ಹನೂರು ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ–ಜೆಡಿಎಸ್‌ ಆಗ್ರಹ

ಹನೂರು ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ–ಜೆಡಿಎಸ್‌ ಆಗ್ರಹ

ಹನೂರು ಪ್ರಕರಣ: ನ್ಯಾಯಾಂಗ ತನಿಖೆಗೆ ಬಿಜೆಪಿ–ಜೆಡಿಎಸ್‌ ಆಗ್ರಹ

ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿಗೆ ಮೂವರು ಬಲಿಯಾದ ‍ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒ‍ಪ್ಪಿಸಬೇಕೆಂದು ಆಗ್ರಹಿಸಿ ವಿಧಾನಮಂಡಲದ ಉಭಯಸದನಗಳಲ್ಲೂ ಬಿಜೆಪಿ, ಜೆಡಿಎಸ್‌ ಸದಸ್ಯರು ಸರ್ಕಾರವನ್ನು ಆಗ್ರಹಿಸಿ ಗದ್ದಲ ನಡೆಸಿದರು.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಎರಡೂ ಸದನಗಳಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕರು, ‘ಎನ್‌ಕೌಂಟರ್‌ ಹೆಸರಿನಲ್ಲಿ ಅಮಾಯಕರನ್ನು ಕೊಲೆ ಮಾಡಲಾಗಿದೆ’ ಎಂದು ಕಿಡಿಕಾರಿದರು.

ಅಮಾಯಕರ ಎನ್‌ಕೌಂಟರ್: ಅಶೋಕ 

‘ಅಮಾಯಕರನ್ನು ಎನ್‌ಕೌಂಟರ್‌ ಮಾಡಲಾಗಿದೆ. ಮೃತರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡಬೇಕು. ಮ್ಯಾಜಿಸ್ಟ್ರೇಟ್‌ ತನಿಖೆಯ ಬದಲು ನ್ಯಾಯಾಂಗ ತನಿಖೆಗೆ ವಹಿಸಬೇಕು. ಘಟನೆಯ ನೈತಿಕ ಹೊಣೆ ಹೊತ್ತು ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಈ ಘಟನೆ ಬಗ್ಗೆ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ, ಕರ್ನಾಟಕದಲ್ಲಿ ತಮಿಳಿಗರಿಗೆ ರಕ್ಷಣೆ ಇಲ್ಲ ಅಂದಿದ್ದಾರೆ. ಸರ್ಕಾರಕ್ಕೆ ಕಣ್ಣಿಲ್ವಾ? ಮೂವರ ಕೊಲೆ ಆಗಿದೆ. ಎನ್‌‌ಕೌಂಟರ್ ಆಗಿದೆ, ಕೊಲೆಗಾರರನ್ನು ಹಿಡಿದಿದ್ದೀರಾ? ಇದರ ಬಗ್ಗೆ ಚರ್ಚೆ ಆಗಬೇಕು’ ಎಂದು ಗಟ್ಟಿಧ್ವನಿಯಲ್ಲಿ ಆಗ್ರಹಿಸಿದರು. ಸುನಿಲ್ ಕುಮಾರ್, ‘ಚರ್ಚೆಗೆ ನೋಟಿಸ್ ಕೊಡಿ ಅಂತಿದ್ದೀರಲ್ಲ. ಎನ್‌‌ಕೌಂಟರ್ ಮಾಡುವ ಮುನ್ನ ಸತ್ತವರಿಗೆ ನೋಟಿಸ್ ಕೊಟ್ಟಿದ್ರಾ’ ಎಂದು ಪ್ರಶ್ನಿಸಿದರು.

ಘಟನೆಯ ಬಗ್ಗೆ ಸದನಕ್ಕೆ ವಿವರವಾದ ಹೇಳಿಕೆ ನೀಡಿದ  ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ‘ಪ್ರಜಾವಾಣಿ’ಯ ಸೋಮವಾರ ಸಂಚಿಕೆಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿ, ‘ವನ್ಯಜೀವಿ ಅರಣ್ಯ ಉಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಠಿಣ ಕಾನೂನುಗಳಿವೆ. 16 ವರ್ಷದಲ್ಲಿ 278 ಕಳ್ಳಬೇಟೆ ಪ್ರಕರಣಗಳು ಪತ್ತೆಯಾಗಿವೆ’ ಎಂದರು.

