
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬರದ ಛಾಯೆ, ಮೇವಿನ ಕೊರತೆ ಆತಂಕ
ಚಿಕ್ಕಮಗಳೂರು: ಜಿಲ್ಲೆಯ ಬಯಲು ಸೀಮೆ ಹಲವು ವರ್ಷಗಳ ಬಳಿಕ ಮಳೆ ಕೊರತೆ ಎದುರಿಸುತ್ತಿದೆ. ಎಲ್ಲೆಡೆ ಬರದ ಛಾಯೆ ಇದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಸದ್ಯಕ್ಕೆ ಮಲೆನಾಡಿನಲ್ಲಿ ಮಳೆ ಸಣ್ಣದಾಗಿ ಬರುತ್ತಿದೆ. ಬಯಲು ಸೀಮೆಯಲ್ಲಿ ಮಳೆ ಕೊರತೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ರಾಗಿ ಮತ್ತು ಮುಸುಕಿನ ಜೋಳ ಬಿತ್ತನೆಯಾದರೆ ಜಾನುವಾರುಗಳಿಗೆ ಮೇವಿನ ಕೊರತೆಯಾಗುವುದಿಲ್ಲ. ಆದರೆ, ಸದ್ಯದ ಅಂಕಿ–ಅಂಶಗಳ ಪ್ರಕಾರ ಈ ಎರಡು ಬೆಳೆಗಳ ಬಿತ್ತನೆ ಅತ್ಯಂತ ಕಡಿಮೆಯಾಗಿದೆ. ಇದು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ರೈತರಲ್ಲಿ ಆತಂಕ ಸೃಷ್ಟಿಸಿದೆ.
ರಾಗಿ ಶೇ 2ರಷ್ಟು ಮಾತ್ರ ಬಿತ್ತನೆಯಾಗಿದ್ದರೆ, ಮುಸುಕಿನ ಜೋಳ ಶೇ 21ರಷ್ಟು ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ಮುಸುಕಿನ ಜೋಳ ಕೂಡ ಮಳೆ ಕೊರತೆಯಿಂದ ಹಾಳಾಗಿದೆ. ಅಲ್ಲದೇ ಬಿಳಿಸುಳಿ ರೋಗಕ್ಕೂ ತುತ್ತಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜಾನುವಾರು ಮೇವಿನ ಕೊರತೆ ಎದುರಾಗುವ ಆತಂಕ ರೈತರಲ್ಲಿದೆ.
ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ, ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ಆದರೆ, ವಾಸ್ತವ ಪರಿಸ್ಥಿತಿಯೇ ಬೇರೆ ಇದೆ. ಬಯಲು ಸೀಮೆಯ ರೈತರು ಈಗಾಗಲೇ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಮೇವು ತರಿಸುತ್ತಿದ್ದಾರೆ. ಮೆಕ್ಕೆಜೋಳದಿಂದ ಉತ್ಪಾದಿಸುವ ಸೈಲೇಜ್ ಮೇವಿನ ಮೊರೆ ಹೋಗಿದ್ದಾರೆ.
ಪಶು ಸಂಗೋಪನಾ ಇಲಾಖೆ ಮಾಹಿತಿಗೂ ವಾಸ್ತವ ಸ್ಥಿತಿಗೂ ಭಾರಿ ವ್ಯತ್ಯಾಸವಿದೆ ಎಂಬುದು ರೈತರ ಅಭಿಪ್ರಾಯ. ವಾಸ್ತವದಲ್ಲಿ ಮೇವಿನ ಕೊರತೆ ಇದ್ದರೂ ಬಿತ್ತನೆ ಬೀಜದ ಮಾರಾಟ ವಹಿವಾಟುಗಳನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ಮೇವಿನ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಮೇವಿನ ಕೊರತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಾರೆ.
ಮೇವು ಬ್ಯಾಂಕ್ ತೆರೆಯಲು ತಯಾರಿ
ಜಿಲ್ಲೆಯ ಬಯಲು ಸೀಮೆ ತಾಲ್ಲೂಕುಗಳಲ್ಲಿ ಮೇವಿನ ಕೊರತೆ ಕಂಡು ಬಂದರೆ ಪರ್ಯಾಯವಾಗಿ ಬೇರೆ ಕಡೆಗಳಲ್ಲಿ ಮೇವು ಬೆಳೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕಡೂರು ತಾಲ್ಲೂಕಿನ 9 ಗ್ರಾಮಗಳಲ್ಲಿ ಮತ್ತು ಅಜ್ಜಂಪುರ ತಾಲ್ಲೂಕಿನ 2 ಗ್ರಾಮಗಳಲ್ಲಿ ಕಂದಾಯ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಮೇವು ಬೆಳೆಯಲು ಸ್ಥಳ ಗುರುತಿಸಲಾಗಿದೆ.
