ಸೋನಾಳ ಮುಖ್ಯ ರಸ್ತೆಯಲ್ಲಿ ‘ಅಪಾಯದ ವಿಭಜಕ’!: ಸೂಚನಾ ಫಲಕವೂ ಇಲ್ಲ

ಸೋನಾಳ ಮುಖ್ಯ ರಸ್ತೆಯಲ್ಲಿ ‘ಅಪಾಯದ ವಿಭಜಕ’!: ಸೂಚನಾ ಫಲಕವೂ ಇಲ್ಲ

ಸೋನಾಳ ಮುಖ್ಯ ರಸ್ತೆಯಲ್ಲಿ ‘ಅಪಾಯದ ವಿಭಜಕ’!: ಸೂಚನಾ ಫಲಕವೂ ಇಲ್ಲ

ಕಮಲನಗರ: ಪಟ್ಟಣದ ಸೋನಾಳ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಿರುವುದರಿಂದ ವಾಹನ ಸವಾರರು, ವೃದ್ಧರು, ಮಹಿಳೆಯರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ವಿಭಜಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋನಾಳ ಮುಖ್ಯ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿ ನಿಲಯದಿಂದ ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದವರೆಗೆ ರಸ್ತೆ ಮಧ್ಯದಲ್ಲಿ ನಿರ್ಮಿಸಲಾಗಿರುವ ವಿಭಜಕ ಆರಂಭವಾಗಿ ಕೊನೆಗೊಳ್ಳುವ ಸ್ಥಳದಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ವಿಭಜಕಕ್ಕೆ ಡಿಕ್ಕಿ ಹೊಡೆಯುವ ಅಥವಾ ಪಕ್ಕದಲ್ಲಿರುವ ಚರಂಡಿಗೆ ಬೀಳುವ ಅಪಾಯ ಎದುರಾಗಿದೆ. ಈಗಾಗಲೇ ಕೆಲವರು ವಿಭಜಕಕ್ಕೆ ಡಿಕ್ಕಿ ಹೊಡೆದು ಹಾಗೂ ಚರಂಡಿಗೆ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ ಎಂದು ಸ್ಥಳೀಯರು ಹೇಳುತ್ತಾರೆ.

‘ತಹಶೀಲ್ದಾರ್ ಕಚೇರಿ, ತಾ.ಪಂ ಕಚೇರಿ, ಕರ್ನಾಟಕ ಪಬ್ಲಿಕ್ ಶಾಲೆ, ಪೊಲೀಸ್ ಠಾಣೆ, ಬ್ಯಾಂಕ್‍ಗಳು ಸೇರಿ ಹಲವು ಪ್ರಮುಖ ಕಚೇರಿಗಳು ಇದೇ ರಸ್ತೆಯಲ್ಲಿವೆ. ಹೀಗಾಗಿ ದಿನನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ರಸ್ತೆ ಮಧ್ಯೆ ಅವೈಜ್ಞಾನಿಕ ವಿಭಜಕ ನಿರ್ಮಿಸಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಖಾನಾಪುರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೂಚನಾ ಫಲಕವಿಲ್ಲ: ಸೋನಾಳ ಮುಖ್ಯ ರಸ್ತೆಯ ವಿಭಜಕದ ಆರಂಭ ಹಾಗೂ ಕೊನೆಯಲ್ಲಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಯಾವುದೇ ಸೂಚನಾ ಫಲಕ ಅಳವಡಿಸಿಲ್ಲ. ವಿಭಜಕದ ಕೆಲವು ಭಾಗಗಳಲ್ಲಿ ಮಾತ್ರ ರೇಡಿಯಂ ಸ್ಟಿಕ್ಕರ್ ಅಳವಡಿಸಲಾಗಿದ್ದು, ವಿಭಜಕ ಆರಂಭವಾಗಿ ಕೊನೆಗೊಳ್ಳುವ ಸ್ಥಳಗಳಲ್ಲಿ ರೇಡಿಯಂ ಅಳವಡಿಸದಿರುವುದರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವ ಆತಂಕ ಹೆಚ್ಚಾಗಿದೆ.

‘ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಸ್ತೆ ವಿಭಜಕದ ವಿನ್ಯಾಸ ಮರುಪರಿಶೀಲಿಸಿ, ಅಗತ್ಯವಿದ್ದಲ್ಲಿ ಅದನ್ನು ತೆರವುಗೊಳಿಸಬೇಕು. ಅಲ್ಲದೆ, ರಸ್ತೆ ಬದಿಯ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸಿ, ಮುನ್ನೆಚ್ಚರಿಕೆ ಫಲಕ ಹಾಗೂ ರೇಡಿಯಂ ಸೂಚಕಗಳನ್ನು ಅಳವಡಿಸಬೇಕು’ ಎಂದು ಯುವಮುಖಂಡ ಸುನೀಲ್ ಚಾಂಗೋಣೆ ಒತ್ತಾಯಿಸಿದ್ದಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆಯ ಎಇಇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಚರಂಡಿಗೆ ಸ್ಲ್ಯಾಬ್ ಅಳವಡಿಸಿ–‌ಅಪಾಯ ತಪ್ಪಿಸಲು ಜನಾಗ್ರಹ

‘ಸೋನಾಳ ಮುಖ್ಯ ರಸ್ತೆಯ ವಿಭಜಕದ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಚರಂಡಿಗೆ ಅಲ್ಲಲ್ಲಿ ಸ್ಲ್ಯಾಬ್ ಅಳವಡಿಸದಿರುವುದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ತಂದೊಡ್ಡಿದೆ. ಈಗಾಗಲೇ ಕೆಲವರು ಚರಂಡಿಗೆ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಅವೈಜ್ಞಾನಿಕ ವಿಭಜಕ ತೆರವುಗೊಳಿಸಿ, ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸಿ, ವಿಭಜಕದ ಆರಂಭ ಮತ್ತು ಕೊನೆಯಲ್ಲಿ ಸೂಚನಾ ಫಲಕ ಹಾಗೂ ರೇಡಿಯಂ ಅಳವಡಿಸುವ ಮೂಲಕ ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-33-1906034687

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