
ಚಿಕ್ಕಬಳ್ಳಾಪುರ: ಸಚಿವರು ಪಾಲಿಸುವರೇ ‘ಶಿಷ್ಟಾಚಾರ’ದ ಶಿಸ್ತು !
ಚಿಕ್ಕಬಳ್ಳಾಪುರ: ‘ಯಾರೇ ಆಗಲಿ ಶಿಷ್ಟಾಚಾರ ಪಾಲಿಸಬೇಕು. ಎಲ್ಲರೂ ವೇದಿಕೆಯಲ್ಲಿ ಕುಳಿತುಕೊಳ್ಳುವಂತಿಲ್ಲ ನೀವು ಕೆಳಗಿಳಿಯಿರಿ’–2023ರ ಜೂನ್ 11ರಂದು ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಚಾಲನೆ ನೀಡದ ವೇಳೆ ಮಾಡಿದ ಶಿಷ್ಟಾಚಾರದ ಪಾಠವಿದು. ಸುಧಾಕರ್ ಸಚಿವರಾಗಿ ಕೆಲವೇ ದಿನಗಳಾಗಿದ್ದವು.
ಈಗ ಡಾ.ಎಂ.ಸಿ ಸುಧಾಕರ್ ಸಚಿವರಲ್ಲ. ಚಿಂತಾಮಣಿ ಶಾಸಕರು. ಸಾರಿಗೆ ಸಚಿವ ಬಿ.ಎಸ್.ಸುರೇಶ್ (ಬೈರತಿ ಸುರೇಶ್) ಅವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 2023ರ ಜೂನ್ 11ರಿಂದ ತಮ್ಮ ಉಸ್ತುವಾರಿ ಅಧಿಕಾರ ಕೊನೆಗೊಳ್ಳುವವರೆಗೂ ಡಾ.ಎಂ.ಸಿ ಸುಧಾಕರ್ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು, ಕೆಡಿಪಿ ಸಭೆಗಳಲ್ಲಿ ಶಿಷ್ಟಾಚಾರ ಪಾಲನೆಯ ಬಗ್ಗೆ ನಿಗಾಹಿಸುತ್ತಿದ್ದರು. ಈ ಬಗ್ಗೆ ತಮ್ಮದೇ ಪಕ್ಷದ ಮುಖಂಡರಿಗೆ ಪಾಠ ಸಹ ಹೇಳಿ ಕೆಂಗಣ್ಣಿಗೂ ಗುರಿಯಾಗುತ್ತಿದ್ದರು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಇಲ್ಲಿಯವರೆಗೆ ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಈ ಎರಡೂ ಭೇಟಿಗಳಲ್ಲಿ ಎದ್ದು ಕಂಡಿದ್ದು ಶಿಷ್ಟಾಚಾರದ ಉಲ್ಲಂಘನೆ. ಇದು ವಿರೋಧ ಪಕ್ಷ ಬಿಜೆಪಿ ಪಾಲಿಗೂ ವಾಗ್ದಾಳಿಗೆ ಅಸ್ತ್ರವಾಗಿದೆ. ‘ಸರ್ಕಾರಿ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗುತ್ತಿದೆ’ ಎಂದು ಬಿಜೆಪಿ ಮುಖಂಡರು ಟೀಕಿಸುತ್ತಿದ್ದಾರೆ.
ಸಚಿವರಿಂದ ಶಿಷ್ಟಾಚಾರದ ಪಾಠ: ‘ಶಕ್ತಿ’ ಯೋಜನೆಗೆ ಚಾಲನೆ ನೀಡಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ವೇದಿಕೆಗೆ 2023ರ ಜೂನ್ 11ರಂದು ಡಾ.ಎಂ.ಸಿ ಸುಧಾಕರ್ ಬರುತ್ತಿದ್ದಂತೆಯೇ ಅವರ ಹಿಂದೆಯೇ ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಸೇರಿದಂತೆ ಅಪಾರ ಸಂಖ್ಯೆ ಜನರು ವೇದಿಕೆ ಮೇಲೇರಿದರು. ಆಗ ಜಿಲ್ಲಾಧಿಕಾರಿ ಅವರು ಶಿಷ್ಟಾಚಾರ ಪಾಲಿಸಿ ಎಂದು ಹೇಳುತ್ತಲೇ ಇದ್ದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸೇರಿದಂತೆ ಹಲವರು ಸಚಿವರ ಜೊತೆ ವೇದಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಗೊಂದಲ ಮೂಡಿತು.
ಆಗ ತಕ್ಷಣವೇ ಮೈಕ್ ಪಡೆದ ಡಾ.ಎಂ.ಸಿ.ಸುಧಾಕರ್, ‘ಯಾರು ಯಾರು ವೇದಿಕೆಯಲ್ಲಿ ಇರಬೇಕು ಎನ್ನುವ ಬಗ್ಗೆ ಹೇಳಿದರು. ಉಳಿದವರು ವೇದಿಕೆಯಿಂದ ನಿರ್ಗಮಿಸಿ. ಶಿಷ್ಟಾಚಾರ ಪಾಲಿಸಿ’ ಎಂದರು. ಆಗ ಅಧಿಕಾರಿಗಳು, ನಗರಸಭೆ ಸದಸ್ಯರು ಹಾಗೂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಮುಖಂಡರು ವೇದಿಕೆಯಿಂದ ಕೆಳಕ್ಕೆ ಇಳಿದರು.
