
ಮಳೆ ಕ್ಷೀಣ|ಬೆಚ್ಚನೆ ದಿರಿಸಿಗೂ ಬೇಡಿಕೆ ಇಲ್ಲ: ಬಿಕೋ ಎನ್ನುತ್ತಿವೆ ಸ್ವೆಟರ್ ಮಳಿಗೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ಮಳೆ ಕಡಿಮೆಯಾಗಿದ್ದು, ನಗರದ ಬಟ್ಟೆ ಮಾರುಕಟ್ಟೆಗಳಲ್ಲಿ ಬೆಚ್ಚನೆ ಉಡುಪುಗಳ ಖರೀದಿಯೂ ಕಡಿಮೆಯಾಗಿದೆ. ಸ್ವೆಟರ್, ಟೋಪಿ, ಮಳೆಕೋಟು ಮಳಿಗೆಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ನಗರ ಸೇರಿದಂತೆ ಮಲೆನಾಡಿನಲ್ಲೂ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಪ್ರತಿವರ್ಷ ಅಧಿಕ ಮಳೆ ಹಾಗೂ ಚಳಿಯಿಂದ ಜನ ತತ್ತರಿಸಿ ಹೋಗುತ್ತಿದ್ದರು. ಈ ಚಳಿ–ಮಳೆಯಿಂದ ರಕ್ಷಿಸಿಕೊಳ್ಳಲು ಜನ ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದರು. ಸ್ವೆಟರ್, ಟೋಪಿ ಸೇರಿದಂತೆ ಉಲ್ಲನ್‌ನಿಂದ ತಯಾರಿಸಿದ ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದರು.
ಟಿಬೆಟಿಯನ್ ಟೆಂಟ್‌ಗಳು ಪ್ರತಿವರ್ಷ ಮಳೆಗಾಲದಲ್ಲಿ ತೆರೆದುಕೊಳ್ಳುತ್ತವೆ. ಇಲ್ಲಿ ಬೆಚ್ಚನೆ ಉಡುಪುಗಳ ಮಾರಾಟ ಮಳೆಗಾಲ ಮುಗಿಯುವ ತನಕ ನಡೆಯುತ್ತದೆ. ಐ.ಜಿ. ರಸ್ತೆಯ ಉರ್ದು ಶಾಲೆ ಎದುರು, ಆಜಾದ್ ಪಾರ್ಕ್ ವೃತ್ತ ಸಮೀಪ, ವಿಜಯಪುರ ರಸ್ತೆ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಸೇರಿ ನಗರ ಹಲವೆಡೆ ಬೆಚ್ಚನೆಯ ಬಟ್ಟೆಗಳ ವ್ಯಾಪಾರ ಮಾಡಲು ನಗರಸಭೆ ಜಾಗ ನೀಡುತ್ತಿತ್ತು. ಈ ಬಾರಿ ಹೆರಿಗೆ ಆಸ್ಪತ್ರೆ ರಸ್ತೆಯಲ್ಲಿ ಮಾತ್ರ 12 ಶೆಡ್‌ಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಗ್ರಾಹಕರಿಲ್ಲದೆ ಅಂಗಡಿಗಳು ಬಿಕೋ ಎನ್ನುತ್ತಿವೆ.
‘ಮೇ ತಿಂಗಳಿನಿಂದ ಆಗಸ್ಟ್ ಕೊನೆ ತನಕ ಭರ್ಜರಿ ವ್ಯಾಪಾರವಾಗುತ್ತಿತ್ತು. ಅದೇ ನಿರೀಕ್ಷೆಯಲ್ಲಿ ಮಳಿಗೆ ತೆರೆದು ವ್ಯಾಪಾರ ಆರಂಭ ಮಾಡಿದೆವು. ಮಳೆ ಕೈ ಕೊಟ್ಟಿದ್ದರಿಂದ ಗ್ರಾಹಕರು ನಮಗೂ ಕೈಕೊಟ್ಟಿದ್ದಾರೆ’ ಎಂದು ವ್ಯಾಪಾರಿಗಳು ಹೇಳಿದರು.
