Hemavati Dam:ತುಂಬದ ಹೇಮಾವತಿಯಿಂದಲೂ ಹೆಚ್ಚು ನೀರು ಬಿಡುಗಡೆ, ಕುಸಿದ ಜಲಾಶಯ ಮಟ್ಟ

Hemavati Dam:ತುಂಬದ ಹೇಮಾವತಿಯಿಂದಲೂ ಹೆಚ್ಚು ನೀರು ಬಿಡುಗಡೆ, ಕುಸಿದ ಜಲಾಶಯ ಮಟ್ಟ

Hemavati Dam:ತುಂಬದ ಹೇಮಾವತಿಯಿಂದಲೂ ಹೆಚ್ಚು ನೀರು ಬಿಡುಗಡೆ, ಕುಸಿದ ಜಲಾಶಯ ಮಟ್ಟ

ಬೆಂಗಳೂರು: ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೂಚಿಸಿದ ನಂತರ ಕಾವೇರಿ ಕಣಿವೆಯ ಜಲಾಶಯದಿಂದ ನೀರು ಬಿಡುಗಡೆಗೆ ಜಲಸಂಪನ್ಮೂಲ ಇಲಾಖೆ ಮುಂದಾಗಿದ್ದು, ಈವರೆಗೂ ಭರ್ತಿಯಾಗದ ಹೇಮಾವತಿ ಜಲಾಶಯದಿಂದಲೂ ಹೆಚ್ಚಿನ ನೀರು ಹರಿಸಲಾಗುತ್ತಿದೆ.

ಈಗಾಗಲೇ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯದಿಂದ ಒಳಹರಿವಿಗಿಂತ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ. ಈಗ ಹೇಮಾವತಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಸೋಮವಾರ ಬೆಳಿಗ್ಗೆಯಿಂದ ಹೆಚ್ಚಿಸಲಾಗಿದೆ. ಕುಡಿಯುವ ನೀರಿಗೆಂದು ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಹೆಚ್ಚಿನ ನೀರು ನದಿ ಮೂಲಕ ಹರಿದು ಹೋಗುತ್ತಿದೆ.

ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಹೇಮಾವತಿ ಜಲಾಶಯಕ್ಕೆ ಈಗ 2727 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 7275 ಕ್ಯುಸೆಕ್‌ ಇದೆ. ಭಾನುವಾರದವರೆಗೂ 5500 ಕ್ಯುಸೆಕ್‌ ನೀರನ್ನು ಹೇಮಾವತಿ ಜಲಾಶಯದಿಂದ ಹೊರ ಬಿಡಲಾಗುತ್ತಿತ್ತು. ಈಗ ಅದನ್ನು ಮತ್ತೆ ಸುಮಾರು 1800 ಕ್ಯುಸೆಕ್‌ ನಷ್ಟು ಏರಿಕೆ ಮಾಡಲಾಗಿದೆ.

ಜಲಾಶಯದ ನೀರಿನ ಮಟ್ಟವು 2912.70 ಅಡಿಯಿದೆ. ಸದ್ಯ ಶೇ 78ರಷ್ಟು ನೀರು ಸಂಗ್ರಹವಿದ್ದು, 28.78 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 2921.84 ಅಡಿ ನೀರಿತ್ತು. 37ಟಿಎಂಸಿ ನೀರು ಸಂಗ್ರಹದೊಂದಿಗೆ ಜಲಾಶಯ ಭರ್ತಿಯಾಗಿತ್ತು. ಇಲ್ಲಿನ ಗರಿಷ್ಠ ಮಟ್ಟ 2292 ಅಡಿ. ಸಂಗ್ರಹ ಸಾಮರ್ಥ್ಯ 37.10 ಟಿಎಂಸಿ.

ಭಾನುವಾರದಂದು ಜಲಾಶಯಕ್ಕೆ 1892 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಜಲಾಶಯದಲ್ಲಿ ಶೇ 79ರಷ್ಟು ನೀರು ಸಂಗ್ರಹವಿತ್ತು. ಹೊರಹರಿವು ಹೆಚ್ಚಿಸಿರುವುದರಿಂದ ಸುಮಾರು ಅರ್ಧ ಟಿಎಂಸಿ ನೀರು ಕಡಿಮೆಯಾಗಿದ್ದು ಶೇ 78ಕ್ಕೆ ಇಳಿಕೆಯಾಗಿದೆ.

