Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?

Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?

Onion Price: ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮುಂದಿನ 5 ತಿಂಗಳಲ್ಲಿ ಎಷ್ಟಾಗಬಹುದು?

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಹಬ್ಬಗಳ ಕಾಲ ಶುರುವಾಗಿದ್ದರೆ ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿಯೂ ಹೆಚ್ಚಾಗುತ್ತಿದೆ.

ಸಕ್ಕರೆ, ಬೆಲ್ಲ,ಅಕ್ಕಿ ದರ ಏರಿಕೆ ನಡುವೆ ಈಗ ಈರುಳ್ಳಿ ದರವೂ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ತಿಂಗಳ ಹಿಂದೆ ಸಗಟು ಈರುಳ್ಳಿ ದರ ಕೆಜಿ ಗೆ ₹13 ರಿಂದ ₹15 ಇತ್ತು. ಚಿಲ್ಲರೆ ದರ ₹25 ರಿಂದ ₹30 ರು. ಗೆ ಮಾರಾಟವಾಗುತಿದ್ದ ಈರುಳ್ಳಿ ಈಗ ಸಗಟು ₹48ರಿಂದ ₹50 ಆಗಿದ್ದು, ಚಿಲ್ಲರೆ ದರ ₹ 60ರಿಂದ ₹70 ರು. ಗೆ ತಲುಪಿದೆ.

ಚಿಲ್ಲರೆ ವಹಿವಾಟು, ಗುಣಮಟ್ಟ, ಸ್ಥಳ ಮತ್ತು ವ್ಯಾಪಾರಿಗಳಲ್ಲಿ ಲಭ್ಯವಿರುವ ಪೂರೈಕೆಯನ್ನು ಆಧರಿಸಿ ಈ ಬೆಲೆ ವ್ಯತ್ಯಾಸ ಆಗಲಿದೆ. ರಾಜ್ಯದ ಇತರೆ ಭಾಗಗಳಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿಯೂ ಬೆಲೆ ಹೆಚ್ಚಿದೆ.

ಜನಸಾಮಾನ್ಯರು ಅಲ್ಲದೆ ಹೋಟೆಲ್‌ಗಳು ಮತ್ತು ಸಣ್ಣ ಆಹಾರ ವ್ಯಾಪಾರಿಗಳಿಗೆ ತಮ್ಮ ದೈನಂದಿನ ಅಡುಗೆಯಲ್ಲಿ ಈರುಳ್ಳಿ ಅತ್ಯಗತ್ಯ ಆಗಿರುವುದರಿಂದ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ.

ಅನೇಕ ಗ್ರಾಹಕರಿಗೆ, ಹಠಾತ್ ಹೆಚ್ಚಳವು ಖರೀದಿಗಳನ್ನು ಕಡಿಮೆ ಮಾಡುವುದು ಅಥವಾ ವಾರದ ದಿನಸಿ ವೆಚ್ಚವನ್ನು ಸರಿಹೊಂದಿಸುವುದೇ ಸವಾಲಾಗಿದೆ.

ದಾವಣಗೆರೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿನ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ ಸುಮಾರು ಮಧ್ಯಮ ದರ್ಜೆ ₹4,200 ರಿಂದ ₹4,300 ದರ ಇದೆ.

ಇನ್ನು ಗುಣಮಟ್ಟಕ್ಕೆ ಅನುಗುಣವಾಗಿ ಕ್ವಿಂಟಾಲ್ ಗೆ ₹4,800 ಗೆ ತಲುಪಿದೆ. ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ದಿನಾಂಪ್ರತಿ 45,000 ನಿಂದ 47,000 ಚೀಲಗಳಷ್ಟು ಈರುಳ್ಳಿ ಮಹಾರಾಷ್ಟದಿಂದ ಬರುತ್ತದೆ.

ವಿಜಯಪುರ ದಿಂದ 7,000 ನಿಂದ 8,000 ಚೀಲಗಳಷ್ಟು ಈರುಳ್ಳಿ ಪೂರೈಕೆಯಾಗುತ್ತಿದೆ. ಎರಡು ದಿನಗಳಲ್ಲಿ ತುಸು ಅವಕ ಏರಿಕೆಯಾಗಿದೆ.

ಹೀಗೆ ಪೂರೈಕೆ ಏರಿಕೆಯಾದರೆ ಬೆಲೆ ತುಸು ಇಳಿಕೆಯಾಗಬಹುದೆಂದು ಎಪಿಎಂಸಿ ಈರುಳ್ಳಿ ವ್ಯಾಪಾರಿ ದಾನಣ್ಣ ಬಿರಾದಾರ ಹೇಳುತ್ತಾರೆ.

