ಹಾದಿ ತಪ್ಪುವ ಯುವಜನರಿಗೆ ಸಂಸ್ಕಾರ ಮದ್ದು: ಸಚ್ಚಿದಾನಂದ ಭಾರತಿ ಸ್ವಾಮೀಜಿ

ಹಾದಿ ತಪ್ಪುವ ಯುವಜನರಿಗೆ ಸಂಸ್ಕಾರ ಮದ್ದು: ಸಚ್ಚಿದಾನಂದ ಭಾರತಿ ಸ್ವಾಮೀಜಿ

ಹಾದಿ ತಪ್ಪುವ ಯುವಜನರಿಗೆ ಸಂಸ್ಕಾರ ಮದ್ದು: ಸಚ್ಚಿದಾನಂದ ಭಾರತಿ ಸ್ವಾಮೀಜಿ

ಕಾಸರಗೋಡು: ಜಿಲ್ಲೆಯ ಪ್ರಮುಖ ಧಾರ್ಮಿಕ ತಾಣ ಎಡನೀರು ಮಠದಲ್ಲಿ ಈಗ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ 6ನೇ ಚಾತುರ್ಮಾಸ್ಯ ಆಚರಣೆಯ ಸಂಭ್ರಮ. ದಕ್ಷಿಣಾಮೂರ್ತಿ ಮತ್ತು ಗೋಪಾಲಕೃಷ್ಣ ಆರಾಧ್ಯಮೂರ್ತಿಗಳಾಗಿರುವ ಈ ಮಠ ವೇದಪಠಣ, ಸಂಗೀತ, ನಾಟ್ಯ, ಯಕ್ಷಗಾನ ಮತ್ತಿತರ ಕಲೆಗಳ ತಾಣ. ಚಾತುರ್ಮಾಸ್ಯದ ಅಂಗವಾಗಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯವೂ ಜರುಗುತ್ತಿವೆ.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಓದುಗರಿಗೆ ಸಂದೇಶ ನೀಡಿರುವ ಸಚ್ಚಿದಾನಂದ ಭಾರತಿ ಶ್ರೀಗಳು ಮಾದಕ ಪದಾರ್ಥ, ಸೈಬರ್ ಅಪರಾಧ ಮತ್ತಿತರ ಕೇಡು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವ ಸಮುದಾಯಕ್ಕೆ ಸರಿದಾರಿ ತೋರಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ ಎಂದರು ಹೇಳಿದರು.

ಸಂಸ್ಕಾರದ ಅರಿವಿಲ್ಲದೆ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಅವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಉತ್ತಮ ಹಾದಿಯಲ್ಲಿ ಸಾಗಲು ಪ್ರೇರೇಪಣೆ ಆಗಬಹುದು. ಎಡನೀರು ಮಠ ಇಂಥ ಕಾರ್ಯಗಳನ್ನು ಹಿಂದಿನಿಂದಲೇ ಮಾಡುತ್ತ ಬಂದಿದ್ದು ಚಾತುರ್ಮಾಸ್ಯದಲ್ಲೂ ಅದು ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.

‘ನಮ್ಮ ಸನ್ಯಾಸ ಸ್ವೀಕಾರದ ನಂತರ ಇದು ಆರನೇ ಚಾತುರ್ಮಾಸ್ಯ. ವ್ಯಾಸಪೂರ್ಣಿಮೆಯಂದು, ಜುಲೈ 29ಕ್ಕೆ ಆರಂಭವಾದ ಕಾರ್ಯಕ್ರಮ ಸೆ.26ರ ವರೆಗೆ 2 ತಿಂಗಳು ನಡೆಯಲಿದೆ. ಚಾತುರ್ಮಾಸ್ಯ ಎಂಬುದಕ್ಕೆ ನಾಲ್ಕು ತಿಂಗಳು ಎಂಬ ಅರ್ಥ ಇದೆಯಾದರೂ ಹೊಂದಿಕೊಂಡು ಪಕ್ಷಾವಹಿ ಮಾಸ ಎಂಬಂತೆ ಒಂದೊಂದು ಪಕ್ಷವನ್ನು ಒಂದು ತಿಂಗಳು ಎಂದು ತಿಳಿದುಕೊಂಡು ನಾಲ್ಕು ಪಕ್ಷಗಳಲ್ಲಿ ಚಾತುರ್ಮಾಸ್ಯ ಆಚರಿಸಲಾಗುತ್ತದೆ. ಇದು ಕಾಲದ ಅನಿವಾರ್ಯಕ್ಕೆ ತಕ್ಕಂತೆ ಮಾಡಿಕೊಂಡಿರುವ ಬದಲಾವಣೆ’ ಎಂದು ಸ್ವಾಮೀಜಿ ತಿಳಿಸಿದರು.

