
Farming: ಹಸಿ ಖರ್ಜೂರ ಬೆಳೆದು ₹10 ಲಕ್ಷ ಆದಾಯ ಪಡೆದ ಇಸ್ರೋ ಮಾಜಿ ಸಮಾಜ ವಿಜ್ಞಾನಿ
ಬೆಂಗಳೂರು: ಖರ್ಜೂರ ಎಂದ ತಕ್ಷಣ ನಾವು ಅದು ಮರಳುಗಾಡಿನಲ್ಲಿ ಬೆಳೆಯುವ ಆಹಾರೋತ್ಪನ್ನ ಎಂದುಕೊಳ್ಳುತ್ತೇವೆ. ಅದರೆ, ಕರ್ನಾಟಕದ ಬರದ ನಾಡಿನಲ್ಲಿಯೇ ಹಸಿ ಖರ್ಜೂರವನ್ನು(dates) ಬೆಳೆದು ಉತ್ತಮ ಆದಾಯವನ್ನು ಕೃಷಿಕರೊಬ್ಬರು ಪಡೆಯುತ್ತಿದ್ದಾರೆ. ಅದೂ ಅವರು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಲ್ಲಿ ಸಮಾಜ ವಿಜ್ಞಾನಿಯಾಗಿದ್ದವರು ಅಲ್ಲಿನ ಕೆಲಸ ಬಿಟ್ಟು ಒಂದು ದಶಕದಿಂದಲೂ ಕೃಷಿಯಲ್ಲಿ ನಿರತರು.
ತಮ್ಮ ಪರಿಚಯಸ್ಥರು, ಮೊದಲಿನಿಂದಲೂ ಖರೀದಿ ಮಾಡುತ್ತಿವವರ ಸಂಪರ್ಕ ಜಾಲದೊಂದಿಗೆ ಮಾರುಕಟ್ಟೆ ರೂಪಿಸಿಕೊಂಡಿರುವ ಅವರು ಹಸಿ ಖರ್ಜೂರದ ಜತೆಗೆ ಬಹು ಬೆಳೆ ಪದ್ದತಿ ಮೂಲಕ ಕೃಷಿ ಖುಷಿ ಅನುಭವಿಸುತ್ತಿದ್ಧಾರೆ.
ಅವರ ಹೆಸರು ದಿವಾಕರ್ ಚನ್ನಪ್ಪ. ಬೆಂಗಳೂರು ನಗರದ ದೊಡ್ಡ ಬೇಗೂರಿನವರು. ಓದಿದ್ದು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ದಿವಾಕರ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ಇಸ್ರೋದಲ್ಲಿ ಸಮಾಜ ವಿಜ್ಞಾನಿಯಾಗಿಯೂ ಕಾರ್ಯನಿರ್ವಹಿಸಿದರು. ಆದರೆ, ಅವರಿಗೆ ಕೃಷಿಯಲ್ಲಿ ಆಸಕ್ತಿಯಿತ್ತು. ತಂದೆ ಗೌರಿಬಿದನೂರು ಹೊರ ವಲಯದ ಸಾಗಾನಹಳ್ಳಿಯಲ್ಲಿ ಹಿಂದೆ ಖರೀದಿಸಿದ್ದ 10 ಎಕರೆ ಜಮೀನು ಇತ್ತು. ಅಲ್ಲಿಯೇ ತನ್ನೆಲ್ಲಾ ಯೋಚನೆಗಳಿಗೆ ರೂಪ ಕೊಡಬೇಕು ಎಂದು 12 ವರ್ಷದ ಹಿಂದೆ ತೆರಳಿದರು. ಪ್ರಯೋಗಗಳನ್ನು ಶುರು ಮಾಡಿದರು. ತಮ್ಮ ತೋಟಕ್ಕೆ ಅವರು ನೀಡಿದ ಹೆಸರು ಮರಳಿ ಮಣ್ಣಿಗೆ.
