
ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಬೆಂಗಳೂರು: ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಇದೇ 14ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಇಂದು (ಗುರುವಾರ) ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ತಿನ ಸಭಾಪತಿ ಸ್ಥಾನದ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಹಸ್ತಾಂತರಿಸಿದರು. ಅದೇ ರೀತಿ,ವಿಧಾನ ಸಭೆಯ ಸಭಾಧ್ಯಕ್ಷ ಸ್ಥಾನದಕ್ಕೆ ಜಿ.ಎಸ್. ಪಾಟೀಲ ಅವರು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಸಚಿವ ಸಂಪುಟದ ಪ್ರಮುಖ ಸಚಿವರು ಉಪಸ್ಥಿತರಿದ್ದರು
ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಸಚಿವರಾದ ಬಳಿಕ ಈ ಸ್ಥಾನ ತೆರವಾಗಿತ್ತು. ಹಂಗಾಮಿ ಸಭಾಧ್ಯಕ್ಷರಾಗಿ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ ಕಾರ್ಯನಿರ್ವಹಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿದೆ.
ಸಭಾಧ್ಯಕ್ಷರಾಗಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹಾಗೂ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.