ಪ್ರತಿವರ್ಷ ಚಿಕ್ಕಮಗಳೂರಿನಲ್ಲಿ ಉತ್ತಮವಾದ ಬೇಡಿಕೆ ಇರುತ್ತಿತ್ತು. ದೆಹಲಿ, ನೇಪಾಳ, ಬೆಂಗಳೂರು, ಚೆನ್ನೈ, ಕುಶಾಲನಗರ ಹಾಗೂ ಇತರೆಡೆಗಳಿಂದ ಟೋಪಿ, ಸ್ವೆಟರ್, ಜಾಕೆಟ್, ಲಾಂಗ್ ಜಾಕೆಟ್, ಕಾಫ್, ಶ್ರಗ್, ಟವಲ್ ತಯಾರಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದೆವು. ಈ ಬಾರಿಯ ಮಳೆಗಾಲ ನಂಬಿ ತಯಾರಿಸಿದ್ದ ಉಡುಪುಗಳು ಹಾಗೇ ಉಳಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
‘ಟಿಬೆಟಿಯನ್ ಟೆಂಟ್‌ಗಳಲ್ಲಿ ಭಾಷೆ ಸಮಸ್ಯೆ ಕಾರಣಕ್ಕೆ ಹುಬ್ಬಳ್ಳಿ ಕಡೆಯ ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೇವೆ. ವ್ಯಾಪಾರ ತೀರ ಕಡಿಮೆಯಾದ ಕಾರಣ ಅವರಿಗೆ ಕೂಲಿ, ಊಟ, ವಸತಿ ಸೌಕರ್ಯ ಕಲ್ಪಿಸಲೂ ಹಣ ಇಲ್ಲವಾಗಿದೆ. ಇನ್ನು ತಾತ್ಕಾಲಿಕ ಮಳಿಗೆಗೆ ಬಾಡಿಗೆ ನೀಡಬೇಕಿದೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ’ ಎಂದರು.
‘ಬೇರೆ ಬೇರೆ ಕಡೆ ಅವಕಾಶ ಕೊಡಿ’
ನಗರದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಲು ನಗರಸಭೆ ಅನುಮತಿ ನೀಡಿದ್ದರೆ ವ್ಯಾಪಾರವಾಗುವ ಸಾಧ್ಯತೆ ಇತ್ತು ಎಂದು ವ್ಯಾಪಾರಿ ಅಬ್ದುಲ್ ಹೇಳುತ್ತಾರೆ.
ನಮ್ಮ ಮಳಿಗೆಗಳಲ್ಲಿ ಗುಣಮಟ್ಟದ ಮತ್ತು ಗ್ರಾಹಕರ ಇಚ್ಛೆಗೆ ತಕ್ಕಂತ ಬಣ್ಣದ ಸ್ವೆಟರ್‌ಗಳು ದೊರೆಯುತ್ತವೆ. ಅದೇ ಕಾರಣದಿಂದ ಚಿಕ್ಕಮಗಳೂರು ನಗರ, ಗ್ರಾಮೀಣ ಪ್ರದೇಶದ ಜನ ಹಾಗೂ ಪ್ರವಾಸಿಗರೂ ಕೂಡ ಖರೀದಿಗೆ ಬರುತ್ತಿದ್ದರು. ಈ ಬಾರಿ ಒಂದೇ ಜಾಗದಲ್ಲಿ ಅವಕಾಶ ನೀಡಲಾಗಿದೆ. ಇಲ್ಲಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಬರುವುದು ಕಡಿಮೆ. ಮೊದಲಿನಂತೆ ನಗರದ ವಿವಿಧೆಡೆ ವ್ಯಾಪಾರಕ್ಕೆ ನಗರಸಭೆ ಅವಕಾಶ ಕೊಡಬೇಕು ಎಂದು ಅವರು ಮನವಿ ಮಾಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-126-1823988886