
ಚುಂಚೇನಹಳ್ಳಿ ಕಾಲೊನಿಯಲ್ಲಿ ಚರಂಡಿ ಸಮಸ್ಯೆ; ಸ್ಥಳೀಯರಿಗೆ ಸಂಕಷ್ಟ
ಕೊರಟಗೆರೆ: ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿಯ ಚುಂಚೇನಹಳ್ಳಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಚರಂಡಿ ಸಮಸ್ಯೆ ಬಿಗಡಾಯಿಸಿದ್ದು, ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.
ಕಾಲೊನಿಯ ಚರಂಡಿ ನೀರನ್ನು ಈ ಹಿಂದೆ ಸ್ಥಳೀಯರ ಜಮೀನಿನತ್ತ ಹರಿಸಲಾಗುತ್ತಿತ್ತು. ಆದರೆ ಜಮೀನಿಗೆ ಕೊಳಚೆ ನೀರು ಹರಿಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಮೀನು ಮಾಲೀಕರು ಚರಂಡಿ ನೀರು ಬರದಂತೆ ದಾರಿ ಮುಚ್ಚಿದ್ದಾರೆ. ಇದರಿಂದಾಗಿ ಕೊಳಚೆ ನೀರು ಮುಂದೆ ಸಾಗದೆ ಚರಂಡಿಯಲ್ಲಿಯೇ ಸಂಗ್ರಹವಾಗುತ್ತಿದೆ. ಇಡೀ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ.
ಸಮಸ್ಯೆ ಉಲ್ಬಣಿಸಿ ಎರಡು ತಿಂಗಳಾದರೂ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪರ್ಯಾಯ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಗ್ರಾಮಸ್ಥರ ಆಕ್ಷೇಪಿಸಿದ್ದಾರೆ.
ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಥಳ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ನಡೆದಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಕಾಲೊನಿಯ ಚರಂಡಿ ನೀರನ್ನು ನಮ್ಮ ಜಮೀನಿಗೆ ಹರಿಸಲಾಗುತ್ತಿತ್ತು. ಕೃಷಿ ಜಮೀನಿಗೆ ನಿರಂತರವಾಗಿ ಕೊಳಚೆ ನೀರು ಹರಿಯುವುದರಿಂದ ಬೆಳೆ ಹಾಗೂ ಜಮೀನಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ನೀರು ನಮ್ಮ ಜಮೀನಿಗೆ ಬರದಂತೆ ದಾರಿ ಮುಚ್ಚಬೇಕಾಯಿತು. ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
ಎರಡು ತಿಂಗಳಿನಿಂದ ಚರಂಡಿಯಲ್ಲಿ ನೀರು ನಿಂತಿದೆ. ಬಿಸಿಲು ಹೆಚ್ಚಾದಾಗ ದುರ್ವಾಸನೆ ತೀವ್ರವಾಗುತ್ತದೆ. ಮನೆ ಬಾಗಿಲು, ಕಿಟಕಿ ತೆರೆಯಲು ಸಾಧ್ಯವಾಗುತ್ತಿಲ್ಲ. ಸೊಳ್ಳೆ, ನೊಣಗಳ ಕಾಟದಿಂದ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ.
ಖಾಸಗಿ ಜಮೀನಿಗೆ ನೀರು ಹರಿಸುವುದು ಸರಿಯಲ್ಲ ಎಂಬುದು ನಮಗೂ ಗೊತ್ತು. ಆದರೆ ನೀರು ಎಲ್ಲಿಗೆ ಹರಿಸಬೇಕು ಎಂಬುದನ್ನು ಪಂಚಾಯಿತಿಯೇ ನಿರ್ಧರಿಸಬೇಕು. ಪರ್ಯಾಯ ಚರಂಡಿ ಅಥವಾ ಒಳಚರಂಡಿ ವ್ಯವಸ್ಥೆ ಮಾಡದೆ ಜನರನ್ನು ಎರಡು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿಸಿರುವುದು ಸರಿಯಲ್ಲ.
ಚರಂಡಿಯಲ್ಲಿ ತಿಂಗಳುಗಟ್ಟಲೆ ನೀರು ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ, ನೊಣಗಳ ಹಾವಳಿ ಹೆಚ್ಚಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಅಧಿಕಾರಿಗಳು ಕನಿಷ್ಠ ಸ್ಥಳಕ್ಕೆ ಭೇಟಿ ನೀಡಿ ನೀರು ತೆರವುಗೊಳಿಸುವ ತಾತ್ಕಾಲಿಕ ಕ್ರಮವನ್ನಾದರೂ ಕೈಗೊಳ್ಳಬೇಕಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-17-947956058