2 ಎಕರೆಯಲ್ಲಿ ಅವರು ಎಕರೆಯಲ್ಲಿ ಖರ್ಜೂರ ಬೆಳೆಯುವ ಯೋಚನೆ ಮಾಡಿದರು. ಅದು ಸಂಪೂರ್ಣ ಸಾವಯವ ಪದ್ದತಿ ಬೆಳೆಸಿ ಹಸಿ ಖರ್ಜೂರ ಬೆಳೆದರೆ ಹೇಗೆ ಎಂದು ಯೋಚಿಸಿ ಮಸ್ಕಟ್‌ನಿಂದ ಖರ್ಜೂರದ ಬೀಜಗಳನ್ನು ತಂದರು. ಖರ್ಜೂರ ಕೃಷಿಯ ಭಿನ್ನ ಮಾದರಿಗಳ ಕುರಿತು ತಿಳಿದುಕೊಂಡರು. ಎರಡು ಎಕರೆಗೆ ಬೇಕಾದಷ್ಟು ಬೆಳೆ ಆರಂಭಿಸಿದರು. ನಾಲ್ಕು ವರ್ಷದಲ್ಲಿ ಇದು ಫಲ ಕೊಡಲು ಆರಂಭಿಸಿತು. ಇದು ಸಂಪೂರ್ಣ ಒಂದು ವರ್ಷದ ಬೆಳೆ. ಆಗಸ್ಟ್ ನಲ್ಲಿ ಫಲ ನೀಡುತ್ತದೆ. ಮೊದಲ ವರ್ಷವೇ ಉತ್ತಮ ಫಲ ಬಂದಿತ್ತು. ಕಡಿಮೆ ನೀರಿನಲ್ಲೂ ಇದು ಬೆಳೆಯಲಿದೆ. ಕೆಲವೊಂದು ವರ್ಷ ಹೆಚ್ಚು ಮಳೆಯಾಗಿ ಫಲ ಕಡಿಮೆ ಬಂದಿದ್ದೂ ಇದೆ.
ಖರ್ಜೂರದಲ್ಲಿ ಗಂಡು ಹಾಗೂ ಹೆಣ್ಣು ಎನ್ನುವ ಬೀಜವಿದೆ. ಗಂಡು ಗಿಡದಲ್ಲಿ ಕಾಯಿಗಳು ನಿಲ್ಲುತ್ತಿರಲಿಲ್ಲ. ಇದಕ್ಕೆ ಪ್ರಯೋಗ ಮಾಡುವ ಸ್ಥಿತಿಯೂ ನಿರ್ಮಾಣವಾಯಿತು. ಕೊನೆಗೆ ಅಂಗಾಂಗ ಕೃಷಿ( ಟಿಶ್ಠು ಕಲ್ಚರ್) ಬಳಕೆ ಮಾಡಿಕೊಂಡು ಹೊಸ ಮಾರ್ಗ ಕಂಡುಕೊಂಡರು. ಇದರಿಂದ ಒಳ್ಳೆಯ ಇಳುವರಿಯೂ ಬರತೊಡಗಿತು.
ಜನರಿಗೆ ಖರ್ಜೂರ ಎಂದರೆ ಒಣ ಖರ್ಜೂರ ಎನ್ನುವ ಕಲ್ಪನೆಯೇ ಅಧಿಕ. ಹಸಿ ಖರ್ಜೂರದ ಕುರಿತು ತಿಳಿಸಿಕೊಡಲು ಮೊದಲು ಕುಟುಂಬದವರು, ಪರಿಚಯಸ್ಥರಿಗೆ ದಿವಾಕರ್ ನೀಡಿದರು. ಇದರ ರುಚಿ ಹಲವರಿಗೆ ಹಿಡಿಸಿತು. ಬೆಂಗಳೂರು ನಗರಕ್ಕೂ ಅದನ್ನು ವಿಸ್ತರಿಸಿ ಪರಿಚಯದರಿಗೆ ನೇರವಾಗಿ ಕೊಡಲು ಆರಂಭಿಸಿದರು.
