
ಕೋಲಾರ– ಬಂಗಾರಪೇಟೆ ರಸ್ತೆ ಕಾಮಗಾರಿಯಿಂದ ಸಂಚಾರಕ್ಕೆ ಸಂಚಕಾರ
ಬಂಗಾರಪೇಟೆ: ಕೋಲಾರ– ಬಂಗಾರಪೇಟೆ ಮುಖ್ಯ ರಸ್ತೆಯು ವಾಹನ ಸವಾರರು, ಪ್ರಯಾಣಿಕರ ಪಾಲಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ.
₹66 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿರುವ ದ್ವಿಪಥ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿ, ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರು ನಿತ್ಯವೂ ಕೈಯಲ್ಲಿ ಜೀವ ಹಿಡಿದು ಸಂಚರಿಸುತ್ತಿದ್ದಾರೆ.
ಕೋಲಾರ, ಬಂಗಾರಪೇಟೆ, ಕೆಜಿಎಫ್ ಹಾಗೂ ರಾಜಧಾನಿ ಬೆಂಗಳೂರಿನ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುವ ಈ ಮಾರ್ಗವು ವಾಣಿಜ್ಯ ವ್ಯವಹಾರ, ಶೈಕ್ಷಣಿಕ ಚಟುವಟಿಕೆ, ವೈದ್ಯಕೀಯ ತುರ್ತು ಸೇವೆ, ಉದ್ಯೋಗಕ್ಕೆ ತೆರಳುವ ಅಸಂಖ್ಯಾತ ಜನರಿಗೆ ಮುಖ್ಯ ಆಸರೆಯಾಗಿದೆ. ಆದರೆ, ರಸ್ತೆ ವಿಸ್ತರಣೆ ನೆಪದಲ್ಲಿ ಅಗೆದು ತಿಂಗಳುಗಳೇ ಕಳೆದರೂ, ಸೂಕ್ತ ಪ್ರಗತಿ ಕಾಣದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ದಿಂಬ ಗೇಟ್‌ನಿಂದ ಕೃಷ್ಣವರದವರೆಗಿನ 12 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ದ್ವಿಪಥ ಕಾಮಗಾರಿ ಅಸ್ತವ್ಯಸ್ತವಾಗಿದೆ. ಹಳೆಯ ರಸ್ತೆಯನ್ನು ಅಗೆದು ಅರ್ಧಕ್ಕೆ ಬಿಡಲಾಗಿದ್ದು, ಹಲವೆಡೆ ಜಲ್ಲಿಕಲ್ಲುಗಳನ್ನು ಹಾಗೆಯೇ ಬಿಡಲಾಗಿದೆ. ರಸ್ತೆಯ ಅಂಚು ಕುಸಿದಿದ್ದು, ವಾಹನಗಳು ರಸ್ತೆಬದಿಗೆ ಸರಿದ ತಕ್ಷಣ ನಿಯಂತ್ರಣ ತಪ್ಪುತ್ತಿವೆ.
ಬೈಕ್ ಸವಾರರಿಗೆ ಈ ರಸ್ತೆ ಪ್ರಯಾಣ ಕಂಟಕವಾಗಿ ಕಾಡುತ್ತಿದೆ. ಮಳೆ ಬಂದಾಗ ರಸ್ತೆಯಲ್ಲಿನ ಗುಂಡಿಗಳು ಅಪಾಯಕಾರಿಯಾಗುತ್ತಿವೆ. ನಿತ್ಯವೂ ಅಪಘಾತ ಸಂಭವಿಸುತ್ತಿವೆ. ಕಾಮಗಾರಿ ಪ್ರದೇಶದಲ್ಲಿ ಏಳುವ ದೂಳು ಸಹ ಸಮಸ್ಯೆಯಾಗಿದೆ. ರಸ್ತೆ ಬದಿಯ ಹೋಟೆಲ್, ದಿನಸಿ ಹಾಗೂ ಇತರೆ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಮುಂಜಾನೆ– ಮುಸ್ಸಂಜೆ ವಾಹನ ದಟ್ಟಣೆ ಹೆಚ್ಚಿದೆ. ಸಂಚಾರ ದಟ್ಟಣೆಯಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ– ಕಾಲೇಜಿಗೆ ಹೋಗಲಾಗುತ್ತಿಲ್ಲ. ಕೆಲವೊಮ್ಮೆ ಆಂಬುಲೆನ್ಸ್‌ಗಳಿಗೂ ದಾರಿ ಸಿಗದ ಸ್ಥಿತಿಯಿದೆ.
‘ಕಾಮಗಾರಿ ಪೂರ್ಣಗೊಳ್ಳುವವರೆಗೆ ಎಚ್ಚರಿಕೆ ಫಲಕ, ಬೆಳಕಿನ ವ್ಯವಸ್ಥೆ, ಸಂಚಾರ ನಿಯಂತ್ರಣ, ದೂಳು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜನರ ಸುರಕ್ಷತೆಗೆ ಆದ್ಯತೆ ನೀಡಿ ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್.
‘ನಿತ್ಯವೂ ನೂರಾರು ಶಾಲಾ- ಕಾಲೇಜು ಬಸ್‌ಗಳು ಸಂಚರಿಸುತ್ತವೆ. ರಸ್ತೆಯಿಡಿ ದೂಳು ತುಂಬಿದ್ದು ಚಾಲಕರಿಗೆ ಮುಂಭಾಗದ ರಸ್ತೆ ಸರಿಯಾಗಿ ಕಾಣಿಸುವುದಿಲ್ಲ. ಜೆಲ್ಲಿ ಕಲ್ಲುಗಳ ಮೇಲೆ ವಾಹನಗಳು ಸ್ಕಿಡ್ ಆಗಿ ಬಸ್ಸಿನ ಅಡಿಗೆ ಬೀಳುವ ಭೀತಿ ಕಾಡುತ್ತಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗುತ್ತದೆ. ಬಿಸಿಲಿದ್ದರೆ ದೂಳಿನ ಅಭಿಷೇಕವಾಗುತ್ತದೆ. ಶಾಲಾ ಮಕ್ಕಳ ಜೀವದ ಜತೆ ಚೆಲ್ಲಾಟವಾಡುವುದನ್ನು ಬಿಟ್ಟು ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಖಾಸಗಿ ಬಸ್ ಚಾಲಕ ರಮೇಶ್ ಕುಮಾರ್ ಒತ್ತಾಯಿಸಿದರು.
‘ವಿದ್ಯುತ್ ಕಂಬಗಳ ಸ್ಥಳಾಂತರದ ಕೆಲಸದಿಂದಾಗಿ ಕಾಮಗಾರಿ ಕೊಂಚ ವಿಳಂಬವಾಗಿದೆ. ಸಾರ್ವಜನಿಕರ ಆಗ್ರಹ ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಪಾಯಕಾರಿ ಸ್ಥಳಗಳಲ್ಲಿ ತಕ್ಷಣ ಬ್ಯಾರಿಕೇಡ್ ಅಳವಡಿಸಲು ಹಾಗೂ ದೂಳು ಶಮನಕ್ಕೆ ನೀರು ಸಿಂಪಡಿಸಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಶ್ರೀನಿವಾಸ್ ಎನ್. ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-18-77281284