
ಬೆಂಗಳೂರಿಗೆ ತರಕಾರಿ ಒದಗಿಸುವ ಊರುಗಳಲ್ಲಿ ಕುಸಿದ ಅಂತರ್ಜಲ,ಕುರಿಗೂ ಟ್ಯಾಂಕರ್ ನೀರು
ಶಿಡ್ಲಘಟ್ಟ/ದೇವನಹಳ್ಳಿ: ಒಂದೆಡೆ ಮಳೆ ತೀವ್ರ ಕೊರತೆ, ಮತ್ತೊಂದು ಕಡೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಹೆಚ್ಚಿದ ಕುಸಿತ ಪ್ರಮಾಣ..
ಬೆಂಗಳೂರು ನಗರಕ್ಕೆ ನಿರಂತರವಾಗಿ ತರಕಾರಿ ಪೂರೈಸುವ ಸುತ್ತಮುತ್ತಲಿನ ಚಿತ್ರಗಳ ಚಿತ್ರಣವಿದು. ಅದರಲ್ಲೂ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಅಂತರ್ಜಲ ಮಟ್ಟವಂತೂ ಆತಂಕ ಎನ್ನುವ ಮಟ್ಟಿಗೆ ಕುಸಿದೆ. ಜುಲೈ ತಿಂಗಳಿನಲ್ಲಿಯೇ ಮಾಲೂರು ತಾಲ್ಲೂಕಿನ ಅಂತರ್ಜಲ ಮಟ್ಟ 80 ಮೀಟರ್‌ಗೆ ಕುಸಿದಿದ್ದು. ರಾಜ್ಯದಲ್ಲಿ ಅತಿ ಆಳಕ್ಕೆ ಅಂತರ್ಜಲ ತಲುಪಿರುವ 2ನೇ ಸ್ಥಾನದಲ್ಲಿದೆ.
ಇದು ಮಾಲೂರು ತಾಲ್ಲೂಕು ಒಂದರ ಕಥೆಯಲ್ಲ. ಕರ್ನಾಟಕದ 50 ತಾಲ್ಲೂಕುಗಳಲ್ಲಿ ಇಂತಹದ್ದೇ ಸ್ಥಿತಿ ನಿರ್ಮಾಣಗಿದೆ. ಇದರೊಟ್ಟಿಗೆ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ವ್ಯಾಪ್ತಿಯ 10 ತಾಲ್ಲೂಕುಗಳ ಅಂತರ್ಜಲ ಮಟ್ಟವು 40 ಮೀಟರ್ ಗಿಂತ ಅಧಿಕ ಕುಸಿತ ಕಂಡಿದೆ.
ರಾಜ್ಯಾದ್ಯಂತ ಇರುವ 2,405 ಕೊಳವೆಬಾವಿಗಳು ಮತ್ತು 347 ತೆರೆದ ಬಾವಿಗಳಿಂದ ಪ್ರತಿ ತಿಂಗಳು ಸ್ಥಿರ ನೀರಿನ ಮಟ್ಟದ ದತ್ತಾಂಶವನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಅಂತರ್ಜಲ ಮಟ್ಟದ ಮೇಲ್ವಿಚಾರಣೆ ಮಾಡುತ್ತದೆ. ಅಧಿಕಾರಿಗಳ ಪ್ರಕಾರ, ಅಂತರ್ಜಲ ಮಟ್ಟವು 20 ಮೀಟರ್‌ಗಿಂತಲೂ ಹೆಚ್ಚು ಆಳಕ್ಕೆ ಕುಸಿಯುವುದು ಆತಂಕಕಾರಿ ವಿಚಾರವೂ ಹೌದು.
ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ ಅರ್ಧದಷ್ಟು ತಾಲೂಕುಗಳಲ್ಲಿ, ಬೇಸಿಗೆ ತೀವ್ರತೆ ತಿಂಗಳಾದ ಏಪ್ರಿಲ್‌ನಲ್ಲಿ ಇದ್ದ ಮಟ್ಟಕ್ಕಿಂತ ಜುಲೈನಲ್ಲಿ ಅಂತರ್ಜಲ ಮಟ್ಟ ಹೆಚ್ಚು ಆಳಕ್ಕೆ ಕುಸಿದಿರುವುದು ಆತಂಕದ ಮೂಲ.
ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಮಳೆಯ ಕೊರತೆ ಮತ್ತು ವರ್ಷಗಳ ಕಾಲ ನಡೆದ ಅನಿಯಂತ್ರಿತ ಅಂತರ್ಜಲ ಬಳಕೆಯಿಂದಾಗಿ ಕರ್ನಾಟಕವು ಭಾರಿ ಪ್ರಮಾಣದಲ್ಲಿ ಅಂತರ್ಜಲ ಬಿಕ್ಕಟ್ಟನ್ನು ಎದುರಿಸುತ್ತಿದೆ.
"ಅಲ್ಪಾವಧಿಯ ಮಳೆಯು ಅಂತರ್ಜಲ ಮರುಪೂರಣಕ್ಕೆ ನೆರವಾಗುವುದಿಲ್ಲ, ಆದರೆ, ಅಂತರ್ಜಲದ ಬಳಕೆ ಮಾತ್ರ ಅನಿಯಂತ್ರಿತವಾಗಿ ಮುಂದುವರಿಯುತ್ತದೆ. ಮಳೆಯ ಕೊರತೆಯಿಂದಾಗಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ," ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಪವಿತ್ರಾ ಹೇಳುತ್ತಾರೆ.
ಶಿಡ್ಲಘಟ್ಟದ ಪರಿಸ್ಥಿತಿ ಭಿನ್ನ
ಡೆಕ್ಕನ್ ಹೆರಾಲ್ಡ್ ಪ್ರತಿನಿಧಿ ಶಿಡ್ಲಘಟ್ಟ ತಾಲ್ಲೂಕಿನ ದೇವರಮಲ್ಲೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುತ್ತು ಹಾಕಿದಾಗ ಹಲವು ಕಡೆಗಳಲ್ಲಿ ನೀರಿನ ತೀವ್ರ ಅಭಾವದ ಪರಿಸ್ಥಿತಿ ಕಂಡು ಬಂದಿತು. ಈ ತಾಲೂಕಿನಲ್ಲಿ ಅಂತರ್ಜಲ ಮಟ್ಟವು 90 ಮೀಟರ್ ಆಳಕ್ಕೆ ಕುಸಿದಿದ್ದು, ಇದು ರಾಜ್ಯದಲ್ಲೇ ಅತ್ಯಂತ ಆಳ ತಲುಪಿರುವ ಮೊದಲ ಸ್ಥಾನದಲ್ಲಿದೆ.
ಪ್ರಾಧಿಕಾರದ ಮಾಹಿತಿಯ ಪ್ರಕಾರ, ಶಿಡ್ಲಘಟ್ಟದ ಬೋರ್‌ವೆಲ್‌ಗಳಲ್ಲಿನ ಸ್ಥಿರ ಅಂತರ್ಜಲ ಮಟ್ಟವು ಏಪ್ರಿಲ್ ಮತ್ತು ಜುಲೈ ನಡುವೆ 48 ಮೀಟರ್‌ಗಳಷ್ಟು ಕುಸಿದಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ದೊಡ್ಡ ಕುಸಿತ ಇದಾಗಿದೆ.
