
ಬರದ ಭೀತಿಯಲ್ಲಿ ಗಡಿ ಭಾಗದ ರೈತರು
ಔರಾದ್: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಆರಂಭದಿಂದಲೂ ವಾಡಿಕೆಯಂತೆ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪೂರ್ಣಗೊಂಡಿದ್ದರೂ ಬೆಳೆಗಳಿಗೆ ಅಗತ್ಯ ಪ್ರಮಾಣದ ತೇವಾಂಶ ದೊರೆಯದೆ ಸೋಯಾಬಿನ್, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳು ಒಣಗುತ್ತಿದ್ದು, ಗಡಿ ಭಾಗದ ರೈತರಲ್ಲಿ ಬರದ ಭೀತಿ ಆವರಿಸಿದೆ.
ಜೂನ್ ಆರಂಭದಿಂದಲೇ ಮಳೆ ಕೈಕೊಟ್ಟು ಬಿತ್ತನೆ ವಿಳಂಬವಾಗಿದೆ. ಜುಲೈ ಕೊನೆಯ ವಾರದಲ್ಲಿ ಕೆಲವೆಡೆ ಸುರಿದ ಮಳೆಯಿಂದ ಬೆಳೆಗಳು ಚೇತರಿಸಿಕೊಂಡಿವೆ. ಆದರೆ, ಆಗಸ್ಟ್‌ನಲ್ಲಿ ಮತ್ತೆ ಮಳೆ ಕೈಕೊಟ್ಟಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಹೂ, ಕಾಯಿ ಕಟ್ಟುವ ನಿರ್ಣಾಯಕ ಹಂತದಲ್ಲಿರುವ ಬೆಳೆಗಳಿಗೆ ಮಳೆ ಕೊರತೆ ತೀವ್ರ ಹೊಡೆತ ನೀಡಿದೆ.
‘ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ 157 ಮಿ.ಮೀ ಮಳೆಯಾಗಬೇಕಾಗಿದ್ದು, ಇದುವರೆಗೆ ಕೇವಲ 80 ಮಿ.ಮೀ ಮಳೆಯಾಗಿದೆ. ಅದೂ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಹಲವು ಭಾಗಗಳಲ್ಲಿ ಇದಕ್ಕಿಂತಲೂ ಕಡಿಮೆ ಮಳೆಯಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಒಟ್ಟು 62,550 ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 60,738 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 39,568 ಹೆಕ್ಟೇರ್‌ನಲ್ಲಿ ಸೋಯಾಬಿನ್ ಹಾಗೂ 18,950 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ಒಟ್ಟಾರೆ ಶೇ 90ಕ್ಕೂ ಅಧಿಕ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಪೂರ್ಣಗೊಂಡಿದ್ದರೂ, ಮಳೆ ಕೊರತೆಯಿಂದ ಬೆಳೆಗಳ ನಿರೀಕ್ಷಿತ ಬೆಳವಣಿಗೆ ಆಗಿಲ್ಲ.
‘ಸರ್ಕಾರಕ್ಕೆ ವರದಿ ಸಲ್ಲಿಕೆ’
ಔರಾದ್ ತಾಲ್ಲೂಕಿನಲ್ಲಿ ಶೇ 97ರಷ್ಟು ಮುಂಗಾರು ಬಿತ್ತನೆಯಾಗಿದೆ. ಆದರೆ, ಸರಾಸರಿಗಿಂತ ಕಡಿಮೆ ಮಳೆಯಾಗಿರುವುದರಿಂದ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಾಲ್ಲೂಕಿನ ಮಳೆ ಮತ್ತು ಬೆಳೆ ಪರಿಸ್ಥಿತಿಯ ಕುರಿತು ಸರ್ಕಾರಕ್ಕೆ ಕಾಲಕಾಲಕ್ಕೆ ವರದಿ ಸಲ್ಲಿಸಲಾಗುತ್ತಿದೆ
–.ಮಾರ್ಥಂಡ್, ಸಹಾಯಕ ಕೃಷಿ ನಿರ್ದೇಶಕ ಔರಾದ್
‘ಬರ ಘೋಷಣೆಯಲ್ಲಿ ತಾರತಮ್ಯ ಬೇಡ’
ಕೆಲವು ಹೋಬಳಿಗಳಲ್ಲಿ ಮಾತ್ರ ಮಳೆಯಾಗಿರುವುದನ್ನು ಇಡೀ ತಾಲ್ಲೂಕಿನ ಮಳೆ ಪರಿಸ್ಥಿತಿಗೆ ಅನ್ವಯಿಸುವುದು ಸರಿಯಲ್ಲ. ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಮಳೆ ಕೊರತೆಯಿದ್ದು, ಬರ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬರ ಘೋಷಣೆ ಮಾಡುವಾಗ ಯಾವುದೇ ತಾರತಮ್ಯ ಮಾಡದೆ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕು.
–ಗೋವಿಂದ ಇಂಗಳೆ, ಎಪಿಎಂಸಿ ಮಾಜಿ ಸದಸ್ಯ
‘ಪರಿಸ್ಥಿತಿ ಎದುರಿಸಲು ಸಿದ್ಧರಾಗಬೇಕಿದೆ’
ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತ ಬಂದರೂ ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಕೆರೆ–ಕಟ್ಟೆ, ಹಳ್ಳ ಕೊಳ್ಳಗಳು ಈಗಲೂ ಖಾಲಿ ಇವೆ. ಸದ್ಯಕ್ಕೆ ಕುಡಿಯುವ ನೀರು, ಮೇವಿನ ಯಾವುದೇ ಕೊರತೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಾಗಬೇಕಿದೆ.
–ಕಿರಣ ಪಾಟೀಲ, ಔರಾದ್ ತಾ.ಪಂ ಇಒ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-33-1089821496