ಈ ಒಂದು ಸಭೆಗೆ ಮಾತ್ರ ಸುಧಾಕರ್ ಶಿಷ್ಟಾಚಾರದ ಪಾಠ ಸೀಮಿತವಾಗಲಿಲ್ಲ. ಬಹಳಷ್ಟು ಸರ್ಕಾರಿ ಸಭೆ, ಸಮಾರಂಭಗಳಲ್ಲಿಯೂ ಈ ಮಾತು ಪುನರುಚ್ಚರಿಸಿದರು. ಆದ ಕಾರಣ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಮುಖಂಡರು ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಇರುತ್ತಿರಲಿಲ್ಲ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಮುಖಂಡರು: ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆ.5ರಂದು ಸಚಿವ ಬಿ.ಎಸ್. ಸುರೇಶ್, ಜಿಲ್ಲಾ ಪ್ರಕೃತಿ ವಿಕೋಪ ಮತ್ತು ಬರ ಪರಿಸ್ಥಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಪಕ್ಷದ ಪದಾಧಿಕಾರಿಗಳಷ್ಟೇ ಅಲ್ಲ ಕಾರ್ಯಕರ್ತರು ಸಹ ಕೆಡಿಪಿ ಸಭೆ ನಡೆಯುತ್ತಿದ್ದ ಸಭಾಂಗಣದಲ್ಲಿ ಆಸೀನರಾಗಿದ್ದರು. ಈ ಹಿಂದೆ ಡಾ.ಎಂ.ಸಿ ಸುಧಾಕರ್ ಉಸ್ತುವಾರಿ ಸಚಿವರಾಗಿದ್ದ ವೇಳೆ ಈ ಹಾಜರಿಗೆ ಅವಕಾಶವಿರಲಿಲ್ಲ. ಆ.15ರ ಸ್ವಾತಂತ್ರ್ಯದ ದಿನದ ಕಾರ್ಯಕ್ರಮದಲ್ಲಿಯೂ ಇದು ಮುಂದುವರಿದಿತ್ತು.
ಬಿ.ಎಸ್ ಸುರೇಶ್ ಜಿಲ್ಲೆಗೆ ಮೊದಲ ಬಾರಿಗೆ ಉಸ್ತುವಾರಿ ಸಚಿವರಾದರೂ ಅವರಿಗೆ ಆಡಳಿತ ಮತ್ತು ರಾಜಕೀಯದ ಅನುಭವ ಅಪಾರವಾಗಿದೆ. ಈ ಎಲ್ಲ ದೃಷ್ಟಿಯಿಂದ ಮುಂದಿನ ಸಭೆಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯ ಶಿಸ್ತು ಕಾಪಾಡುವರೇ ಅಥವಾ ಶಿಷ್ಟಾಚಾರ ಉಲ್ಲಂಘನೆಗಳು ಮುಂದುವರಿಯುತ್ತದೆಯೇ ಎನ್ನುವ ಚರ್ಚೆ ಇದೆ.
ಶಿಷ್ಟಾಚಾರದ ವಿಚಾರವಾಗಿ ಚಿಕ್ಕಬಳ್ಳಾಪುರದ ಕೆಲವು ಅಧಿಕಾರಿಗಳ ಜೊತೆ ಮಾತನಾಡಿದರೆ, ‘ಮುಖಂಡರು ನಮ್ಮ ಮಾತು ಕೇಳುವರೇ’ ಎಂದು ಅಸಹಾಯಕತೆ ವ್ಯಕ್ತಪಡಿಸುವರು.
ಚುನಾಯಿತ ಜನಪ್ರತಿನಿಧಿಗಳು, ನಾಮನಿರ್ದೇಶನ ಸದಸ್ಯರು ಹೀಗೆ ಕೆಲವರನ್ನು ಶಿಷ್ಟಾಚಾರದ ಪ್ರಕಾರ ವೇದಿಕೆಗೆ ಆಹ್ವಾನಿಸಬೇಕಾಗುತ್ತದೆ. ಆದರೆ ಮುಖಂಡರೆಲ್ಲರೂ ವೇದಿಕೆ ಮೇಲಿರುವರು. ನಾವು ಏಕೆ ಮಾತನಾಡಿ ಕೆಟ್ಟವರಾಗಬೇಕು. ನಮ್ಮ ಮಾತನ್ನು ಮುಖಂಡರು ಕೇಳುವರೇ’ ಎಂದು ಅಧಿಕಾರಿಗಳು ನುಡಿಯುವರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-16-1150872863