ಉಡುಪಿ: ನಗರದಲ್ಲೂ ಆಫ್ರಿಕನ್ ಬಸವನ ಹುಳುಗಳ ಕಾಟ

ಉಡುಪಿ: ನಗರದಲ್ಲೂ ಆಫ್ರಿಕನ್ ಬಸವನ ಹುಳುಗಳ ಕಾಟ

ಉಡುಪಿ: ನಗರದಲ್ಲೂ ಆಫ್ರಿಕನ್ ಬಸವನ ಹುಳುಗಳ ಕಾಟ

ಉಡುಪಿ: ಕೃಷಿಗೆ ಮಾರಕವಾಗಿರುವ ದೈತ್ಯ ಆಫ್ರಿಕನ್ ಬಸವನ ಹುಳು ಉಡುಪಿಯ ನಗರ ಪ್ರದೇಶದಲ್ಲೂ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದೈತ್ಯ ಆಫ್ರಿಕನ್ ಬಸವಣ್ಣ ಹುಳುಗಳು ನೆರೆಯ ಕೇರಳ ರಾಜ್ಯದ ಕಾಸರಗೋಡಿನ ವಿವಿಧೆಡೆ ಈಗಾಗಲೇ ಭಾರಿ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಕೃಷಿ ನಾಶಕ್ಕೂ ಕಾರಣವಾಗಿವೆ.

ಈ ಬಸವನ ಹುಳುಗಳು ತರಕಾರಿ, ಎಲೆಗಳು ವಿವಿಧ ಸಸ್ಯಗಳನ್ನು ತಿಂದು ಕೃಷಿಗೆ ಭಾರಿ ಹಾನಿ ಉಂಟು ಮಾಡುತ್ತವೆ. ಆಫ್ರಿಕನ್‌ ಬಸವನ ಹುಳುಗಳ ಮೇಲಿನ ಲೋಳೆ ಮನುಷ್ಯರಿಗೆ ತಾಗಿದರೆ ವಿವಿಧ ಸೋಂಕುಗಳಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಈಗಾಗಲೇ ಅಂಬಲಪಾಡಿಯ ವಿವಿಧೆಡೆ ಮನೆಯ ಆವರಣ ಗೋಡೆಗಳಲ್ಲಿ, ಮನೆಯ ಗೋಡೆಗಳಲ್ಲಿ ಇವುಗಳು ಹರಿದಾಡುತ್ತಿವೆ. ಆರಂಭದಲ್ಲಿ ಒಂದೆರಡು ಆಫ್ರಿಕನ್‌ ಬಸವನ ಹುಳುಗಳು ಕಾಣಿಸಿಕೊಂಡಿದ್ದು, ಇದೀಗ ಸಾಲು ಸಾಲಾಗಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಬಾವಿಕಟ್ಟೆಗಳಲ್ಲೂ ಇವುಗಳು ಹರಿದಾಡುತ್ತಿದ್ದು, ಕುಡಿಯುವ ನೀರಿಗೆ ಇವುಗಳು ಬಿದ್ದರೆ ನೀರು ಕಲುಷಿತವಾಗಬಹುದೆಂಬ ಭಯವನ್ನೂ ಜನರು ತೋಡಿಕೊಂಡಿದ್ದಾರೆ.

ಜೂನ್ ತಿಂಗಳ ಆರಂಭದಲ್ಲಿ ಕೆಲವಷ್ಟೇ ಆಫ್ರಿಕನ್ ಬಸವನ ಹುಳುಗಳು ಕಾಣಿಸಿಕೊಂಡಿದ್ದವು. ಇದೀಗ ಮನೆಯ ಗೋಡೆ ಕಾಂಪೌಂಡ್‌ಗಳ ಮೇಲೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ, ಇವುಗಳ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಆಫ್ರಿಕನ್ ಬಸವನ ಹುಳುಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಜತೆಗೆ ಅವುಗಳು ಗ್ರಾಮೀಣ ಪ್ರದೇಶಗಳಿಗೆ ತಲುಪಿದರೆ ಕೃಷಿಗೆ ಹಾನಿ ಉಂಟು ಮಾಡಬಹುದು. ಅದಕ್ಕೂ ಮೊದಲೇ ಸಂಬಂಧಪಟ್ಟವರು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಆಫ್ರಿಕನ್ ಬಸವನ ಹುಳುಗಳು ಗಿಡಗಳ ಮೃದುವಾದ ಭಾಗಗಳನ್ನು ತಿನ್ನುವುದರಿಂದ ಸಸ್ಯಗಳು ಒಣಗುತ್ತವೆ ಮತ್ತು ಅವುಗಳ ಬೆಳವಣಿಗೆ ಕುಂಠಿತವಾಗುತ್ತವೆ. ಶೀಲಿಂದ್ರ ರೋಗಗಳು ಕೂಡ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಡುತ್ತವೆ ಎನ್ನುತ್ತಾರೆ ತಜ್ಞರು.