ಈರುಳ್ಳಿ ದರ ಏರಿಕೆಗೆ ಕಾರಣಗಳೇನು

ದೇಶದಲ್ಲಿ ಮಹಾರಾಷ್ಟ್ರ ಮೊದಲು, ನಂತರ ಕರ್ನಾಟಕ ರಾಜ್ಯದಲ್ಲು ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ದಾವಣಗೆರೆ, ವಿಜಯಪುರ ಕಲಬುರಗಿಯಲ್ಲೂ ಬೆಳೆಯಲಾಗುತ್ತಿದೆ.

ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ತೀವ್ರ ಬರಗಾಲ ಎದುರಾಗಿದೆ. ನೀರಿಲ್ಲದೆ ಇರುವುದರಿಂದ ಈ ಬಾರಿ ರೈತರು ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದು ಕೆಲ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಇದೇ ಈರುಳ್ಳಿ ದರ ಗ್ರಾಹಕರ ಕಣ್ಣಲ್ಲಿ ಮತ್ತಷ್ಟು ಕಣ್ಣೀರು ತರಿಸುತ್ತಿದೆ.ಅಂದಾಜು ಹಿಂದಿನ ವರ್ಷ 25 ಸಾವಿರ ಹೆಕ್ಟೇರ್​ನಲ್ಲಿ ಬೆಳೆಯಲಾಗಿತ್ತು. ಈ ವರ್ಷ 8-9 ಹೆಕ್ಟೇರ್ ಮಾತ್ರ ಬೆಳೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಮಳೆ ‌ಇಲ್ಲದ ಕಾರಣ ಎಕರೆಗೆ ₹ 20 ಸಾವಿರ ಖರ್ಚು ಮಾಡಿ ಪೈಪ್ ಮೂಲಕ ತುಂತುರು ಹನಿಯಲ್ಲಿ ಈರುಳ್ಳಿ ಬೆಳೆಯುವ ಪರಿಸ್ಥಿತಿ ಇದೆ. ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯ ಗುಣಮಟ್ಟ ಸರಿ ಇಲ್ಲ. ಅದನ್ನು ಸಂಗ್ರಹಿಸಿ ಇಡಲು ಬರಲ್ಲ.‌ ಈ ವರ್ಷ ಎಲ್ ನಿನೊ ಬಂದಿರುವ ಕಾರಣ ಬಿತ್ತನೆ ಒಂದು ತಿಂಗಳು ತಡವಾಗಿದೆ.

ಆ ಸಮಯದಲ್ಲಿ ಸಿಕ್ಕಾಪಟ್ಟೆ ಬಿಸಿಲು ಇತ್ತು. ಬಿಸಿಲಿನ ತಾಪಕ್ಕೆ ಬೆಳೆ ಕ್ಷಿಣಿಸಿದೆ. ಎಕರೆಗೆ ಕನಿಷ್ಠ ಎಂದರೆ ನಾಲ್ಕು ಕೆಜಿ ಈರುಳ್ಳಿ ಬಿತ್ತನೆ ಮಾಡ್ತೇವೆ. ಒಂದು ಎಕರೆಗೆ 100 ಕ್ವಿಂಟಾಲ್​ ಬೆಳೆ ಬರಬೇಕಿತ್ತು. ಆದ್ರೆ ಈ ಬಾರಿ ಒಂದು ಎಕರೆ 40 ರಿಂದ 50 ಕ್ವಿಂಟಾಲ್ ಬಂದ್ರೆ ಸಾಕು ಎನ್ನುವಂತಾಗಿದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರರ ತಿಪ್ಪೆಸ್ವಾಮಿ ಅವರು.

ಮಾರುಕಟ್ಟೆಯಲ್ಲಿ ಕ್ವಿಂಟಾಲ್​ ಈರುಳ್ಳಿ ₹5,000 ಇದೆ. ಗಾಡಿ ಬಾಡಿಗೆ ಕಮಿಷನ್ ಹಮಾಲಿ ಎಲ್ಲಾ ವೆಚ್ಚ ಸೇರಿ ಕೆಜಿಗೆ ₹55 ರಿಂದ ₹60 ತಲುಪಿದೆ.