ಶಿಡ್ಲಘಟ್ಟ ತಾಲ್ಲೂಕು ಅರೆ-ಶುಷ್ಕ ಹವಾಮಾನವನ್ನು ಹೊಂದಿದ್ದು, ಬರಪೀಡಿತ ಪ್ರದೇಶವೆಂದು ದಶಕಗಳಿಂದ ಗುರುತಿಸಿಕೊಳ್ಳುತ್ತಾ ಬಂದಿದೆ. ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳ ಪೈಕಿ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿಗೆಂದು ಮೀಸಲಿರುವ ಕೊಳವೆ ಬಾವಿಗಳಲ್ಲಿ ನೀರೇ ಸಿಗುತ್ತಿಲ್ಲ. ಇದರಿಂದಾಗಿ ಸ್ಥಳೀಯ ಆಡಳಿತವು ಖಾಸಗಿ ಕೊಳವೆಗಳನ್ನು ಆಶ್ರಯಿಸುವ ಸ್ಥಿತಿ ಮಳೆಗಾಲದಲ್ಲಿ ನಿರ್ಮಾಣವಾಗಿದೆ.
ಕೆರೆಗಳಲ್ಲಿ ಬಳ್ಳಾರಿ ಜಾಲಿ
ಒಂದು ಕಾಲದಲ್ಲಿ 380 ಎಕರೆ ಪ್ರದೇಶದಲ್ಲಿ ಹರಡಿದ್ದ ದೇವರಮಲ್ಲೂರು ಅಮಾನಿಕೆರೆ ಈಗ ಅಲ್ಲಲ್ಲಿರುವ ಸಣ್ಣ ಜಲಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಅದರ ಬಹುಭಾಗವು 'ಬಳ್ಳಾರಿ ಜಾಲಿ' ಯಿಂದ ಆವೃತವಾಗಿದೆ.
ಮಳೆಯಾದರೂ ಕೂಡ ನಾವು ಕೆರೆಯಿಂದ ನೀರನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ಇದು ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುತ್ತದೆ, ಇದೊಂದೇ ಕೆರೆ ಉಪಯೋಗ ಎಂದು ದೇವರಮಲ್ಲೂರಿನ ವಿ. ಅಶೋಕ್ ಕುಮಾರ್ ಹೇಳುತ್ತಾರೆ.
ಈ ಏಳು ಗ್ರಾಮಗಳಲ್ಲಿ ಸುಮಾರು 3,000 ಖಾಸಗಿ ಕೊಳವೆ ಬಾವಿಗಳಿವೆ ಎನ್ನುವ ಅಂದಾಜಿದೆ. ಈ ಮುಂಗಾರು ಅವಧಿಯಲ್ಲಿ ಅವುಗಳಲ್ಲಿ 500ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿಹೋಗಿವೆ.
ಈ ಪ್ರದೇಶದಲ್ಲಿ ಕೊಳವೆ ಬಾವಿಗಳು ಬತ್ತಿಹೋಗುವುದು ಹೊಸದೇನಲ್ಲ, ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಬತ್ತಿಹೋಗಿರುವುದನ್ನು ನಾವು ಹಿಂದೆಂದೂ ಕಂಡಿರಲಿಲ್ಲ. ಶೇ 75ರಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ. ನೀರಿನ ಮಟ್ಟ ಕುಸಿದಿರುವುದರಿಂದ, ನಾವು ಕೃಷಿಗೆ ಯೋಗ್ಯವಾದ ಭೂಮಿಯ ಪೈಕಿ ಕೇವಲ ಶೇ 20 ರಿಂದ 30ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯುತ್ತಿದ್ದೇವೆ ಎನ್ನುತ್ತಾರೆ ಅಶೋಕ್ ಕುಮಾರ್.
ಇದೇ ಗ್ರಾಮದ ಶಶಿಕುಮಾರ್ ಅವರು ತಮ್ಮ 100ಕ್ಕೂ ಹೆಚ್ಚು ಕುರಿಗಳ ಹಿಂಡಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಪ್ರತಿ ವಾರ ಟ್ಯಾಂಕರ್ ಮೂಲಕ ನೀರನ್ನು ಖರೀದಿಸುತ್ತಾರೆ.