‘ಆಫ್ರಿಕನ್‌ ಬಸವನ ಹುಳುಗಳು ತಮ್ಮ ಚಿಪ್ಪಿನ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಶಿಯಂ ಹೀರಿಕೊಳ್ಳಲು ಗೋಡೆಗಳ ಸುಣ್ಣ ಮತ್ತು ಸಿಮೆಂಟ್‌ಗಳಲ್ಲಿ ಹರಿದಾಡುತ್ತದೆ’ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ.

‘ನಿಯಂತ್ರಿಸದಿದ್ದರೆ ಹೆಚ್ಚಳ’

‘ದೈತ್ಯ ಆಫ್ರಿಕನ್ ಹೆಣ್ಣು ಬಸವನ ಹುಳು 200ರಿಂದ 300ರಷ್ಟು ಮೊಟ್ಟೆಗಳನ್ನಿಡುತ್ತವೆ. ಅದರಿಂದ ಅವುಗಳ ಸಂಖ್ಯೆ ಶೀಘ್ರ ವೃದ್ಧಿಸುತ್ತದೆ. ತೇವಾಂಶ ಇರುವ ಜಾಗಗಳಲ್ಲಿ, ಗಿಡ ಗಂಟಿಗಳಲ್ಲಿ ಅವುಗಳು ಹರಿದಾಡುತ್ತವೆ’ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್‌.

‘ಈ ಬಸವನ ಹುಳು ಈ ಹಿಂದೆ ಹೆಬ್ರಿ ಭಾಗಗಳಲ್ಲಿ ಕಂಡು ಬಂದಿವೆ. ಮಳೆಗಾಲದಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶೇ 1ರಷ್ಟು ಬೋರ್ಡೊ ಮಿಶ್ರಣಕ್ಕೆ ಉಪ್ಪು ಸೇರಿಸಿ ತಯಾರಿಸುವ ದ್ರಾವಣದಿಂದ ಅವುಗಳನ್ನು ನಿಯಂತ್ರಿಸಬಹುದು ಎಂದು ಅವರು ಹೇಳಿದರು.

‘ಹಲವು ಪರಿಣಾಮ ಉಂಟಾಗಬಹುದು’

'ಆಫ್ರಿಕನ್ ಬಸವನ ಹುಳು ಪೂರ್ವ ಆಫ್ರಿಕಾ ಪ್ರದೇಶದ ವಿಶೇಷವಾಗಿ ಕೀನ್ಯಾ ಮತ್ತು ತಾಂಜಾನಿಯಾ ದೇಶಗಳಿಗೆ ಸ್ಥಳೀಯವಾದ ಪ್ರಭೇದವಾಗಿದೆ. ಒಂದು ಜೀವಿ ತನ್ನ ಮೂಲ ವಾಸಸ್ಥಳದಿಂದ ಬೇರೆ ಪ್ರದೇಶಕ್ಕೆ ಪರಿಚಯಿಸಲ್ಪಟ್ಟಾಗ, ಅದು ಅಲ್ಲಿ ಹಲವು ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು’ ಎಂದು ಎಂಜಿಎಂ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮನಿತಾ ಟಿ.ಕೆ. ತಿಳಿಸಿದ್ದಾರೆ.

‘ಹೊಸ ಪ್ರದೇಶದಲ್ಲಿ ಅದರ ಉಳಿವಿಗೆ ಅನುಕೂಲಕರವಾದ ಹವಾಮಾನ ಪರಿಸ್ಥಿತಿ ಇದ್ದರೆ, ಅದು ಅಲ್ಲಿ ನೆಲೆಸಿ ತನ್ನ ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಅಲ್ಲದೆ, ಅದರ ಸಂಖ್ಯೆಯನ್ನು ನಿಯಂತ್ರಿಸುವ ನೈಸರ್ಗಿಕ ಶತ್ರುಗಳು ಕಡಿಮೆ ಇದ್ದರೆ ಅಥವಾ ಇಲ್ಲದಿದ್ದರೆ ಅದರ ಸಂಖ್ಯೆಯು ಅತಿಯಾಗಿ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

‘ಈ ಬಸವನ ಹುಳುಗಳು ಸುಮಾರು 500ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ಆಹಾರವಾಗಿ ಸೇವಿಸುತ್ತವೆ. ಅನೇಕ ಪ್ರದೇಶಗಳಲ್ಲಿ ಇವುಗಳನ್ನು ಕೃಷಿ ಕೀಟಗಳಾಗಿ ಪರಿಗಣಿಸಲಾಗಿದೆ. ಇವುಗಳು ಪರೋಪಜೀವಿಗಳನ್ನು ಹೊತ್ತೊಯ್ಯುವುದರಿಂದ ಅವುಗಳು ಮನುಷ್ಯನ ಸಂಪರ್ಕಕ್ಕೆ ಬಂದರೆ ಮೆದುಳಿನ ಉರಿಯೂತಕ್ಕೂ ಕಾರಣವಾಗಬಹುದು’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-28-1850324566

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