
ರಾಯಚೂರು: ನಿರ್ವಹಣೆ ಕೊರತೆಯಿಂದ ಪಾಳುಬಿದ್ದ ಬಸ್ ತಂಗುದಾಣಗಳು ಸಾರ್ವಜನಿಕರ ಆಕ್ರೋಶ
ರಾಯಚೂರು: ನಗರದಲ್ಲಿರುವ ಬಸ್ ತಂಗುದಾಣಗಳು ಮೂಲಸೌಕರ್ಯ ಕೊರತೆ, ಸ್ವಚ್ಛತೆಯ ಅಭಾವ ಹಾಗೂ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದಕ್ಕೆ ತಕ್ಕಂತೆ ತಂಗುದಾಣ ಸೌಲಭ್ಯ ಕಲ್ಪಿಸದಿರುವುದು ಪ್ರಯಾಣಿಕರ ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ.
ಇಲ್ಲಿಯ ಸ್ಟೇಷನ್ ರಸ್ತೆ, ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಲಿಂಗಸುಗೂರು ರಸ್ತೆಯ ಡಿಸಿ ಬಂಗ್ಲೆ, ಗಂಜ್ ರಸ್ತೆ, ರಿಮ್ಸ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿರುವ ಬಸ್ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಬಹುತೇಕ ತಂಗುದಾಣಗಳಲ್ಲಿ ಸಮರ್ಪಕ ಆಸನಗಳಿಲ್ಲ. ಪರಿಣಾಮವಾಗಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಬಸ್‌ಗಾಗಿ ದೀರ್ಘಕಾಲ ನಿಂತುಕೊಂಡೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಧ್ಯಾಹ್ನ ಹಾಗೂ ಸಂಜೆ ವೇಳೆ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ ಮಳೆ ಸುರಿದರೆ, ತಂಗುದಾಣಗಳಲ್ಲಿ ಎಲ್ಲರಿಗೂ ಆಶ್ರಯ ಪಡೆಯಲು ಸಾಧ್ಯವಾಗುವುದಿಲ್ಲ. ಹಲವು ತಂಗುದಾಣಗಳು ಚಿಕ್ಕದಾಗಿರುವುದರಿಂದ ಪ್ರಯಾಣಿಕರು ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಪರದಾಡುತ್ತಿದ್ದಾರೆ.
ಕೆಲವು ಪ್ರದೇಶಗಳಲ್ಲಿ ತಂಗುದಾಣಗಳೇ ಇಲ್ಲದಿರುವುದರಿಂದ ಪ್ರಯಾಣಿಕರು ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗದಲ್ಲೇ ಬಸ್‌ಗಾಗಿ ಕಾಯಬೇಕಾಗಿದೆ. ವಾಹನ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಇದು ಅಪಾಯಕಾರಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಿದ ಬಳಿಕ ನಗರದಲ್ಲಿ ಬಸ್ ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಬಸ್ ತಂಗುದಾಣಗಳಲ್ಲಿ ಹಿಂದಿಗಿಂತ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ. ಆದರೆ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ತಂಗುದಾಣಗಳನ್ನು ವಿಸ್ತರಿಸುವುದು, ಆಸನ ವ್ಯವಸ್ಥೆ ಕಲ್ಪಿಸುವುದು ಹಾಗೂ ಮೂಲಸೌಕರ್ಯ ಸುಧಾರಿಸುವ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ನಗರದ ಹಲವು ಬಸ್ ತಂಗುದಾಣಗಳಲ್ಲಿ ಸ್ವಚ್ಛತೆಯೂ ಮರೀಚಿಕೆಯಾಗಿದೆ. ಎಲ್ಲೆಂದರಲ್ಲಿ ಕಸ ಬಿದ್ದಿರುವುದು, ಕಸದ ರಾಶಿ ವಿಲೇವಾರಿಯಾಗದಿರುವುದು ಹಾಗೂ ಗುಟ್ಕಾ, ಎಲೆ ಅಡಿಕೆ ಜಗಿದು ಉಗುಳಿರುವುದು ಸಾಮಾನ್ಯ. ಪ್ರಯಾಣಿಕರು ಕುಳಿತುಕೊಳ್ಳಬೇಕಾದ ಆಸನಗಳ ಸುತ್ತಮುತ್ತ ಕೊಳಕು ಮತ್ತು ದುರ್ವಾಸನೆ ಆವರಿಸಿರುವುದರಿಂದ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಕೆಲವು ತಂಗುದಾಣಗಳು ನಿರ್ಮಾಣಗೊಂಡು ಕೆಲವೇ ವರ್ಷಗಳಾಗಿದ್ದರೂ ನಿರ್ವಹಣೆ ಕೊರತೆಯಿಂದ ಶಿಥಿಲಗೊಳ್ಳುತ್ತಿವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಸೌಲಭ್ಯಗಳನ್ನು ನಿರಂತರವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಆಡಳಿತ ವಹಿಸಬೇಕಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಹಾನಿಗೊಳಗಾದ ಶೆಲ್ಟರ್‌ಗಳ ದುರಸ್ತಿ, ಸಮರ್ಪಕ ಆಸನಗಳ ಅಳವಡಿಕೆ, ವಿದ್ಯುತ್ ದೀಪಗಳ ವ್ಯವಸ್ಥೆ, ನಿಯಮಿತ ಸ್ವಚ್ಛತೆ, ಕಸ ವಿಲೇವಾರಿ ಹಾಗೂ ಅಗತ್ಯವಿರುವ ಕಡೆ ಹೊಸ ತಂಗುದಾಣಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಬಸ್ ನಿಲ್ದಾಣಗಳ ನಿರ್ವಹಣೆಗೆ ನಿಯಮಿತ ಪರಿಶೀಲನಾ ವ್ಯವಸ್ಥೆ ರೂಪಿಸುವ ಅಗತ್ಯವೂ ಇದೆ.
ಹಲವು ತಂಗುದಾಣಗಳ ಚಾವಣಿ ಹಾನಿಗೊಳಗಾಗಿದ್ದು, ವಿದ್ಯುತ್ ದೀಪಗಳ ಕೊರತೆಯೂ ಕಂಡುಬರುತ್ತಿದೆ. ರಾತ್ರಿ ವೇಳೆಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರಿಗೆ ಆತಂಕ ಉಂಟುಮಾಡುತ್ತಿದೆ. ಕೆಲವು ತಂಗುದಾಣಗಳಲ್ಲಿ ಬಸ್ ಮಾರ್ಗ ಹಾಗೂ ನಿಲುಗಡೆಗೆ ಸಂಬಂಧಿಸಿದ ಸೂಚನಾ ಫಲಕಗಳೂ ಸಮರ್ಪಕವಾಗಿಲ್ಲ. ಇದರಿಂದ ಹೊಸಬರು ಯಾವ ಬಸ್ ಎಲ್ಲಿಗೆ ಹೋಗುತ್ತದೆ ಎಂಬ ಮಾಹಿತಿ ಪಡೆಯಲು ಪರದಾಡುವಂತಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-32-659313365