ಬೆಳೆ ಉಳಿಸಿಕೊಳ್ಳಲು ಹರಸಾಹಸ
ನೀರಿನ ಅಭಾವವಿರುವ ತಾಲೂಕುಗಳಲ್ಲಿ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆಬಾವಿಗಳನ್ನು ಕೊರೆಯಲು ಅಥವಾ ಮರು-ಕೊರೆಯಲು ತಮ್ಮ ಉಳಿತಾಯದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಅಥವಾ ಸಾಲ ಮಾಡುತ್ತಿದ್ದಾರೆ. ಆಳವು 1,200 ಅಡಿಗಳನ್ನು ದಾಟಿ, ಕೆಲವು ಸಂದರ್ಭಗಳಲ್ಲಿ 1,500 ಅಡಿಗಳವರೆಗೆ ತಲುಪಿದರೂ, ಪ್ರತಿ 10 ಕೊಳವೆ ಬಾವಿಗಳಲ್ಲಿ ಕೇವಲ ಎರಡು ಅಥವಾ ಮೂರು ಮಾತ್ರ ನೀರು ಒದಗಿಸಿ ಉಳಿದವು ವಿಫಲವಾಗುತ್ತಿದೆ. ಇದರಿಂದ ಹಣದ ಹೊರೆಯೂ ಇಲ್ಲಿನವರನ್ನು ವಿಭಿನ್ನವಾಗಿ ಬಾಧಿಸುತ್ತಿದೆ.
ನಾವು ಬೆಳೆ ಹಾಳಾಗಲು ಬಿಡುವ ಹಾಗೆಯೂ ಇಲ್ಲ. ನೀರಿಲ್ಲದೇ ಕಷ್ಟಪಡುತ್ತಿದ್ದರೂ ಇಳುವರಿ ಬಗ್ಗೆ ಯೋಚಿಸದೇ ಅವುಗಳನ್ನು ಉಳಿಸಿಕೊಳ್ಳಲು ಅಗತ್ಯವಿರುವಷ್ಟು ನೀರನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದವರು ದೇವನಹಳ್ಳಿ ತಾಲೂಕಿನ ಪೋಲನಹಳ್ಳಿ ಗ್ರಾಮದ ಶ್ರುತಿ ಮತ್ತು ಪ್ರಮೋದ್.
ಕರ್ನಾಟಕದಂತಹ ಪ್ರದೇಶದಲ್ಲಿ 1,000 ಅಡಿಗಿಂತ ಹೆಚ್ಚು ಆಳಕ್ಕೆ ಕೊಳವೆಬಾವಿಗಳನ್ನು ಕೊರೆಯುವುದು ವೈಜ್ಞಾನಿಕವಾಗಿಯೂ ಒಳ್ಳೆಯ ಪದ್ದತಿಯಲ್ಲ.. ಇಂತಹ ಆಳದಲ್ಲಿ ಕೊರೆಯುವುದರಿಂದ ಆಗಾಗ್ಗೆ ಲವಣಗಳು ಮತ್ತು ಖನಿಜಾಂಶಗಳು ಹೆಚ್ಚಿರುವ ಕಳಪೆ ಗುಣಮಟ್ಟದ ನೀರು ಬರುವ ಆತಂಕವೂ ಇರುತ್ತದೆ. ಜೊತೆಗೆ ಹೊಸ ನೀರಿನ ಮೂಲಗಳನ್ನು ಕಂಡುಕೊಳ್ಳುವಲ್ಲಿ ವಿಫಲವಾಗುವುದಲ್ಲದೇ ಸ್ಥಳೀಯ ಅಂತರ್ಜಲ ಮಟ್ಟ ಕುಸಿಯುವಿಕೆಯನ್ನು ಅಧಿಕಗೊಳಿಸಬಹುದು ಎಂದು ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಉಪ ನಿರ್ದೇಶಕ ಜಿ. ಜಯಣ್ಣ ವಿವರಿಸುತ್ತಾರೆ.