
ದುಃಖ ದುಮ್ಮಾನ ಹೇಳಿಕೊಂಡ ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರು
ಕೋಲಾರ: ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗಲಿಲ್ಲವೆಂದು ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಶಾಸಕರು, ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ದುಃಖ ದುಮ್ಮಾನ ಹೇಳಿಕೊಂಡಿದ್ದಾರೆ.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ ಶಾಸಕ ಪ‍್ರದೀಪ್ ಈಶ್ವರ್, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ (ಪಕ್ಷೇತರ) ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ವಿಧಾನಸೌಧದಲ್ಲಿ ಭೇಟಿಯಾದರು.
ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆಗೂ ಮುನ್ನ ಅವಿಭಜಿತ ಜಿಲ್ಲೆಯ ಕಾಂಗ್ರೆಸ್‌ನ ಕೆಲ ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಹಕ್ಕೊತ್ತಾಯ ಮಂಡಿಸಿದ್ದರು. ನಂತರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದಾಗ ಅಸಮಾಧಾನಿತ ಶಾಸಕರು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ, ತಮ್ಮ ಬೇಡಿಕೆಯ ಪಟ್ಟಿಯನ್ನು ಮುಂದಿಟ್ಟಿದ್ದರು.
ಈ ಮಧ್ಯೆ, ಬಂಗಾರಪೇಟೆ ನಾರಾಯಣಸ್ವಾಮಿ ಮುನಿಸು ತಣಿಯದ ಕಾರಣ ಅವರನ್ನು ಸಚಿವ ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಭೇಟಿಯಾಗಿದ್ದರು. ಆಗಲೂ ಅವರನ್ನು ಸಮಾಧಾನಪಡಿಸಲು ಸಾಧ್ಯವಾಗಿರಲಿಲ್ಲ. ಮಾಲೂರಿನಲ್ಲಿ ನಡೆದ ‘ಸಾಧನಾ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಅಂತರ ಕಾಯ್ದುಕೊಂಡಿದ್ದರು. ಡಿ.ಕೆ.ಶಿವಕುಮಾರ್ ಕರೆದರೂ ಹತ್ತಿರ ಹೋಗಿರಲಿಲ್ಲ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರು ಮುಖ್ಯಮಂತ್ರಿ ಜೊತೆ ಮಾತನಾಡಿ ಈ ಸಭೆ ನಿಗದಿಗೆ ಪ್ರಮುಖ ಪಾತ್ರ ವಹಿಸಿದ್ದರು.
ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವ ಕಾರಣ ಅರಿಯಲು ಶಾಸಕರು ಪ್ರಯತ್ನಿಸಿದ್ದಾರೆ. ಅಲ್ಲದೇ, ಇನ್ನಿತರ ರಾಜಕೀಯ ವಿಚಾರಗಳು, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿದೆ.
ರಾಜಕೀಯ ಪ್ರಾತಿನಿಧ್ಯಕ್ಕೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಿದ್ದಾರೆ. ನಿಗಮ ಮಂಡಲಿ ಹಾಗೂ ಇನ್ನಿತರ ನೇಮಕಗಳಲ್ಲಿ ಅವಕಾಶ ನೀಡುವಂತೆ ಕೋರಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಇದಲ್ಲದೇ, ಜಿಲ್ಲೆಗೆ ತುರ್ತಾಗಿ ಆಗಬೇಕಿರುವ ಅಭಿವೃದ್ಧಿ ವಿಚಾರಗಳ ಕುರಿತೂ ಚರ್ಚೆಯಾಗಿದೆ. ಪ್ರಮುಖವಾಗಿ ಎತ್ತಿನಹೊಳೆ ಯೋಜನೆ ಬಗ್ಗೆ ಎಲ್ಲರೂ ಪ್ರಸ್ತಾಪ ಮಾಡಿದ್ದಾರೆ. 2028ರ ವಿಧಾನಸಭೆ ಚುನಾವಣೆ ಒಳಗೆ ಎತ್ತಿನಹೊಳೆ ನೀರು ಹರಿಸಿ ಎರಡೂ ಜಿಲ್ಲೆಯ ಕೆರೆ ತುಂಬಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಯೋಜನೆ ವಿಳಂಬವಾಗಿದ್ದು, ಜಿಲ್ಲೆಯಲ್ಲಿ ಹೋರಾಟ ನಡೆದಿದೆ. ಯೋಜನೆ ಜಾರಿಯಾದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುತ್ತದೆ ಎಂಬ ವಾದ ಮುಂದಿಟ್ಟಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಟೊಮೆಟೊ ಮಾರುಕಟ್ಟೆಗೆ ಜಾಗ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ತ್ವರಿತಗೊಳಿಸುವಂತೆ ಕೊತ್ತೂರು ಮಂಜುನಾಥ್ ಹಾಗೂ ಎಂ.ಎಲ್.ಅನಿಲ್ ಕುಮಾರ್ ಕೇಳಿಕೊಂಡಿದ್ದಾರೆ.
ಈಗಾಗಲೇ 60 ಎಕರೆ ಜಾಗವಿದ್ದು, ಸಚಿವ ಸಂಪುಟಕ್ಕೆ ತಂದು ಜಾಗ ಮಂಜೂರು ಮಾಡಿಸುವಂತೆ ಹೇಳಿದ್ದಾರೆ. ವೈದ್ಯಕೀಯ ಕಾಲೇಜಿಗೆ ಅರಣ್ಯ ಜಾಗದ ಇತ್ಯರ್ಥಗೊಳಿಸುವಂತೆ ಕೋರಿದ್ದಾರೆ.
