರ್ಪಡೆಯಾಗಿದ್ದು, ವರ್ಷದಿಂದ ವರ್ಷಕ್ಕೆ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದೆ.
ಇಷ್ಟು ಮಾತ್ರವಲ್ಲ, ಭಾರತೀಯ ಹಾಕಿ ತಂಡದಲ್ಲಿ ಆಡಿದ ಹಲವು ಮಂದಿ ಆಟಗಾರರು ಕೊಡಗು ಜಿಲ್ಲೆಯವರೇ ಎನ್ನುವುದು ಮತ್ತೂ ವಿಶೇಷವಾದ ಸಂಗತಿ. ರಾಜ್ಯ, ರಾಷ್ಟ್ರೀಯ ತಂಡಗಳಲ್ಲಿ ಅನೇಕ ಮಂದಿ ಹಾಕಿ ಆಟಗಾರರು ಈ ಕೊಡಗಿನ ಮಣ್ಣಿಂದಲೇ ಬಂದಿದ್ದಾರೆ.
ಈಗ ಆಗಸ್ಟ್ 12ರಿಂದ (23ರವರೆಗೆ) ಪುಣೆಯಲ್ಲಿ ಆರಂಭವಾಗಿರುವ 16ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳೆಯರ ನ್ಯಾಷನಲ್ ಚಾಂಪಿಯನ್ ಶಿಪ್–2026ರ ಕರ್ನಾಟಕ ತಂಡದಲ್ಲಿ ಬರೋಬರಿ 9 ಬಾಲಕಿಯರು ಕೊಡಗಿನವರೇ ಇರುವುದು ವಿಶೇಷ.
ಕೊಡಗಿನ ಕ್ರೀಡಾಪಟುಗಳಾದ ದಿಶಾ ನಿಡ್ಯಮಲೆ, ಚಂದನಾ ತಡಿಯಪ್ಪನ, ಗಗನಾ, ಮನೀಷಾ ಪೊನ್ನಮ್ಮ, ಪರ್ಲಿನ್ ಪೊನ್ನಮ್ಮ, ಅಕ್ಷಿತಾ, ಪ್ರತೀಕ್ಷಾ, ಮೋನಿಕಾ ನಾಣಯ್ಯ ಹಾಗೂ ಪುಣ್ಯ ಅವರು ಕರ್ನಾಟಕ ಜೂನಿಯರ್ ಮಹಿಳಾ ಹಾಕಿ ತಂಡದಲ್ಲಿದ್ದಾರೆ.
ತಂಡದ ನಾಯಕಿ ಮನೀಷಾ ಪೊನ್ನಮ್ಮ ಮಾತನಾಡಿ, ಮೊದಲ ಬಾರಿಗೆ ತಂಡದ ನಾಯಕಿ ಆಗಿ ತಂಡವನ್ನು ಮುನ್ನಡೆಸುತ್ತಿದ್ದು, ‘ಬಿ’ ತಂಡವಾಗಿದ್ದ ಕರ್ನಾಟಕ ತಂಡವನ್ನು ‘ಎ’ ತಂಡವಾಗಿ ಅರ್ಹತೆ ಪಡೆಯುವಂತೆ ಮಾಡುವುದು ನನ್ನ ಗುರಿ ತಂಡದಲ್ಲಿ ಒಳ್ಳೆಯ ಆಟಗಾರ್ತಿಯರು ಇದ್ದು ಉತ್ತಮ ಆಟವಾಡಿ ಗೆಲುವು ಸಾಧಿಸುತ್ತೇವೆ’ ಎಂದರು.
ತಂಡದ ಪ್ರತಿಭಾವಂತ ಆಟಗಾರ್ತಿ ದಿಶಾ ನಿಡ್ಯಮಲೆ ಮಾತನಾಡಿ, ‘ಫೆಬ್ರುವರಿಯಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (ಆಲ್ ಇಂಡಿಯಾ) ನಡೆದ ಪಂದ್ಯದಲ್ಲಿ ಉತ್ತಮ ಆಟವಾಡಿ ಕಂಚಿನ ಪದಕ ಗೆದ್ದೆವು. ಅದೇ ರೀತಿ ಈ ಟೂರ್ನಿಯಲ್ಲಿ ಜೂನಿಯರ್ ಭಾರತ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಇರುವುದರಿಂದ ಉತ್ತಮ ಆಟವಾಡಿ ಭಾರತ ತಂಡಕ್ಕೆ ಆಯ್ಕೆ ಆಗಬೇಕೆಂಬುದು ನನ್ನ ಗುರಿಯಾಗಿದೆ’ ಎಂದರು.
