
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ: ಆರೋಪಿಯ ಬ್ಯಾಂಕ್ ಖಾತೆ ಜಪ್ತಿ
ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹8.43 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಮೂರು ಬ್ಯಾಂಕ್‌ಗಳ ಖಾತೆ ಜಪ್ತಿ ಮಾಡಿದ್ದು, ಇದರಲ್ಲಿರುವ ಮೊತ್ತ ಸುಮಾರು ₹3.5 ಕೋಟಿ ಎಂದು ಗೊತ್ತಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರಾಧಿಕಾರದಲ್ಲಿ ದಿನಗೂಲಿ ಆಧಾರದ ಮೇಲೆ ಲೆಕ್ಕಾಧಿಕಾರಿ ಮತ್ತು ಇಎಸ್‌ಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರಕುಮಾರ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಕುಟುಂಬದವರ ಖಾತೆಗೂ ಹಣ ವರ್ಗಾವಣೆಯಾಗಿರುವ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಹೊರರಾಜ್ಯಕ್ಕೆ ತೆರಳಿರುವ ಶಂಕೆಯೂ ವ್ಯಕ್ತವಾಗಿದೆ.
ರವೀಂದ್ರಕುಮಾರ 16 ವರ್ಷಗಳಿಂದ ಇಲ್ಲಿನ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದು ಈಗ ಹಣ ದುರುಪಯೋಗ ಆಗಿರುವ ಬಹಳಷ್ಟು ಮೊತ್ತ ಸರೋಜಮ್ಮ ಬಡಾವಣೆಗೆ ಸಂಬಂಧಿಸಿದ್ದು ಎಂದು ಮೂಲಗಳು ತಿಳಿಸಿವೆ. ಈಗಿನ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಆರಂಭದ ವರ್ಷದಲ್ಲಿ ಪ್ರಾಧಿಕಾರಕ್ಕೆ ಯಾರೂ ಅಧ್ಯಕ್ಷರು ಇರಲಿಲ್ಲ. ಆಗ ಹಣ ದುರುಪಯೋಗವಾಗಿದೆ ಎನ್ನುವುದು ಈಗ ಬಹಿರಂಗವಾಗಿದೆ.
ಸಮಿತಿ ರಚನೆ: ಈ ವರ್ಷದ ಅಡಿಟ್ ನಡೆಯುವಾಗ ಭ್ರಷ್ಟಾಚಾರ ನಡೆದಿದ್ದು ಪತ್ತೆಯಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಆಯುಕ್ತರು ಹುಬ್ಬಳ್ಳಿ, ಧಾರವಾಡದ ಆಯುಕ್ತರು ಸೇರಿದಂತೆ ಒಟ್ಟು ನಾಲ್ಕು ಜನರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದಾರೆ.
‘ಕುಟುಂಬದವರ ಹೆಸರಿನಲ್ಲಿಯೂ ಹಣ ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ಸಭೆಯಲ್ಲಿಯೇ ಹಣ ದುರ್ಬಳಕೆಯಾದ ಸರೋಜಮ್ಮ ಬಡಾವಣೆಯ ಕುರಿತು ಮಾಹಿತಿ ಒದಗಿಸುವಂತೆ ರವೀಂದ್ರಕುಮಾರಗೆ ಕೇಳಿದರೂ ಹಾರಿಕೆಯ ಉತ್ತರ ಕೊಟ್ಟಿದ್ದಾನೆ. ಜೋರು ಮಾಡಿ ಕೇಳಿದಾಗ ಎದೆ ನೋವಾಗುತ್ತಿದೆ ಎರಡು ದಿನ ಬಿಟ್ಟು ಕೊಡುತ್ತೇನೆ ಎಂದು ಜಾರಿಕೊಂಡಿದ್ದಾನೆ. ನಾಪತ್ತೆಯಾಗಿರುವ ಆರೋಪಿಯನ್ನು ತ್ವರಿತವಾಗಿ ಪತ್ತೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಪ್ರಾಧಿಕಾರದ ನಿಯೋಗದ ಸದಸ್ಯರು ಭೇಟಿಯಾಗಿ ಮನವಿ ಮಾಡಿದ್ದೇವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ ‘ಪ್ರಜಾವಾಣಿ’ಗೆ ತಿಳಿಸಿದರು.
ಘಟನೆಯ ಕುರಿತು ಪ್ರಾಧಿಕಾರದ ಆಯುಕ್ತ ಶರಣಪ್ಪ ದೂರು ದಾಖಲಿಸಿದ್ದು, ರವೀಂದ್ರಕುಮಾರ ಕರ್ತವ್ಯದಿಂದ ಮುಕ್ತಗೊಳಿಸಿದ ಬಳಿಕ ಪ್ರಾಧಿಕಾರದ ಆಯುಕ್ತರ ಹೆಸರಿನಲ್ಲಿ ಕೊಪ್ಪಳದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿರುವ ಪ್ರಾಧಿಕಾರ ಕಚೇರಿಯ ಕಡತದಲ್ಲಿ ಇಲ್ಲದ ಖಾತೆಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿದ್ದಾನೆ. ಪ್ರಾಧಿಕಾರದ ಆಯುಕ್ತರ ಹೆಸರಿನ ಚೆಕ್‌ನಲ್ಲಿ ಸೀಲ್ ಹಾಕಿ ಆಯುಕ್ತರ ಸಹಿ ನಕಲು ಮಾಡಿ ಹಣ ಪಡೆದುಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಬಡಾವಣೆಯ ಕಡತವೇ ನಾಪತ್ತೆ!
ಪ್ರಾಧಿಕಾರದ ಕಚೇರಿಯಲ್ಲಿ ಸರೋಜಮ್ಮ ಬಡಾವಣೆಗೆ ಸಂಬಂಧಿಸಿದಂತೆ ಕಡತವೇ ನಾಪತ್ತೆಯಾಗಿದ್ದು ತನಿಖಾ ಸಮಿತಿಗೆ ತಲೆನೋವಾಗಿ ಪರಿಣಮಿಸಿದೆ.
ರವೀಂದ್ರಕುಮಾರನನ್ನು ಇದೇ ವರ್ಷದ ಜನವರಿ 2ರಂದು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಭ್ರಷ್ಟಾಚಾರದ ಆರೋಪ ಕೇಳಿಬಂದ ಬಳಿಕ ಸರೋಜಮ್ಮ ಬಡಾವಣೆಯಲ್ಲಿ ಎಷ್ಟು ನಿವೇಶನಗಳು ಮಾರಾಟವಾಗಿವೆ, ನೋಂದಣಿಯಾಗಿವೆ ಎನ್ನುವ ಕುರಿತು ಮಾಹಿತಿ ಒದಗಿಸುವಂತೆ ಪ್ರಾಧಿಕಾರದ ಅಧ್ಯಕ್ಷರು ಉಪನೋಂದಣಾಧಿಕಾರಿ ಹಾಗೂ ಕೊಪ್ಪಳ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ರವೀಂದ್ರಕುಮಾರ ಮಾತ್ರವಲ್ಲದೇ ಇನ್ನಿತರ ಅಧಿಕಾರಿಗಳ ಕೈವಾಡವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-35-443234621