ಗೌರಿಬಿದನೂರು, ಬಾಗೇಪಲ್ಲಿ, ಮಾಲೂರು, ಬಂಗಾರಪೇಟೆ ಶಾಸಕರು ತಮ್ಮ ಕ್ಷೇತ್ರದಲ್ಲಿನ ಯುಜಿಡಿ ವ್ಯವಸ್ಥೆಗೆ ಒತ್ತು ನೀಡುವ ಬಗ್ಗೆ ಚರ್ಚಿಸಿದರು. ಈ ಎಲ್ಲಾ ವಿಚಾರ ಆಲಿಸಿದ ಡಿ.ಕೆ.ಶಿವಕುಮಾರ್, ‘ಸಚಿವ ಸ್ಥಾನ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ಕಲ್ಪಿಸುವುದು ಕಷ್ಟ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಾಸಕರನ್ನು ವಿಶ್ವಾಸಕ್ಕೆ ಪಡೆಯಲಾಗುವುದು. ಕ್ಷೇತ್ರದಲ್ಲಿ ತಾವೇ ಸಚಿವರು ಇದ್ದಂತೆ. ಕ್ಷೇತ್ರದ ವಿಚಾರದಲ್ಲಿ ಯಾವುದೇ ಸಮಯದಲ್ಲಿ ಬಂತು ಮಾತನಾಡಬಹುದು’ ಎಂದು ಭರವಸೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ.
ಈ ಚರ್ಚೆ ವೇಳೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಕೂಡ ಜೊತೆಗಿದ್ದು, ಪ್ರಮುಖ ಅಂಶಗಳನ್ನು ನಮೂದಿಸಿಕೊಂಡರು.
ಶಾಸಕಿ ರೂಪಕಲಾ ಹೊರಗುಳಿದಿದ್ದೇಕೆ?
ಕೋಲಾರ ಜಿಲ್ಲೆಯ ತಮ್ಮದೇ ಪಕ್ಷದ ಶಾಸಕರಿಂದ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಜಿಲ್ಲೆಯ ಇನ್ನುಳಿದ ಮೂವರು ಶಾಸಕರು, ಒಬ್ಬ ಎಂಎಲ್‌ಸಿ ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಹಲವಾರು ವಿಚಾರ ಚರ್ಚಿಸಿದ್ದಾರೆ. ಆದರೆ, ರೂಪಕಲಾ ಇರಲಿಲ್ಲ. ಸಚಿವ ಸಂಪುಟ ವಿಸ್ತರಣೆಗೆ ಮುನ್ನವೂ ಹೈಕಮಾಂಡ್ ಭೇಟಿಗೆ ಹೋದಾಗಲೂ ರೂಪಕಲಾ ಕಾಣಿಸಿಕೊಂಡಿರಲಿಲ್ಲ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಅಧಿವೇಶನದಲ್ಲಿ ಮಾಸಾಶನ/ಪಿಂಚಣಿ ಸಮಸ್ಯೆ ಸಂಬಂಧ ಸೋಮವಾರ ಉಪಮುಖ್ಯಮಂತ್ರಿಗೆ ಪ್ರಶ್ನೆ ಕೇಳುವುದಿತ್ತು. ಇದು ಜಿಲ್ಲೆಗೆ ಸಂಬಂಧಿಸಿದ ಗಂಭೀರವಾದ ಸಮಸ್ಯೆ. ಹೀಗಾಗಿ, ಮುಖ್ಯಮಂತ್ರಿ ಭೇಟಿಗೆ ಹೋಗಲು ಸಾಧ್ಯವಾಗಲಿಲ್ಲ’ ಎಂದರು.
ಸಿ.ಎಂ ಪಕ್ಕದಲ್ಲೇ ಕುಳಿತ ನಾರಾಯಣಸ್ವಾಮಿ!
ಸಚಿವ ಸ್ಥಾನ ಸಿಗದ ಕಾರಣ ಹಲವು ದಿನಗಳಿಂದ ಅಸಮಾಧಾನಗೊಂಡಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೊನೆಗೂ ತಣ್ಣಗಾದಂತೆ ಕಾಣುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಇದೇ ಮೊದಲ ಬಾರಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಪ್ತವಾಗಿ ಮಾತನಾಡಿದ್ದಾರೆ.
ಮಾಲೂರು ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಕರೆದರೂ ಸಮೀಪ ಹೋಗಿರಲಿಲ್ಲ. ಬೆಂಗಳೂರಿನಲ್ಲಿ ಸೋಮವಾರ ಅವರ ಪಕ್ಕದಲ್ಲೇ ಕುಳಿತು ಖುಷಿಖುಷಿಯಿಂದ ಮಾತನಾಡುತ್ತಿದ್ದದ್ದು ಕಂಡು ಬಂತು.
ಶಾಸಕರ ಮಾತಿಗೆ ಮನ್ನಣೆ ನೀಡಲು ಆಗ್ರಹ
ಸಚಿವ ಸ್ಥಾನ ವಿಚಾರ ಮುಗಿದು ಹೋದ ಕಥೆ. ಆದರೆ, ಕ್ಷೇತ್ರದ ವಿಚಾರದಲ್ಲಿ ಶಾಸಕರ ಮಾತಿಗೆ ಮನ್ನಣೆ ನೀಡುವಂತೆ, ವಿಶ್ವಾಸಕ್ಕೆ ಪಡೆದು ತೀರ್ಮಾನ ಕೈಗೊಳ್ಳುವಂತೆ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಶಾಸಕರಿಗೆ ಗೊತ್ತಾಗದಂತೆ ವರ್ಗಾವಣೆ ಮಾಡುವುದು, ಇನ್ನಿತರ ವಿಚಾರದಲ್ಲಿ ಇತರರು ಅನಗತ್ಯವಾಗಿ ತಲೆ ಹಾಕಲು ಅವಕಾಶ ನೀಡಬಾರದೆಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕೇಳಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-18-1836150831