ಚಿಕ್ಕಮಗಳೂರು, ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಾದರೆ ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತದೆ. ಕಳೆದ ವರ್ಷ ಜಲಾಶಯ ಭರ್ತಿಯಾಗಿ ಹೆಚ್ಚಿನ ನೀರನ್ನು ಹೇಮಾವತಿ ನದಿ ಮೂಲಕ ಕೆಆರ್‌ ಎಸ್‌ ಜಲಾಶಯಕ್ಕೆ ಹರಿ ಬಿಡಲಾಗಿತ್ತು. ಈ ಬಾರಿ ಈವರೆಗೂ ಜಲಾಶಯ ಭರ್ತಿಯಾಗಿಲ್ಲ. ಆದರೂ ಹೆಚ್ಚಿನ ನೀರು ಹರಿಸಲಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಹೇಮಾವತಿ ಜಲಾಶಯದಿಂದ ಹರಿಬಿಡುವ ನೀರು ನೇರವಾಗಿ ತಮಿಳುನಾಡಿಗೆ ಹೋಗುವುದಿಲ್ಲ. ಹೇಮಾವತಿ ನದಿ ಮೂಲಕ ಕಾವೇರಿ ನದಿ ಸೇರಿ ನಂತರ ಕೃಷ್ಣರಾಜಸಾಗರ ಜಲಾಶಯವನ್ನು ಸೇರುತ್ತದೆ. ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಸಮೀಪದ ಸಂಗಮ ಕ್ಷೇತ್ರದಲ್ಲಿ ಹೇಮಾವತಿ ಹಾಗೂ ಕಾವೇರಿ ನದಿ ಸಂಗಮದೊಂದಿಗೆ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯವನ್ನು ಸೇರುವುದರಿಂದ ಆ ಜಲಾಶಯದ ನೀರಿನ ಮಟ್ಟ ಏರಿಕೆಗೆ ಕಾರಣವಾಗುತ್ತದೆ. ‌

ಹೇಮಾವತಿ ಜಲಾನಯನ ಪ್ರದೇಶವು ಹಾಸನ, ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಯವರೆಗೂ ಇದೆ. ಹೇಮಾವತಿ ನಾಲೆಗಳ ಮೂಲಕ ಈ ಜಿಲ್ಲೆಗಳ ನೀರಾವರಿಗೆ ನೀರನ್ನು ಹರಿಸಲಾಗುತ್ತಿದೆ.

ಮೂರು ದಿನದ ಹಿಂದೆ ಬೆಂಗಳೂರಿನ ವಿಕಾಸಸೌಧದಲ್ಲಿ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎಂ ಶಿವಲಿಂಗೇಗೌಡ ರವರು ಸೇರಿದಂತೆ ಹಾಸನ ಕೊಡಗು, ತುಮಕೂರು ಮಂಡ್ಯ ಜಿಲ್ಲೆಗಳ ಶಾಸಕರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಹೇಮಾವತಿ ಜಲಾಶಯದ ನೀರಿನ ಲಭ್ಯತೆ, ನೀರಾವರಿ ವ್ಯವಸ್ಥೆ, ಜಲಾಶಯದ ನೀರಿನ ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಅಗತ್ಯವಿರುವ ನೀರಾವರಿ ಸೌಲಭ್ಯಗಳ ಕುರಿತು ಮಹತ್ವದ ಚರ್ಚಿಸಲಾಗಿತ್ತು. ಬರಗಾಲ ಎದುರಾಗಿರುವ ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸುವ ಸಲುವಾಗಿ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ಜನ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ನೀರನ್ನು ಹರಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಂಡು ಈಗಾಗಲೇ ನೀರು ಹರಿಯುತ್ತಿದೆ.

ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಕೆ ಮಾಡಬಾರದು. ಬದಲಿಗೆ ಕುಡಿಯುವ ನೀರಿಗೆ ಬಳಸಲು ಸಹಕರಿಸಬೇಕು ಎಂದು ಮನವಿ ಮಾಡಲಾಗಿತ್ತು. ಪರಿಸ್ಥಿತಿ ನೋಡಿಕೊಂಡು ಬೆಳೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