‘ಎಡನೀರು ಮಠ ಶಂಕರಾಚಾರ್ಯರ ಮತ್ತು ತೋಟಕಾಚಾರ್ಯ ಪರಂಪರೆಯದು. ತ್ರಿಶೂರ್‌ನಲ್ಲಿದ್ದ ಯತಿಗಳು ಕಾಶಿ ಯಾತ್ರೆಯ ಸಂದರ್ಭದಲ್ಲಿ ಎಡನೀರಿನ ವಿಷ್ಣುಮಂಗಲ ದೇವಾಲಯದಲ್ಲಿ ಚಾತುರ್ಮಾಸ್ಯ ಕೈಗೊಳ್ಳುತ್ತಿದ್ದರು. ಮುಗಿಸಿ ಹೋಗುವಾಗ ಇಲ್ಲೇ ನೆಲೆಯಾಗಬೇಕು ಎಂದು ಊರ ಜನರು ಕೋರಿದ್ದರು. ಹೀಗಾಗಿ ಜನರ ಅಪೇಕ್ಷೆ ಮೇರೆಗೆ ಹುಟ್ಟಿಕೊಂಡ ಮಠ ಇದು ಎಂಬ ಐತಿಹ್ಯವಿದೆ. ಚಾತುರ್ಮಾಸ್ಯ ಮುಗಿಸಿ ದೇವಸ್ಥಾನಕ್ಕೆ ಹೋಗುವಾಗ ನಾಲ್ಕು ಮನೆಯವರು ತಡೆಯುವ ಸಂಪ್ರದಾಯ ಈಗಲೂ ಇದೆ’ ಎಂದು ಅವರು ವಿವರಿಸಿದರು.

‘ಎಡನೀರು ಮಠ ಪೂರ್ವ ಗುರುಗಳಾದ ಕೇಶವಾನಂದ ಭಾರತಿ ಸ್ವಾಮೀಜಿ ಮತ್ತು ಅವರ ಗುರುಗಳಾದ ಈಶ್ವರಾನಂದ ಭಾರತಿ ಸ್ವಾಮೀಜಿ ಕಾಲದಲ್ಲೇ ಉತ್ತಮ ಹೆಸರು ಗಳಿಸಿತ್ತು. ಈಶ್ವರಾನಂದ ಭಾರತಿ ಸ್ವಾಮೀಜಿ ಕಾಲದಲ್ಲಿ ಇಲ್ಲಿ ವಿದ್ಯಾಸಂಸ್ಥೆಗಳು ಆರಂಭವಾದವು. ಇಲ್ಲಿ ಕಲೆ ಮತ್ತು ಸಂಸ್ಕೃತಿಗೆ ಹಿಂದಿನಿಂಲದೇ ಆದ್ಯತೆ ಇತ್ತು ಎಂಬುದು ತಿಳಿದವರ ಮೂಲಕ ನಮ್ಮ ಅರಿವವಿಗೆ ಬಂದಿದೆ. ಧಾರ್ಮಿಕ ಮತ್ತು ಕಲಾ ಶ್ರೀಮಂತಿಕೆ ದೇಶದ ಮೂಲ ನೆಲೆಗಟ್ಟು. ಎಡನೀರು ಮಠದಲ್ಲಿ ಅದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯದಲ್ಲೂ ಅದನ್ನು ಮುಂದುವರಿಸಲಾಗುತ್ತಿದೆ. 60 ದಿನವೂ ಭಜನೆ ಇದೆ. ಪಾಮರರಿಂದ ಪಂಡಿತರ ವರೆಗೂ ಹಾಡಬಹುದಾದ, ಅರ್ಥೈಸಿಕೊಳ್ಳಲು ಸುಲಭವಾದ ಮತ್ತು ಆ ಮೂಲಕ ದೇವರನ್ನು ಸುಲಭವಾಗಿ ಒಲಿಸಿಕೊಳ್ಳುವ ಗುಣ ಭಜನೆಗೆ ಇದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಭಜನಗೆ ಆದ್ಯತೆ ನೀಡಲಾಗಿದೆ. ಸಂಜೆ ಕಲಾ ಪ್ರಕಾರಗಳು ಮುದ ನೀಡುತ್ತವೆ. ಭರತನಾಟ್ಯ, ಯಕ್ಷಗಾನ, ಹರಿಕಥೆ, ಕಥಕ್ಕಳಿ ಮತ್ತು ಈ ಬಾರಿ ಓಟ್ಟಂ ತುಳ್ಳಲ್‌ ಕಲೆಯ ಪ್ರದರ್ಶನವಿದೆ’ ಎಂದು ಅವರು ಹೇಳಿದರು.

ಎಲ್ಲ ಸಮಾಜದ ಜನರು, ಎಲ್ಲ ಸಾಮಾಜಿಕ ನಿಲುವಿನವರು ಮಠದ ಚಾತುರ್ಮಾಸ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಇಂಥ ಬೆಳವಣಿಗೆ ಧಾರ್ಮಿಕ ಕೇಂದ್ರಗಳಲ್ಲಿ ಅಗತ್ಯವಾಗಿ ಆಗಬೇಕು. ಅದರಿಂದ ಜಾತಿ ಸಾಮರಸ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ಜಾತಿ ಸಾಮರಸ್ಯ ಉಳಿದುಕೊಂಡಿದೆ. ಅಲ್ಲಿ ಮೇಲು–ಕೀಳು, ಬಡವ–ಬಲ್ಲಿದ ಎಂಬುದು ಇರುವುದಿಲ್ಲ ಎಂದು ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು. ‘ಯುವ ಸಮಾಜಕ್ಕೆ ಧಾರ್ಮಿಕ ಅರಿವು ಅಗತ್ಯ. ಅದನ್ನು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ಅವರು ನುಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-28-1784320547

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