
ಧಾರವಾಡ| KPSC ಅಕ್ರಮ; ಪೊಲೀಸ್ ಅನುಮತಿ ನಿರಾಕರಣೆ ನಡುವೆಯೂ ಪ್ರತಿಭಟನೆಗೆ ಪಟ್ಟು
ಧಾರವಾಡ: ಪೊಲೀಸ್ ಅನುಮತಿ ನಿರಾಕರಣೆ ನಡುವೆಯೂ ಪ್ರತಿಭಟನೆ ನಡೆಸುವುದಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯವರು (ಅಕ್ಸಾ) ಪಟ್ಟುಹಿಡಿದಿದ್ದು, ಶ್ರೀನಗರ ವೃತ್ತ, ಮಿಚಿಗನ್ ಕಾಂಪೌಂಡ್‌ನ ಗಾರ್ಡನ್ ಬಳಿ ಪೊಲೀಸರನ್ನ ನಿಯೋಜಿಸಲಾಗಿದೆ.
ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿ ಮರುಪರೀಕ್ಷೆ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಮಿಚಿಗನ್ ಕಾಂಪೌಂಡ್‌ನ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಹೇಳಿದ್ದು, ಗಾರ್ಡನ್‌ನ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಿ ಸುತ್ತ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಶ್ರೀನಗರ, ಸಪ್ತಾಪುರ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರ ಭಾಗಶಃ ನಿರ್ಬಂಧಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಡಿಸಿಪಿ ಎಸ್.ಎನ್.ಶ್ರುತಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.