ಈಗ ದಿವಾಕರ್ ಅವರ ಖರ್ಜೂರ ಬಳಗ ದೊಡ್ಡದಾಗಿ ಬೆಳೆದಿದೆ. ಸಾವಯವ ಪದ್ದತಿ ಬಳಸಿ ಖರ್ಜೂರ ಬೆಳೆಯುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿತು. ಈಗ ದಿವಾಕರ್ ಅವರು ಎಕರೆಗೆ 3.50ಟನ್ ನಿಂದ 4 ಟನ್ ವರೆಗೂ ಫಲ ಪಡೆಯುತ್ತಾರೆ. ಕೆಜಿಗೆ ₹300 ರಿಂದ ₹350ವರೆಗೂ ಮಾರಾಟವಾಗುತ್ತದೆ. ಪ್ರತಿ ವರ್ಷ ಆದಾಯ ₹8 ಲಕ್ಷದಿಂದ ₹10 ಲಕ್ಷದವರೆಗೂ ತಲುಪಿದೆ. ಇನ್ನೂ ವಿಸ್ತರಣೆಗೆ ಅವಕಾಶವಿದ್ದರೂ ಅವರು 2 ಎಕರೆಯಲ್ಲಿ ಮಾತ್ರ ಖರ್ಜೂರ ಕೃಷಿ ಮುಂದುವರೆಸಿದ್ದಾರೆ. ಉಳಿದ ತೋಟದಲ್ಲಿ ಬಗೆಬಗೆಯ ಹಣ್ಣುಗಳು, ತರಕಾರಿ, ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಾರೆ. ಎಲ್ಲವೂ ಸೇರಿದಂತೆ ಆದಾಯವೂ ಚೆನ್ನಾಗಿದೆ.
ನಾವು ಬೆಳೆಯುವ ಯಾವುದೇ ಉತ್ಪನ್ನಗಳಿಗೆ ಆದಾಯದ ಸ್ವರೂಪ ಹೆಚ್ಚು ನೀಡಲು ಹೋಗೋಲ್ಲ. ಪರಿಚಯಸ್ಥರು, ಸಂಬಂಧಿಕರು, ಬಳಗದವರಿಗೆ ಬೆಳೆದ ಉತ್ಪನ್ನ ನೀಡುತ್ತೇನೆ. ಎಲ್ಲರೂ ಬಳಸಿ ಖುಷಿಪಡುತ್ತಾರೆ. ಅಂತಹ ಖುಷಿಯನ್ನು ಕೃಷಿ ನೀಡುತ್ತಿದೆ ಎನ್ನುವುದು ದಿವಾಕರ್ ಅವರ ನುಡಿ.
ಒಣ ಖರ್ಜೂರ ಹೆಚ್ಚು ದಿನ ಬಾಳಲು ಕೆಲವು ಹಾಗೂ ತಾಜಾತನ ಉಳಿಸಿಕೊಳ್ಳಲು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಆದರೆ, ಹಸಿ ಖರ್ಜೂರ ಕ್ಯಾಲ್ಸಿಯಂ, ಕಬ್ಬಿಣ ಸಹಿತ ಹಲವು ರೀತಿಯ ಅಂಶಗಳನ್ನು ಹೆಚ್ಚು ಹೊಂದಿದೆ. ಕನಿಷ್ಠ 15 ದಿನ ಈ ಹಣ್ಣನ್ನು ಇಟ್ಟು ತಿನ್ನಬಹುದು. ಕೆಲವೊಮ್ಮೆ 1 ತಿಂಗಳವರೆಗೂ ಇರಲಿದೆ ಎಂದು ಹೇಳುತ್ತಾರೆ.