ಹೀಗೆ, ಹೇಳುತ್ತಾ ಹೋದರೆ ಕೊಡಗಿಗೂ ಹಾಕಿಗೂ ಇರುವ ಸಂಬಂಧ ಕುರಿತು ಬರೆಯಲು ಪುಟಗಳು ಸಾಲದಾಗುತ್ತವೆ. ಅಷ್ಟೊಂದು ಅಗಾಧವಾಗಿ ಹಾಕಿ ಜಿಲ್ಲೆಯ ಜನರಲ್ಲಿ ಬೇರೂರಿದೆ.
ಹಾಕಿ ಕೊಡಗಿಗೆ ಬಂದಿದ್ದಾದರೂ ಹೇಗೆ?
ಕಡ್ಡಿ ಅಥವ ಮರದ ತುಂಡು ಮತ್ತು ಚೆಂಡನ್ನು ಉಪಯೋಗಿಸಿಕೊಂಡು ಆಟವಾಡುವ ಪರಂಪರೆ ಇಂದು ನೆನ್ನೆಯದಲ್ಲ. ಅದು ಸಾವಿರಾರು ವರ್ಷಗಳ ಹಿಂದೆಯೇ ಪ್ರಾಚೀನ ಈಜಿಪ್ಟ್, ರೋಮ್, ಗ್ರೀಸ್ ನಾಗರೀಕತೆಗಳಲ್ಲಿ ಇತ್ತೆಂದು ಇತಿಹಾಸ ಹೇಳುತ್ತದೆ.
ಇದೇ ಬಗೆಯ ಕ್ರೀಡೆಯ ಆಧುನಿಕ ರೂಪ 1840ರ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಹಾಕಿಯಾಗಿ ಮೊದಲಿಗೆ ಆವಿರ್ಭವಿಸಿತು. ಇದಕ್ಕೂ 6 ವರ್ಷಕ್ಕೂ ಮುಂಚೆ ಎಂದರೆ, 1834ರ ಏಪ್ರಿಲ್ 11ರಂದು ಕೊಡಗಿನ ಕೊನೆಯ ದೊರೆ ಚಿಕ್ಕವೀರ ರಾಜೇಂದ್ರ ಅವರನ್ನು ಬ್ರಿಟಿಷರು ಪದಚ್ಯುತಗೊಳಿಸಿ, ಇಂಗ್ಲೆಂಡಿಗೆ ಗಡಿಪಾರು ಮಾಡಿದರು. ಆ ಬಳಿಕ ಕೊಡಗಿನ ನೇರ ಆಳ್ವಿಕೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಇದು ಹಾಕಿ ಇಲ್ಲಿಗೆ ನೇರವಾಗಿ ಬರಲು ರಹದಾರಿಯನ್ನೇ ನಿರ್ಮಿಸಿತು ಎನ್ನಬಹುದು.
ನಂತರ, 1885-1886 ರ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಕೊಡಗಿನಲ್ಲಿ ಈ ಆಟವನ್ನು ಆಡಲು ಪ್ರಾರಂಭಿಸಿದರು. ಬ್ರಿಟಿಷರು ಇಲ್ಲಿ ಆರಂಭಿಸಿದ ಪಾಶ್ಚಿಮಾತ್ಯ ಶಿಕ್ಷಣದ ಶಾಲೆಗಳಲ್ಲಿ ಈ ಕ್ರೀಡೆಯನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಲೂ ಆರಂಭಿಸಿದರು.
ಬಲು ಹೆಚ್ಚಿನ ದೈಹಿಕ ಶ್ರಮವನ್ನು ಬೇಡುವ ಹಾಕಿಯನ್ನು ಆಡುವುದು ಅಷ್ಟು ಸುಲಭವಲ್ಲ. ಹಾಕಿ ಆಡಿದವರಿಗೆ ಗೊತ್ತು ಅದರ ದಣಿವು, ಶ್ರಮ. ಬಿರುಬಿಸಿಲಿನಲ್ಲಿ ಕೈಯಲ್ಲಿ ಹಾಕಿ ದಂಡವನ್ನಿಡಿದು, ಚೆಂಡನ್ನು ನಿರಂತರವಾಗಿ ಬೆನ್ನತ್ತಬೇಕಾದರೆ ಎಂಟೆದೆಯೇ ಬೇಕು. ಇಂತಹ ಅಗಾಧ ದೈಹಿಕ ಸಾಮರ್ಥ್ಯ ಇರುವ ಜನರು ಕೊಡಗಿನವರು. ಆದ ಕಾರಣ, ಈ ಕ್ರೀಡೆ ಬೇರೆ ಜಿಲ್ಲೆಗಳಲ್ಲಿ ಜನಪ್ರಿಯವಾಗದೇ, ಕೊಡಗಿನಲ್ಲೇ ಜನಪ್ರಿಯವಾಯಿತು. ಬ್ರಿಟಿಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದುಕೊಂಡು ಕೊಡಗಿನ ಜನ ಹಾಕಿಯಲ್ಲಿ ಮುಳುಗೆದ್ದರು.