ಮತ್ತೊಂದೆಡೆ ಮೇವು ಬ್ಯಾಂಕ್ ತೆರೆಯಲು ಪಶು ಸಂಗೋಪನಾ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಜಾನುವಾರುಗಳು ಹೊಂದಿರುವ ಮಾಲೀಕರು ಮನೆ-ಮನೆಗೆ ಇಲಾಖೆಯ ಸಿಬ್ಬಂದಿ ಮತ್ತು ಪಶುಸಖಿಯರು ಭೇಟಿ ನೀಡಿ ಮೇವು ಲಭ್ಯತೆಯ ಕುರಿತು ಸಮೀಕ್ಷೆ ಕಾರ್ಯವನ್ನೂ ಅಧಿಕಾರಿಗಳು ಮಾಡುತ್ತಿದ್ದಾರೆ.
ಲಭ್ಯವಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಜಿಲ್ಲೆಯ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದ ಅಧೀನದಲ್ಲಿರುವ ಅಜ್ಜಂಪುರ, ಬೀರೂರು, ಬಾಸೂರು, ಲಿಂಗದಹಳ್ಳಿ ಹಾಗೂ ಬಿಳುವಾಲ ಸೇರಿ ಪ್ರತಿ ಅಮೃತ್ ಮಹಲ್ ಕಾವಲುಗಳಲ್ಲಿ 15ರಿಂದ 20 ಎಕರೆ ಪ್ರದೇಶದಲ್ಲಿ ಮೇವು ಬೆಳೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮೇವಿನ ಕಿಟ್ ವಿತರಣೆಗೆ ಸಿದ್ಧತೆ
ಜಿಲ್ಲೆಯ 86,600 ರೈತರಿಗೆ 5 ಕೆ.ಜಿ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ಸರಬರಾಜು ಮಾಡುವಂತೆ ಪಶುಸಂಗೋಪನಾ ಇಲಾಖೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.
ಜಿಲ್ಲೆಯನ್ನು ಬರ ಎಂದು ಘೋಷಣೆ ಮಾಡಿದರೆ ಹಾಗೂ ತುರ್ತು ಸಂದರ್ಭಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಬೇಕಾದ ಸಂಭವನೀಯ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅದಿಕಾರಿಗಳು ಹೇಳುತ್ತಾರೆ.
ಕಡೂರು, ಯಗಟೆ, ಚೌಳಹಿರಿಯೂರು, ಪಂಚನಹಳ್ಳಿ, ಸಿಂಗಟಗೆರೆ, ಅಂತರಘಟ್ಟೆ, ಮತ್ತಿಘಟ್ಟ, ಕೆ.ಬಿದರೆ ಮತ್ತು ಕುಂಕನಾಡು ಮತ್ತು ಅಜ್ಜಂಪುರ ತಾಲ್ಲೂಕಿನ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಅಜ್ಜಂಪುರ ಮತ್ತು ಶಿವನಿ ಗ್ರಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮೇವು ಬೆಳೆದು ರೈತರಿಗೆ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆ ಕೊರತೆ ಇರುವ ತಾಲ್ಲೂಕುಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳಿದ್ದು, ರೈತರು ಮೇವಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಮಳೆ ಕೊರತೆಯಾಗಿರುವ ತಾಲ್ಲೂಕುಗಳಲ್ಲಿ ಕಡೂರು ಮೊದಲ ಸ್ಥಾನದಲ್ಲಿದೆ. ಅದೇ ರೀತಿಯ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿರುವ ತಾಲ್ಲೂಕುಗಳ ಪಟ್ಟಿಯಲ್ಲೂ ಕಡೂರು ಮೊದಲ ಸ್ಥಾನದಲ್ಲಿದೆ. ಕಡೂರು ತಾಲ್ಲೂಕಿನಲ್ಲಿ 78,939 ದನ ಕರುಗಳಿವೆ ಎಂದು ಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ. ಚಿಕ್ಕಮಗಳೂರು ತಾಲ್ಲೂಕಿನ ಬಯಲು ಸೀಮೆಯಲ್ಲೂ ಮಳೆ ಕೊರತೆ ಇದೆ. ಇಲ್ಲಿಯೂ 49,654 ಜಾನುವಾರುಗಳಿವೆ. ತರೀಕೆರೆ ತಾಲ್ಲೂಕಿನಲ್ಲಿ 28,229 ಜಾನುವಾರು, ಅಜ್ಜಂಪುರ ತಾಲ್ಲೂಕಿನಲ್ಲಿ 28,229 ಜಾನುವಾರುಗಳಿವೆ. ಬರಗಾಲ ಇರುವ ತಾಲ್ಲೂಕುಗಳಲ್ಲೇ ಹೆಚ್ಚು ಜಾನುವಾರುಗಳಿದ್ದು, ರೈತರು ಪರದಾಡುತ್ತಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-126-617849196