
Kabini Dam:ಕಬಿನಿ ಜಲಾಶಯದಿಂದ 4 ದಿನದಲ್ಲಿ ಹರಿಯಿತು 3 ಟಿಎಂಸಿ ನೀರು, 5ಅಡಿ ಖಾಲಿ
ಬೆಂಗಳೂರು: ಕರ್ನಾಟಕವು ಕಾವೇರಿ ನೀರನ್ನು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಈಗಲೂ ಹೆಚ್ಚಿನ ನೀರು ಹರಿ ಬಿಡಲಾಗುತ್ತಿದೆ.
ಎರಡು ದಿನದ ಹಿಂದೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ ನಾಲ್ಕು ದಿನದಿಂದಲೂ ಮೈಸೂರು ಜಲಾಶಯದ ಕಬಿನಿ ಜಲಾಶಯದಿಂದ ಸುಮಾರು 13600 ಕ್ಯುಸೆಕ್ ನೀರು ಹೊರ ಹರಿಸಲಾಗುತ್ತಿದೆ. ಇದರಲ್ಲಿ ಕುಡಿಯುವುದಕ್ಕೂ ಸುಮಾರು 2 ಸಾವಿರ ಕ್ಯುಸೆಕ್ ನೀರು ಸೇರಿಕೊಂಡಿದೆ.
ಕಬಿನಿ ಜಲಾಶಯದಿಂದ ಶನಿವಾರದಿಂದ ಈವರೆಗೂ ನಿತ್ಯ 13600 ಕ್ಯುಸೆಕ್ ನಂತೆ ಸುಮಾರು 3 ಟಿಎಂಸಿ ನೀರು ಕಪಿಲಾ ನದಿ ಮೂಲಕ ಹರಿದು ಹೋಗಿದೆ. ನೀರಿನ ಮಟ್ಟವೂ 2282 ಅಡಿಯಿಂದ 2277 ಅಡಿಗೆ ಕುಸಿದಿದೆ. ಜಲಾಶಯದಲ್ಲಿ ಸದ್ಯ ಶೇ 85ರಷ್ಟು ನೀರು ಸಂಗ್ರಹವಾಗಿದೆ.
ಜಲಾಶಯಕ್ಕೆ ಈಗಲೂ 7326 ಕ್ಯುಸೆಕ್ ನೀರು ಹರಿದು ಬರುತ್ತಿದೆ. 13600 ಕ್ಯುಸೆಕ್ ಅನ್ನು ಹೊರ ಬಿಡುತ್ತಿದ್ದೇವೆ. ಜಲಾಶಯದಲ್ಲಿ 2277.93 ಅಡಿ ನೀರು ಲಭ್ಯವಿದೆ. 15.87 ಟಿಎಂಸಿ ನೀರು ಸಂಗ್ರಹವಿದೆ. ಇಲ್ಲಿ 19.58 ಟಿಎಂಸಿ ನೀರಿನೊಂದಿಗೆ 2284 ಅಡಿ ನೀರು ಸಂಗ್ರಹಿಸಲು ಅವಕಾಶವಿದೆ.
ಶನಿವಾರದಂದು ಜಲಾಶಯಕ್ಕೆ 8 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಆಗ ನೀರಿನ ಮಟ್ಟವು 2282 ಅಡಿಯಿತ್ತು. 18 ಟಿಎಂಸಿ ನೀರು ಸಂಗ್ರಹವಿತ್ತು.
ಜಲಾಶಯದ ಒಳಹರಿವು ಆಧಾರದ ಮೇಲೆ ಹೊರ ಹರಿವು ನಿರ್ಧರಿಸಿ ಬಿಡುಗಡೆ ಮಾಡಲಾಗುತ್ತದೆ. ಈ ವಾರ 13600 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದ್ದು. ಇದರಲ್ಲಿ ಕೆರೆ ತುಂಬಿಸಲು ಹಾಗೂ ಕುಡಿಯವುದಕ್ಕೂ ಸೇರಿದೆ ಎನ್ನುವುದು ಕಬಿನಿ ಜಲಾಶಯದ ಎಂಜಿನಿಯರ್ ಒಬ್ಬರ ವಿವರಣೆ.
ಮಂಡ್ಯ ಜಿಲ್ಲೆ ಕೃಷ್ಣಸಾಗರ ಜಲಾಶಯದಿಂದ 4917 ಕ್ಯುಸೆಕ್‌ನೀರನ್ನು ಹೊರಕ್ಕೆ ಬಿಡಲಾಗುತ್ತಿತ್ತು. ಬುಧವಾರ ಬೆಳಿಗ್ಗೆ ಇದನ್ನು 2294 ಕ್ಯುಸೆಕ್‌ಗೆ ಈಗ ಇಳಿಕೆ ಮಾಡಲಾಗಿದೆ. ಮೂರು ದಿನದಲ್ಲಿ ಇಲ್ಲಿಂದಲೇ ಸುಮಾರು ಅರ್ಧ ಟಿಎಂಸಿ ನೀರು ಹೊರ ಹೋಗಿದೆ.
ಬುಧವಾರದಂದು ಜಲಾಶಯದ ನೀರಿನ ಮಟ್ಟವು109.28 ಅಡಿ ಇದೆ. ಜಲಾಶಯದಲ್ಲಿ 31 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 1752 ಕ್ಯುಸೆಕ್ ನಷ್ಟಿದೆ.