‘ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್‌ ತನಿಖೆ ನಡೆಯುತ್ತಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು. ಮೃತಪಟ್ಟವರು ಬೇಟೆಗಾರರೇ ಆಗಿದ್ದರೆ ಅವರ ವಿರುದ್ಧವೂ ಕ್ರಮ ಆಗಲಿದೆ. ಪರಿಹಾರ ನೀಡಬೇಕೆಂಬ ಬಗ್ಗೆಯೂ ಮುಖ್ಯಮಂತ್ರಿಯ ಜೊತೆ ಚರ್ಚಿಸಲಾಗುವುದು. ತನಿಖಾ ವರದಿ ನಂತರ ಸತ್ಯಾಂಶ ಹೊರಬರಲಿದೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ, ‘ಚಾಮರಾಜನಗರದಲ್ಲೇ ಜಿಲ್ಲಾಸ್ಪತ್ರೆ ಇದ್ದರೂ ಮೃತದೇಹಗಳನ್ನು ಮೈಸೂರಿಗೆ ಯಾಕೆ ತಗೆದುಕೊಂಡು ಹೋದರು’ ಎಂದು ಪ್ರಶ್ನಿಸಿದರು. ಈ ವೇಳೆ ಸಚಿವ ಕೃಷ್ಣ ಬೈರೇಗೌಡ, ‘ಸಚಿವರು ಉತ್ತರ ಕೊಟ್ಟಿದ್ದಾರೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ‘ಸರ್ಕಾರ ಮೂವರನ್ನು ಸಾಯಿಸಿದೆ’ ಎಂದು ವಾಗ್ದಾಳಿ ನಡೆಸಿದರು. ಆಗ ಕೃಷ್ಣ ಬೈರೇಗೌಡ, ‘ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ, ನಾಚಿಕೆ ಆಗಬೇಕು’ ಎಂದು ಟೀಕಿಸಿದರು.

ಈ ವೇಳೆ, ‘ಎನ್​ಕೌಂಟರ್ ಸರ್ಕಾರಕ್ಕೆ ಧಿಕ್ಕಾರ’ ಎಂದು ವಿರೋಧ ಪಕ್ಷದ ಸದಸ್ಯರು ಘೋಷಣೆ ಕೂಗಿದರು. ‘ನೀವು ಎನ್‌ಕೌಂಟರ್ ಸ್ಪೆಷಲಿಸ್ಟ್. ಉತ್ತರ ಪ್ರದೇಶದಲ್ಲಿ, ಗುಜರಾತ್‌ನಲ್ಲಿ ಎನ್‌ಕೌಂಟರ್‌ಗಳು ನಡೆಸಿದ್ದೀರಾ’ ಎಂದು ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದರು. ಈ ವೇಳೆ ಆಡಳಿತ– ವಿಪಕ್ಷ ಸದಸ್ಯರು ನಡುವೆ ವಾಕ್ಸಮರ ನಡೆಯಿತು.‌

ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಬಿಜೆಪಿಯ ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಮತ್ತಿತರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ‘ಮುಖ್ಯಮಂತ್ರಿ ಜೊತೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು. 

‘ಗುಂಡೇಟಿನಲ್ಲಿ ಮೂವರು ಮೃತಪಟ್ಟಿರುವುದು ಅಮಾನವೀಯ ಘಟನೆ. ಈ ಬಗ್ಗೆ ತಹಸೀಲ್ದಾರ್‌ ಮೂಲಕ ತನಿಖೆ ನಡೆಸಿದರೆ ಸಾಲದು, ನ್ಯಾಯಾಂಗ ತನಿಖೆಯ ಅಗತ್ಯವಿದೆ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ಸೋಮವಾರ ಬೆಳಿಗ್ಗೆ ವಿಧಾನಪರಿಷತ್ತಿನ ಕಲಾಪ ಆರಂಭವಾಗುತ್ತಿದಂತೆಯೇ ವಿಷಯ ಪ್ರಸ್ತಾಪಿಸಿ ಅವರು, ‘ಈ ವಿಷಯದ ಕುರಿತು ಮೊದಲು ಚರ್ಚೆಯಾಗಲಿ’ ಎಂದು ಪಟ್ಟು ಹಿಡಿದರು. ವೇಳೆ, ಆಡಳಿತ–ವಿಪಕ್ಷ ಸದಸ್ಯರು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದಾಗಿ ಗದ್ದಲ ಉಂಟಾಯಿತು. ಕೆಲಹೊತ್ತು ಕಲಾಪ ನಡೆಯಲಿಲ್ಲ.

