
ಬಳ್ಳಾರಿ | ಕೋಚಿಂಗ್‌ನತ್ತ ಚಿತ್ತ: ಪಿಜಿಯಿಂದ ವಿಮುಖ
ಬಳ್ಳಾರಿ: ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‍ಕೆಯು) ಸೇರಿ ರಾಜ್ಯದೆಲ್ಲೆಡೆ ಇರುವ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ (ಪಿ.ಜಿ) ವಿಭಾಗಗಳು ವಿದ್ಯಾರ್ಥಿಗಳಿಲ್ಲದೆ ಭಣಗುಡತ್ತಿವೆ. ಪ್ರಸ್ತುತ ಸಾಲಿನ ಸ್ನಾತಕೋತ್ತರ (ಪಿ.ಜಿ) ತರಗತಿಗಳಿಗೆ ಅರ್ಜಿ ಸಲ್ಲಿಸಲು ಒಂದು ವಾರವಷ್ಟೇ ಬಾಕಿ ಇದ್ದರೂ, ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಬಂದಿಲ್ಲ.
150ಕ್ಕೂ ಕಡಿಮೆ ಅರ್ಜಿ: ವಿಶ್ವವಿದ್ಯಾಲಯ ಮೂಲಗಳ ಪ್ರಕಾರ, ಒಟ್ಟಾರೆ ಎಲ್ಲಾ ಸ್ನಾತಕೋತ್ತರ ವಿಭಾಗಗಳಿಂದ ಬಂದಿರುವ ಒಟ್ಟು ಅರ್ಜಿಗಳ ಸಂಖ್ಯೆ 150ಕ್ಕಿಂತಲೂ ಕಡಿಮೆ. ಕೆಲ ಮುಖ್ಯ ವಿಭಾಗಗಳಿಗೆ ಕೇವಲ ಮೂರ್ನಾಲ್ಕು ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ತೊಡಕು ಕಾಣಿಸಿಕೊಳ್ಳುತ್ತಿದ್ದರೂ, ಈ ವರ್ಷ ಸಮಸ್ಯೆ ತೀರಾ ವಿಪರೀತಕ್ಕೆ ಹೋಗಿದೆ.
ಪ್ರಾಧ್ಯಾಪಕರ ನಡಿಗೆ, ಕಾಲೇಜುಗಳ ಕಡೆಗೆ: ವಿದ್ಯಾರ್ಥಿಗಳ ಕೊರತೆಯಿಂದ ವಿಭಾಗಗಳನ್ನು ಮುಚ್ಚುವ ಅಥವಾ ನಡೆಸಿಕೊಂಡು ಹೋಗಲು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಕರೆತರುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯವು ಆಯಾ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಿಗೆ ವಹಿಸಿದೆ. ಪ್ರಾಧ್ಯಾಪಕರೇ ಈಗ ವಿವಿಧ ಪದವಿ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ ಸ್ನಾತಕೋತ್ತರ ಪದವಿಗೆ ದಾಖಲಾಗುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.
ಕಾರಣವೇನು?: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. 50 ಸಾವಿರ ಶಿಕ್ಷಕರ ಹುದ್ದೆ ಸೇರಿ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ ಭರವಸೆ ಯುವಜನರಲ್ಲಿ ಹೊಸ ಆಸೆ ಮೂಡಿಸಿದೆ.
ಅಧಿಸೂಚನೆಗಳ ಸಾಲು: ಗೆಜೆಟೆಡ್ ಪ್ರೊಬೇಷನರ್ಸ್ (ಕೆಪಿಎಸ್‌ಸಿ) ಸೇರಿದಂತೆ ಹಲವು ಇಲಾಖೆಗಳಲ್ಲಿನ ಹುದ್ದೆಗಳ ಭರ್ತಿಗೆ ಸರ್ಕಾರವು ಸಾಲು ಸಾಲು ಅಧಿಸೂಚನೆಗಳನ್ನು ಹೊರಡಿಸುತ್ತಿರುವುದು ಆಕಾಂಕ್ಷಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪ್ರೇರೇಪಿಸಿದೆ.
ಕೋಚಿಂಗ್ ಸೆಂಟರ್ ಆಯ್ಕೆ:ಪದವಿ ಮುಗಿಸಿದ ತಕ್ಷಣವೇ ಪಿ.ಜಿ ಮಾಡುವ ಬದಲು, ಒಂದಿಡೀ ತಲೆಮಾರಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.
‘ಇದು ಕೇವಲ ಬಳ್ಳಾರಿಯ ವಿಎಸ್‍ಕೆಯುಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ, ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲೂ ಪಿ.ಜಿ ವ್ಯಾಸಂಗಕ್ಕೆ ಆಸಕ್ತಿ ಕಡಿಮೆಯಾಗಿ ಸರ್ಕಾರಿ ಉದ್ಯೋಗಗಳ ಬೇಟೆಯಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ’ ಎಂದು ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಚರ್ಚೆ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ
ಬಳ್ಳಾರಿಯ ವಿಎಸ್‌ಕೆಯುನಲ್ಲಿ ಕೆಎಂಇಆರ್‌ಸಿಯ ಅನುದಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸುವ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳೆಲ್ಲವೂ ಇನ್ನೂ ಆರಂಭಿಕ ಹಂತದಲ್ಲಿವೆ. ಒಂದು ವೇಳೆ ಇಲ್ಲಿ ಅಂಥದ್ದೊಂದು ಕೇಂದ್ರವಾದರೆ, ಇಲ್ಲಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ಅನುಕೂಲವಾಗಲಿದೆ. ಪಿ.ಜಿ ತರಗತಿಗಳಿಗೆ ದಾಖಲಾತಿಯು ಹೆಚ್ಚಬಹುದು ’ ಎಂದು ವಿವಿಯ ಕುಲಪತಿ ಮುನಿರಾಜು ಅಭಿಪ್ರಾಯಪಟ್ಟಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-25-1812532043