ಮೊದ ಮೊದಲು ಕೊಡಗಿನಲ್ಲಿದ್ದ ಬಡ ಜನರಿಗೆ ದುಬಾರಿ ಎನಿಸಿದ್ದ ಹಾಕಿ ಸ್ಟಿಕ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಕೊಡಗಿನಲ್ಲಷ್ಟೇ ಹೇರಳವಾಗಿ ಕಾಣಸಿಗುತ್ತಿದ್ದ ಬ್ರೂನೆ ಮರದ ಬೇರುಗಳು ಹಾಕಿ ಸ್ಟಿಕ್ ಅನ್ನು ಹೋಲುತ್ತಿದ್ದವು. ಇದನ್ನು ಕಡಿದು ಹಾಕಿ ಸ್ಟಿಕ್ ಮಾಡಿಕೊಂಡರು ಗಟ್ಟಿಯಾದ ಮರದ ಕಾಯಿಗಳನ್ನೇ ಚೆಂಡಾಗಿ ಬಳಸಿಕೊಂಡು, ಆಧುನಿಕ ಕ್ರೀಡೆಯನ್ನು ಅಪ್ಪಿಕೊಂಡರು.
ಬ್ರಿಟಿಷರ ಕಾಲದಲ್ಲೇ ಕೊಡಗಿನ ಪ್ರತಿ ಮನೆಯಿಂದಲೇ ಸೇನೆಗೆ ಸೇರಿದ ಕನಿಷ್ಠ ಒಬ್ಬರಾದರೂ ಇರುತ್ತಿದ್ದರು. ಆಗ ಸೇನೆಯಲ್ಲಿ ಹಾಕಿಯನ್ನು ಹೆಚ್ಚಾಗಿ ಆಡುತ್ತಿದ್ದರು. ಸೇನೆಗೆ ಸೇರಿದ ಇಲ್ಲಿನ ಜನರು ಹಾಕಿಯಲ್ಲಿ ಪಳಗಿ, ಆ ಕ್ರೀಡೆಯನ್ನು ಕೊಡಗಿನಲ್ಲೂ ಆಡ ತೊಡಗಿದರು. ಇದರಿಂದಲೂ ಹಾಕಿಯ ಜನಪ್ರಿಯತೆ ಕೊಡಗಿನಲ್ಲಿ ಹೆಚ್ಚಿತು.
ಬ್ರಿಟಿಷರು ಹೋದ ನಂತರ, ಸ್ವಾತಂತ್ರ್ಯ ನಂತರವೂ ಕೊಡಗಿನಿಂದ ಸಾವಿರಾರು ಮಂದಿ ಸೇನೆಗೆ ಸೇರಿದ್ದರು. ಹಾಕಿ ಕ್ರೀಡೆಯನ್ನು ಈ ಸೈನಿಕರು ಕೊಡಗಿನಲ್ಲಿ ಜೀವಂತವಿಟ್ಟರು.
ನಂತರ, 1997ರಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡಂಡ ಕುಟ್ಟಪ್ಪ ಹಾಗೂ ಅವರ ಸೋದರ ಕಾಶಿ ಅವರು ಕೊಡವ ಕೌಟುಂಬಿಕ ಹಾಕಿಯನ್ನು ಕರಡ ಎಂಬ ಗ್ರಾಮದಲ್ಲಿ ಆರಂಭಿಸಿದ್ದು ಹಾಕಿಗೆ ಶುಕ್ರದೆಸೆಯನ್ನೇ ತಂದಿತು. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಕೊಡವ ಕೌಟುಂಬಿಕ ಹಾಕಿ ಉತ್ಸವಗಳು ನಡೆಯುತ್ತಿವೆ. 60 ಕೊಡವ ಕೌಟುಂಬಿಕ ತಂಡಗಳೊಂದಿಗೆ ಆರಂಭವಾದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಈಗ 2026ರಲ್ಲಿ 383 ತಂಡಗಳು ಭಾಗವಹಿಸಿದ್ದವು. ಹೀಗೆ, ಕೊಡಗಿನಲ್ಲಿ ಹಾಕಿ ಸಂಸ್ಕೃತಿ ಮುಂದುವರಿಯುತ್ತಿದೆ.