ಸಭಾ ನಾಯಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ಅರಣ್ಯ ಸಚಿವರು ಕೆಳ ಮನೆಯಲ್ಲಿ ಇದ್ದಾರೆ. ಅವರು ಬಂದ ಬಳಿಕ ಉತ್ತರ ಕೊಡುತ್ತಾರೆ. ನಿಯಮಗಳ ಪ್ರಕಾರ ಪ್ರಶ್ನೋತ್ತರ ಕಲಾಪ ನಡೆಯಲು ಅವಕಾಶ ಮಾಡಿಕೊಡಿ’ ಎಂದರು. ಸಭಾಪತಿ ಸಲೀಂ ಅಹಮದ್‌ ಅವರು, ಪ್ರಶ್ನೋತ್ತರದ ಬಳಿಕ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರೂ, ವಿರೋಧ ಪಕ್ಷಗಳ ಸದಸ್ಯರು ಒಪ್ಪಲಿಲ್ಲ. ‘ಈ ವಿಷಯದ ಬಗ್ಗೆ ಚರ್ಚಿಸಲು ಮೊದಲೇ ನೋಟಿಸ್‌ ನೀಡಿಲ್ಲ. ಉತ್ತರ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಗದ್ದಲ ಮುಂದುವರಿದ ಕಾರಣ ಸಭಾಪತಿ ಅವರು ಕಲಾಪವನ್ನು ಹತ್ತು ನಿಮಿಷ ಮುಂದೂಡಿ, ಸಭಾ ನಾಯಕ ಹಾಗೂ ವಿರೋಧ ಪಕ್ಷದ ಸದಸ್ಯರ ಜತೆ ಚರ್ಚೆ ನಡೆಸಿದರು. ಮತ್ತೆ ಸದನ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ, ಘೋಷಣೆ ಕೂಗುವುದನ್ನು ಮುಂದುವರಿಸಿದರು. ‘ನನ್ನ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ ಪ್ರಶ್ನೋತ್ತರ ಕಲಾಪ ನಡೆಸಲು ಒಪ್ಪಿದ್ದೀರಿ, ಇಲ್ಲಿ ಬಂದು ಮತ್ತೆ ಗದ್ದಲ ಮಾಡುವುದು ಸರಿಯಲ್ಲ’ ಎಂದು ಸಭಾಪತಿ ಅವರು ವಿರೋಧ ಪಕ್ಷದ ನಾಯಕರನ್ನು ಉದ್ದೇಶಿಸಿ ಹೇಳಿದರು.

‘ಅಲ್ಲಿ ಒಪ್ಪಿರುವುದು ನಿಜ. ಆದರೆ, ಇದು ಬೇರೆ ವಿಷಯ. ವಾಲ್ಮೀಕಿ ಅಭಿವೃದ್ಧಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮಕ್ಕೆ ಕಾರಣರಾದ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು. ಮೊದಲು ರಾಜೀನಾಮೆ ಪಡೆದು, ಬಳಿಕ ಕಲಾಪ ನಡೆಸಿ’ ಎಂದು ಛಲವಾದಿ ನಾರಾಯಣಸ್ವಾಮಿ ಪಟ್ಟು ಹಿಡಿದರು. ವಿರೋಧ ಪಕ್ಷಗಳ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿ, ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

‘ಪ್ರತ್ಯಕ್ಷದರ್ಶಿ ಮಹಿಮದಾಸ ಎಲ್ಲಿ?’

‘ಎನ್‌ಕೌಂಟರ್‌ನಲ್ಲಿ ಬದುಕುಳಿದ ಪ್ರತ್ಯಕ್ಷದರ್ಶಿ ಮಹಿಮದಾಸ ಈಗ ಎಲ್ಲಿದ್ದಾನೆ’ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಭೋಜನ ವಿರಾಮದ ಬಳಿಕ ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಹೇಳಿಕೆ ನೀಡಿದರು. ಆಗ ಕಾಂಗ್ರೆಸ್‌ನ ಪುಟ್ಟಣ್ಣ, ‘ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿಕೊಟ್ಟಿರುವ ಹೇಳಿಕೆಯಲ್ಲಿ ಹಲವು ಲೋಪಗಳು ಇವೆ. ಎನ್‌ಕೌಂಟರ್‌ನಲ್ಲಿ ಬದುಕುಳಿದ ಮಹಿಮದಾಸ ಮಾತ್ರವೇ ಸರಿಯಾದ ಮಾಹಿತಿ ಕೊಡಬಲ್ಲ ವ್ಯಕ್ತಿ. ಆತನನ್ನು ವಶಕ್ಕೆ ಪಡೆದು ಹೇಳಿಕೆ ಪಡೆದುಕೊಳ್ಳಬೇಕು’ ಎಂದರು.

ನಂತರ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ಪುಟ್ಟಣ್ಣ ಅವರು ಹೇಳಿದಂತೆ ಮಹಿಮದಾಸನಿಗೆ ಮಾತ್ರವೇ ಪೂರ್ಣ ಸತ್ಯ ಗೊತ್ತಿರಲು ಸಾಧ್ಯ. ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ ಮತ್ತು ಆನಂತರ ತಪ್ಪಿಸಿಕೊಂಡಿದ್ದಾನೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಈವರೆಗೂ ಆ ವ್ಯಕ್ತಿ ಸಿಕ್ಕಿಲ್ಲವೇ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ‘ಆತ ಆಸ್ಪತ್ರೆಯಿಂದ ಓಡಿಹೋಗಿದ್ದಾನೆ ಎಂದು ಹೇಳುವಷ್ಟು ಪ್ರಕರಣ ಸರಳವಾಗಿಲ್ಲ. ಅವನು ಓಡಿಹೋದನೋ ಅಥವಾ ಇಲಾಖೆಯವರೇ ಓಡಿಸಿದರೋ’ ಎಂದು ಪ್ರಶ್ನಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