
ಪರಿಶಿಷ್ಟರ ಮೇಲೆ ದೌರ್ಜನ್ಯ: ಶಿಕ್ಷೆ ನಗಣ್ಯ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಬಿ ರಿಪೋರ್ಟ್ ಸಲ್ಲಿಕೆ, ಶಿಕ್ಷೆ ಪ್ರಮಾಣ ಪ್ರಕಟಿಸಿದ ಪ್ರಕರಣ ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ!
‘ಆಮೆಗತಿಯ ತನಿಖೆ, ಸಾಕ್ಷಿ ಕೊರತೆ, ದೋಷಾರೋಪಣೆ ಪಟ್ಟಿ ಸಲ್ಲಿಕೆ ವಿಳಂಬ, ರಾಜಿ ಸಂಧಾನ ಇದಕ್ಕೆ ಕಾರಣ’ ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ದೂರುತ್ತಾರೆ.
ಏಳು ಜಿಲ್ಲೆಗಳಲ್ಲಿ 2024ರಿಂದ 2026ರ ಜುಲೈ ಅಂತ್ಯದವರೆಗೆ 1,271 ಪ್ರಕರಣಗಳು ದಾಖಲಾಗಿವೆ. 20 ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯಗಳು ಆರೋಪಿಗಳಿಗೆ ಶಿಕ್ಷೆ ವಿಧಿಸಿವೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಶಿಕ್ಷೆ ಪ್ರಮಾಣ ಶೂನ್ಯ!
ಆರೋಪಗಳು ಸಾಬೀತಾಗದ ಕಾರಣ 12 ಪ್ರಕರಣಗಳನ್ನು ನ್ಯಾಯಾಲಯಗಳು ರದ್ದುಪಡಿಸಿವೆ. 82 ಪ್ರಕರಣಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಿದ್ದಾರೆ.
ರಾಯಚೂರಿನಲ್ಲಿ ಹೆಚ್ಚು ಪ್ರಕರಣ: 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ 20.79ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ 19.03ರಷ್ಟು ಪರಿಶಿಷ್ಟ ಪಂಗಡದವರನ್ನು ಹೊಂದಿರುವ ರಾಯಚೂರು ಜಿಲ್ಲೆಯಲ್ಲಿ 311 ಪ್ರಕರಣಗಳು ದಾಖಲಾಗಿವೆ. ಆದರೆ, ಒಂದೇ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ.
ಕಲಬುರಗಿ ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 296, ಯಾದಗಿರಿ 200, ಕೊಪ್ಪಳ 156, ಬೀದರ್ 117 ಹಾಗೂ ಬಳ್ಳಾರಿಯಲ್ಲಿ 111 ಪ್ರಕರಣಗಳು ದಾಖಲಾಗಿವೆ.
ಕೊಪ್ಪಳದಲ್ಲಿ ಹೆಚ್ಚು ಶಿಕ್ಷೆ: ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಅಂದರೆ, ಒಟ್ಟು 9 ಪ್ರಕರಣಗಳು ಸಾಬೀತಾದ ಕಾರಣ ಆರೋಪಿಗಳಿಗೆ ನ್ಯಾಯಾ ಲಯಗಳು ಶಿಕ್ಷೆ ವಿಧಿಸಿವೆ. ಬೀದರ್ 7, ಯಾದಗಿರಿ 2, ಕಲಬುರಗಿಯಲ್ಲಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 5, ಕೊಪ್ಪಳ 4 ಹಾಗೂ ಯಾದಗಿರಿಯಲ್ಲಿ 3 ಪ್ರಕರಣಗಳನ್ನು ನ್ಯಾಯಾಲಯಗಳು ರದ್ದು ಮಾಡಿವೆ. ಕಲಬುರಗಿಯಲ್ಲಿ ಒಟ್ಟು 24 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ರಾಯಚೂರು 22, ಯಾದಗಿರಿ 14, ಕೊಪ್ಪಳ 10, ಬೀದರ್ 6, ಬಳ್ಳಾರಿ ಹಾಗೂ ವಿಜಯನಗರದಲ್ಲಿ ತಲಾ 3 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
‘ಶಿಕ್ಷೆಯಾಗದಿರುವುದಕ್ಕೆ ಪೊಲೀಸರೇ ಕಾರಣ’
‘ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗದಿರುವುದಕ್ಕೆ ಪೊಲೀಸರು ಮತ್ತು ಸರ್ಕಾರಿ ಅಭಿಯೋಜಕರೇ ಕಾರಣ’ ಎನ್ನುತ್ತಾರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್.
‘ಬಹುತೇಕ ಪ್ರಕರಣಗಳಲ್ಲಿ ಪೊಲೀಸರು ಕೌಂಟರ್ ಕೇಸ್ ಮಾಡಿಸಿ, ರಾಜಿ ಸಂಧಾನ ಮಾಡಿಸುತ್ತಾರೆ. ಸರ್ಕಾರಿ ಅಭಿಯೋಜಕರು ಹಾಗೂ ಪೊಲೀಸರ ನಡುವೆ ಸಮನ್ವಯ ಕೊರತೆ ಇದೆ. ಇದು ಸಹ ಪ್ರಕರಣ ಬಿದ್ದು ಹೋಗಲು ಕಾರಣ’ ಎಂದು ಹೇಳುತ್ತಾರೆ ಅವರು. ‘ಎಸ್.ಸಿ, ಎಸ್.ಟಿ ದೌರ್ಜನ್ಯ ಪ್ರಕರಣಗಳಿಗಾಗಿ ರಾಜ್ಯದಲ್ಲಿ ಡಿಸಿಆರ್‌ಇ ಠಾಣೆಗಳನ್ನು ಸ್ಥಾಪಿಸಲಾಗಿದೆ. ಆದರೆ, ಸಿಬ್ಬಂದಿ ಕೊರತೆ ಅವುಗಳನ್ನು ಕಾಡುತ್ತಿದೆ. ಅವುಗಳಿಗೆ ಸಮರ್ಪಕ ಸಿಬ್ಬಂದಿ ನೇಮಕ ಮಾಡಬೇಕು. ಸಂತ್ರಸ್ತರು, ಅವರ ಕುಟುಂಬದವರು ಹಾಗೂ ಸಾಕ್ಷಿಗಳಿಗೆ ಭದ್ರತೆ ಒದಗಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-35-992301464