ಇನ್ನು ಕಡಿಮೆ ಗುಣಮಟ್ಟದ ಈರುಳ್ಳಿ ₹40ರಿಂದ₹45 ಆಗಿದೆ. ಚಿಲ್ಲರೆ ₹60 ರಿಂದ ₹70ಕ್ಕೆ ಮಾರಬೇಕು.ಪ್ರಸ್ತುತ ದರ ಕೇಳಿ ಗ್ರಾಹಕರು ಖರೀದಿ 50 ರಷ್ಟು ಕಡಿಮೆ ಮಾಡಿದ್ದಾರೆ. ಹೀಗಾಗಿ ನಮಗೆ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಚಿಲ್ಲರೆ ಈರುಳ್ಳಿ ವ್ಯಾಪಾರಿ ಮಣಿ.

ಈರುಳ್ಳಿ ಖರೀದಿಸಿದ ಗ್ರಾಹಕರೊಬ್ಬರು ಮಾತನಾಡಿ, ಇಂದು ನಾನು ಎರಡೂವರೆ ಕೆಜಿ ಈರುಳ್ಳಿ ಖರೀದಿ ಮಾಡಿದೆ. ದರ ಮಾತ್ರ ಗಗನಕ್ಕೇರಿಕೆಯಾಗಿದೆ. ಎರಡೂವರೆ ಕೆಜಿಗೆ ₹250 ಕೊಟ್ಟಿದ್ದೇನೆ.‌ ಹೀಗಾದಾಗ ಈರುಳ್ಳಿ ಖರೀದಿ ಮಾಡುವುದು ಬಹಳ ಕಷ್ಟ ಆಗಲಿದೆ. ಈರುಳ್ಳಿ ತಿನ್ನುವುದನ್ನು ಬಿಡಬೇಕಷ್ಟೆ, ಈರುಳ್ಳಿ ದರ ಕೇಳಿದ್ರೆನೆ ಕಣ್ಣಲ್ಲಿ ನೀರು ಬರುತ್ತಿದೆ. ಇದ್ದಕ್ಕಿದ್ದಂತೆ ದರ ಏರಿಕೆ ಆಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಬೆಳಗಾವಿಯಲ್ಲೂ ಈರುಳ್ಳಿ ದರ ಏರಿಕೆ

ತಿಂಗಳ ಹಿಂದೆ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ 1 ಕ್ವಿಂಟಾಲ್​ಗೆ ₹2,500ಗೆ ಮಾರಾಟ ಆಗುತ್ತಿತ್ತು. ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆ ಆದ ಹಿನ್ನೆಲೆಯಲ್ಲಿ ಕ್ವಿಂಟಾಲ್​ಗೆ ₹4,000ರಿಂದ ₹5,000 ಗೆ ಏರಿಕೆ ಆಗಿದೆ.

ಕರ್ನಾಟಕದಲ್ಲಿ ಹೆಚ್ಚಿನ ಈರುಳ್ಳಿ ಮಾರುಕಟ್ಟೆಗೆ ಬರುವುದು ಒಂದು ತಿಂಗಳು ತಡ ಆಗಲಿದೆ. ಸೆಫ್ಟಂಬರ್ ಬದಲಿಗೆ ಅಕ್ಟೋಬರ್ ಗೆ ಬರಲಿದೆ. ಹೀಗಾಗಿ ಸದ್ಯ ಬೆಲೆ ಏರಿಕೆಯಾಗಿದೆ. ಮಹಾರಾಷ್ಟ್ರ ಈರುಳ್ಳಿ ಇನ್ನೂ ಡಿಸೆಂಬರ್ ರವರಿಗೂ ಬರುತ್ತದೆ. ಮಧ್ಯಪ್ರದೇಶ, ಪಂಜಾಬ್ ಈರುಳ್ಳಿ ಬೆಳೆ ಕೂಡಾ ಇದೆ. ಇದು ಉತ್ತರ ಭಾರತ ಮಾರುಕಟ್ಟೆ ಅಭಾವ ತಪ್ಪಿಸಿದೆ. ಇದು ಇಲ್ಲದೆ ಹೋಗಿದ್ದಾರೆ ಈಗಾಗಾಲೇ ದರ ಕೆಜಿಗೆ ₹ 100 ಗೆ ತಲುಪುತಿತ್ತು ಎನ್ನುತ್ತಿದ್ದಾರೆ ಬೆಂಗಳೂರು ಎಪಿಎಂಸಿ ಈರುಳ್ಳಿ ವರ್ತಕರು.

( ಲೇಖಕರು ಮಾರುಕಟ್ಟೆ ಧಾರಣೆ ವಿಶ್ಲೇಷಕರು)

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