
ಶಿಥಿಲ ಕಟ್ಟಡದಲ್ಲಿ ಗುಣಾತ್ಮಕ ಶಿಕ್ಷಣದ ಚಿಂತನೆ, ಅಧಿಕಾರಿಗಳ ಅಳಲು
ಸೇಡಂ: ಹಳೆಯದಾದ ಕಟ್ಟಡ, ಅಲ್ಲಲ್ಲಿ ಬಿರುಕುಬಿಟ್ಟ ಚಾವಣಿ, ಮುರಿದ ಕಿಟಕಿಗಳು, ಒಡೆದ ಗಾಜುಗಳು, ಹಾವು-ಚೇಳುಗಳ ಓಡಾಟ, ರಾತ್ರಿ ಕಳ್ಳ-ಕುಡುಕರ ಅಡ್ಡೆಯ ತಾಣ...
ಈ ಕಟ್ಟಡದಲ್ಲಿಯೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಚಿಂತನೆ, ಯೋಜನೆಗಳ ರೂಪಿಸುವಿಕೆಯ ಅನಿವಾರ್ಯ ಎದುರಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು-ಶಿಕ್ಷಕರು ದೂರುತ್ತಿದ್ದಾರೆ. ನಗರದ ವಾಸವದತ್ತ ಸಿಮೆಂಟ್ ಕಂಪನಿ ಪಕ್ಕದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದ ದುಸ್ಥಿತಿಯಿದು.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾದ ಶಿಕ್ಷಕರು ಮೊದಲು ತರಬೇತಿ ಪಡೆಯಲು ಬರುವುದು ಇದೇ ಸ್ಥಳಕ್ಕೆ. ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಎಲ್ಲಾ ಶಿಕ್ಷಕರು, ಅಧಿಕಾರಿಗಳು ಚರ್ಚೆ, ತರಬೇತಿ ನಡೆಸುವ ಹಾಗೂ ಯೋಜನೆಗಳನ್ನು ಹಾಕುವ ಮೂಲಕ ಮಕ್ಕಳಿಗೆ ಗುಣಾತ್ಮಕ ಕಲಿಕೆಯ ಬಹುತೇಕ ಯೋಜನೆಗಳು ರೂಪುಗೊಳ್ಳುವುದು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿಯೇ. 2002-03ರಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಹಳೆಯದಾಗಿದೆ.
ಚಾವಣಿ ಮಳೆಗಾಲದಲ್ಲಿ ತೇವಗೊಂಡು ಸೋರುತ್ತಿದೆ. ಕಟ್ಟಡಕ್ಕೆ ಸುರಕ್ಷತೆ ಮರೀಚಿಕೆಯಾಗಿದ್ದು, ಹಂದಿಗಳು ಕಂಪೌಂಡ್ ಒಳಗಡೆ ನುಗ್ಗುತ್ತವೆ. ಬೋರ್‌ವೆಲ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿ ಕಟ್ ಮಾಡಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. ಕಳ್ಳರ ಕಾಟ, ಕುಡುಕರ ಹಾವಳಿ ಹೆಚ್ಚಿದೆ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ ರಾಜಶ್ರೀ.
‘ಒಟ್ಟು 6 ಕೋಣೆಗಳಿದ್ದು, ಅವುಗಳಲ್ಲಿ ಮೂರು ಕಚೇರಿಗಾಗಿ, ಇನ್ನುಳಿದ ಮೂರು ತರಬೇತಿಗೆ ಬಳಸಲಾಗುತ್ತಿದೆ. ಈಗ ಎರಡು ಕೋಣೆಗಳನ್ನು ಇರುವ ಹಂತದಲ್ಲಿಯೇ ದುರಸ್ತಿ ಮಾಡಿಸಿ, ಬಳಸುವಂತಹ ಪ್ರಯತ್ನ ಮಾಡಲಾಗುತ್ತಿದೆ. ಆಗಾಗ ಹಣ ಖರ್ಚು ಮಾಡಿ ದುರಸ್ತಿ ಮಾಡುವ ಮೂಲಕ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಿಕ್ಕ ಕೋಣೆಗಳಿದ್ದು, ಶಿಕ್ಷಕರ ಸಂಖ್ಯೆ ಹೆಚ್ಚಾದಾಗ ಸಮಸ್ಯೆಯಾಗುತ್ತದೆ. ಕೆಲವು ಸಲ ತರಬೇತಿಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಹೊಸ ಕಟ್ಟಡ ಅಥವಾ ಇದೇ ಕಟ್ಟಡ ದುರಸ್ಥಿ ಮಾಡಿದ್ದಲ್ಲಿ ಶೈಕ್ಷಣಿಕ ಕಾರ್ಯಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ.
‘ಕ್ಷೇತ್ರ ಸಂಪನ್ಮೂಲ ಕೇಂದ್ರಕ್ಕೆ ಬರಲು ಸರಿಯಾದ ರಸ್ತೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಆಗಮಿಸುವ ಶಿಕ್ಷಕರಿಗೆ ತೊಂದರೆಯಾಗುತ್ತದೆ. ಅಲ್ಲದೆ ಕಚೇರಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಆಗಾಗ ಅವುಗಳನ್ನು ಸರಿಪಡಿಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ನರಸಪ್ಪ ರಾಹುಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-31-2127612594