ಕುಣಿಗಲ್: ಹಳ್ಳ ಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಕುಣಿಗಲ್: ಹಳ್ಳ ಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಕುಣಿಗಲ್: ಹಳ್ಳ ಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಕುಣಿಗಲ್: ತಾಲ್ಲೂಕಿನ ಎಡೆಯೂರು ಹೋಬಳಿ ಸೇರಿದಂತೆ ಮಾರ್ಕೋನಹಳ್ಳಿ ಗ್ರಾಮ ಪಂಚಾಯಿತಿಯ ಹಲವು ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಸರಬರಾಜು ಮಾಡಲು 2010-11ನೇ ಸಾಲಿನಲ್ಲಿ ಆರಂಭವಾಗಿದ್ದ ಮಾರ್ಕೋನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಸ್ತುತ ಕೇವಲ ನಾಲ್ಕು ಗ್ರಾಮಗಳಿಗೆ ಮಾತ್ರ ಅಲ್ಪ ಪ್ರಮಾಣದ ನೀರು ಸರಬರಾಜಾಗುತ್ತಿದ್ದು, ಸೂಕ್ತ ಕ್ರಮ ಕೈಗೊಂಡು ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿದ್ದಾಗ ₹7 ಕೋಟಿ ವೆಚ್ಚದಲ್ಲಿ ಪ್ರಾರಂಭಗೊಂಡ ಯೋಜನೆ ಅಂಗವಾಗಿ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಬೃಹತ್ ಜಲ ಸಂಗ್ರಹಾಗಾರ ನಿರ್ಮಾಣ ಮಾಡಲಾಗಿದೆ. 30, 35 ಎಚ್.ಪಿ ಸಾಮರ್ಥ್ಯದ ನಾಲ್ಕು ಮೋಟರ್, ಓವರ್ ಹೆಡ್ ಟ್ಯಾಂಕ್ ಮತ್ತು ಪೈಪ್‌ಲೈನ್‌ ನಿರ್ಮಿಸಲಾಗಿತ್ತು.

ರಸ್ತೆ ವಿಸ್ತರಣೆ ನೆಪದಲ್ಲಿ ಇದೀಗ ಪೈಪ್‌ಲೈನ್‌ ನಾಶವಾಗಿದೆ. ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜಾಗುತ್ತಿಲ್ಲ. ನಾಲ್ಕು ಮೋಟರ್ ಪೈಕಿ ಮೂರು ಕೆಟ್ಟು ವರ್ಷಗಳೇ ಗತಿಸಿದೆ. ಉಳಿದ ಒಂದು ಮೋಟರ್ ಸಹ ನಿರಂತರವಾಗಿ ಕೆಟ್ಟು, ಆಗ್ಗಿಂದಾಗ್ಗೆ ದುರಸ್ತಿ ಆಗುತ್ತಿದೆ. ನಿರ್ವಹಣೆಯ ಗುತ್ತಿಗೆ ಪಡೆದವರು ವೆಚ್ಚವನ್ನು ಪಡೆಯುತ್ತಿದ್ದಾರೆ ಹೊರತು ನಿರ್ವಹಣೆಗೆ ಗಮನ ಹರಿಸುತ್ತಿಲ್ಲ. ನೀರು ಶುದ್ಧಿಕರಣ ಘಟಕದಲ್ಲೂ ಅವ್ಯವಸ್ಥೆಯಾಗಿ ಅಶುದ್ಧ ನೀರು ಸರಬರಾಜುಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಎಡೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,500 ಕುಟುಂಬಗಳಿವೆ. ಎಡೆಯೂರು, ಬೀರಗಾನಹಳ್ಳಿಗೆ ನೀರಿನ ಅಗತ್ಯವಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಕೆಟ್ಟು ನಿಂತಿರುವ ಮೋಟರ್ ದುರಸ್ತಿಗೊಳಿಸಿ ನೀರಿನ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲು ಪಂಚಾಯಿತಿ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ 2024ರಿಂದಲೂ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಎಡೆಯೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ದುರಸ್ತಿಗೆ ಕ್ರಮ; ಹೊಸ ಟೆಂಡರ್

17 ಗ್ರಾಮಗಳ ಪೈಕಿ ಏಳು ಗ್ರಾಮಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಕೆಟ್ಟು ಹೋಗಿರುವ ನಾಲ್ಕು ಮೋಟರ್ ಪೈಕಿ ಒಂದನ್ನು ದುರಸ್ತಿಗೆ ಕ್ರಮ ಕೈಗೊಂಡಿದ್ದು, ಇನ್ನೆರಡು ದಿನದಲ್ಲಿ ಪೂರ್ಣಗೊಳಿಸಲಾಗುವುದು. ಮೂರು ಹೊಸ ಮೋಟರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಇನ್ನೂ ನಾಶವಾಗಿರುವ ಪೈಪ್‌ಲೈನ್‌ ಹೊಸದಾಗಿ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ. ನಿರ್ವಹಣೆಯ ಗುತ್ತಿಗೆ ಅಕ್ಟೋಬರ್‌ಗೆ ಮುಗಿಯಲಿದೆ. ಎಂಜಿನಿಯರ್ ನೇಮಕದ ಜತೆ ಹೊಸದಾಗಿ ಟೆಂಡರ್ ಕರೆದು ಸೂಕ್ತ ನಿರ್ವಹಣೆಗೆ ಗಮನಹರಿಸಲಾಗುವುದು ಎಂದು ಕಾರ್ಯಪಾಲಕ ಎಂಜಿನಿಯರ್ ರಾಜಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