ಹಾಸನ DC ಲತಾಕುಮಾರಿ ತೇಜೋವಧೆ: ರೇವಣ್ಣ ವಿರುದ್ಧ ನಾಯಕರ ಹಿತರಕ್ಷಣಾ ವೇದಿಕೆ ಕಿಡಿ
ಮೈಸೂರು: ‘ಹಾಸನ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಶಾಸಕ ಎಚ್.ಡಿ. ರೇವಣ್ಣ ಅವರು ಸುಳ್ಳು ಆರೋಪದ ಮೂಲಕ ತೇಜೋವಧೆ ಮಾಡುತ್ತಿರುವುದು ಖಂಡನೀಯ’ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ದ್ಯಾವಪ್ಪ ನಾಯಕ ಹೇಳಿದರು.
‘ಮಹಿಳಾ ಅಧಿಕಾರಿ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಾನೂನು ಮತ್ತು ಆಡಳಿತಾತ್ಮಕ ಜವಾಬ್ದಾರಿಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ವೈಯಕ್ತಿಕವಾಗಿ ನಿಂದಿಸುವ ಪ್ರವೃತ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ತಳ ಸಮುದಾಯದಿಂದ ಬಂದಿರುವ ಮಹಿಳಾ ಅಧಿಕಾರಿಯು ದಕ್ಷತೆ, ಪ್ರಾಮಾಣಿಕೆ ಹಾಗೂ ಆತ್ಮವಿಶ್ವಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅದನ್ನು ಸಹಿಸದೇ ಅವರ ಮೇಲೆ ದರ್ಪ ತೋರುವುದು, ಒತ್ತಡ ಹೇರುವುದು ಹಾಗೂ ರಾಜಕೀಯ ಪ್ರಭಾವ ಬೀರುವುದು ಸರಿಯಲ್ಲ. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸೂಕ್ತ ವಾತಾವರಣ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಅಧಿಕಾರಿಗಳು ನಾನು ಹೇಳಿದಂತೆ ಮಾತ್ರವೇ ಕೇಳಬೇಕು ಎಂಬ ಧೋರಣೆಯನ್ನು ರೇವಣ್ಣ ಬಿಡಬೇಕು. ಕೀಳುಮಟ್ಟದ ರಾಜಕಾರಣ ಮಾಡಬಾರದು. ಆ ಅಧಿಕಾರಿ ವಿರುದ್ಧ ತೇಜೋವಧೆ ನಿಲ್ಲಿಸಬೇಕು. ಮಹಿಳಾ ಅಧಿಕಾರಿಗೆ ಅಗೌರವ ನೀಡುವಂತಹ ನೀಚ ರಾಜಕಾರಣಿಗಳಿಗೆ ಬುದ್ಧಿ ಕಲಿಸಬೇಕು’ ಎಂದರು.
‘ಲತಾಕುಮಾರಿ ಅವರ ವಿಷಯದಲ್ಲಿ ರೇವಣ್ಣ ಅವರು ದರ್ಪದ ವರ್ತನೆ ಮುಂದುವರಿಸಿದಲ್ಲಿ ಇಡೀ ವಾಲ್ಮೀಕಿ ಸಮುದಾಯ ಹಾಗೂ ಮಹಿಳೆಯರೊಂದಿಗೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸುರೇಶ್ ಕುಮಾರಬೀಡು, ಉಪಾಧ್ಯಕ್ಷ ಎಂ.ದಾಸಪ್ಪ ಅಗತ್ತೂರು, ಜಿಲ್ಲಾ ಘಟಕದ ಅಧ್ಯಕ್ಷ ನಾಗಲಿಂಗಪ್ಪ ಇದ್ದರು.