
ಒಮ್ಮೆಯೂ ಸಚಿವರಾಗದ ಜಿ.ಎಸ್. ಪಾಟೀಲ ಈಗ ವಿಧಾನಸಭಾ ಅಧ್ಯಕ್ಷ
ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಶಾಸಕ, ಇದುವರೆಗೆ ಒಮ್ಮೆಯೂ ಸಚಿವರಾಗದ ಜಿ.ಎಸ್. ಪಾಟೀಲ ಅವರು ವಿಧಾನಸಭೆಯ ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಅವಿಭಜಿತ ಧಾರವಾಡದ, ಸದ್ಯ ಗದಗ ಜಿಲ್ಲೆಯ ರೋಣ ಕ್ಷೇತ್ರವನ್ನು ವಿಧಾನಸಭೆಯಲ್ಲಿ ನಾಲ್ಕನೇ ಬಾರಿಗೆ ಪ್ರತಿನಿಧಿಸುತ್ತಿರುವ ಗುರುಪಾದಗೌಡ ಸಂಗನಗೌಡ ಪಾಟೀಲ ಅವರು ಲಿಂಗಾಯತ ರಡ್ಡಿ ಸಮುದಾಯದ ಪ್ರಭಾವಿ ನಾಯಕರು.
1980ರ ದಶಕದಿಂದಲೂ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿರುವ ಪಾಟೀಲರು, 1989, 1999, 2013 ಹಾಗೂ 2023ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1994, 2004, 2008 ಹಾಗೂ 2018ರಲ್ಲಿ ಪರಾಭವಗೊಂಡಿದ್ದರು.
ಈ ಹಿಂದೆ ನವೀಕರಿಸಬಹುದಾದ ಇಂಧನಗಳ ನಿಗಮದ ಅಧ್ಯಕ್ಷರಾಗಿದ್ದ ಪಾಟೀಲರಿಗೆ ಕಳೆದ ಬಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ, ಖನಿಜ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಈ ಸಲವೂ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೆ ಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ನಿಯೋಜನೆಗೊಂಡಿದ್ದರು. 78 ವರ್ಷದ ಪಾಟೀಲರು ಸದ್ಯ ಗದಗ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ.
ರೋಣ ತಾಲ್ಲೂಕಿನ ಪ್ರಮುಖ ಪಾಟೀಲ ಕುಟುಂಬದ ಸದಸ್ಯರು, ಇವರ ಸಹೋದರ ಆರ್.ಎಸ್. ಪಾಟೀಲ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸತ್ ಪ್ರವೇಶಿಸಿದ್ದರು. ಇನ್ನೊಬ್ಬ ಸಹೋದರ ರಾಜ್ಯ ಮುಖ್ಯಕಾರ್ಯದರ್ಶಿಯಾಗಿದ್ದರು.