ಮೊಳಕಾಲ್ಮುರು ಬರ ಪಟ್ಟಿಯಿಂದ ಹೊರಕ್ಕೆ; ವಿಮೆ ಬಗ್ಗೆಯೂ ಆತಂಕ

ಮೊಳಕಾಲ್ಮುರು ಬರ ಪಟ್ಟಿಯಿಂದ ಹೊರಕ್ಕೆ; ವಿಮೆ ಬಗ್ಗೆಯೂ ಆತಂಕ

ಮೊಳಕಾಲ್ಮುರು ಬರ ಪಟ್ಟಿಯಿಂದ ಹೊರಕ್ಕೆ; ವಿಮೆ ಬಗ್ಗೆಯೂ ಆತಂಕ

ಮೊಳಕಾಲ್ಮುರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಮೊಳಕಾಲ್ಮುರನ್ನು ಕೈಬಿಡಲಾಗಿದ್ದು, ಮುಂದೆ ಫಸಲ್‌ ಬಿಮಾ ಯೋಜನೆಯಿಂದ ವಂಚಿತವಾಗುವ ಆತಂಕ ಅನ್ನದಾತರನ್ನು ಕಾಡುತ್ತಿದೆ.

ಸತತ 7 ವರ್ಷಗಳಲ್ಲಿ ಬೆಳೆದ ಬೆಳೆಯ ಇಳುವರಿಯನ್ನು ಪರಿಗಣಿಸಿ ವಿಮೆ ನೀಡಲಾಗುತ್ತಿದೆ. ಈ ಮಾನದಂಡದಂತೆ ಇಲ್ಲಿನ ರೈತರಿಗೆ ಒಂದು ಸಲ ಮಾತ್ರ ಪೂರ್ಣ ಪ್ರಮಾಣದ ವಿಮೆ ದಕ್ಕಿದೆ. ಕಳೆದ ವರ್ಷ ‘ಪ್ರೀಸೋಯಿಂಗ್‌’ ವಿಮೆ ಲಭಿಸುವುದಾಗಿ ಹೇಳಲಾಗಿತ್ತು, ಆದರೆ ನಯಾಪೈಸೆ ಸಿಕ್ಕಿರಲಿಲ್ಲ. ಪಕ್ಕದ ಚಳ್ಳಕೆರೆ ತಾಲ್ಲೂಕಿಗೆ ಪೂರ್ಣ ವಿಮೆ ಸಿಕ್ಕಿತು. ಈ ವರ್ಷವೂ ಇದು ಮರುಳಿಸುವ ಆತಂಕ ಎದುರಾಗಿದೆ.

‘ಮುಂಗಾರಿನಲ್ಲಿ ಮಳೆಯನ್ನು ನಂಬಿ ಇಲ್ಲಿ ಏಕಬೆಳೆ ಪದ್ಧತಿಯಡಿ ಕೃಷಿ ಮಾಡಲಾಗುತ್ತದೆ. ಈ ಸಲ ಮಳೆ ಇಲ್ಲದೇ ಬಿತ್ತನೆ ಕುಂಠಿತವಾಗಿದೆ. ಬಿತ್ತನೆಯಾಗಿರುವ ಬೀಜವೂ ಹುಟ್ಟಿಲ್ಲ. ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳು ಎಲ್ಲಾ ದೃಷ್ಟಿಯಲ್ಲೂ ಒಂದೇ ರೀತಿಯಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರವು ಅನುದಾನ ಹಾಗೂ ಪರಿಹಾರದ ವಿಷಯದಲ್ಲಿ ಮೊಳಕಾಲ್ಮುರನ್ನು ಕಡೆಗಣಿಸಿದೆ. ಇದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಂತಿದೆ’ ಎಂದು ಜನಸಂಸ್ಥಾನ ಸಂಸ್ಥೆಯ ವಿರೂಪಾಕ್ಷಪ್ಪ ದೂರಿದರು.

‘ಸತತ 4 ವಾರ ಮಳೆ ಬಾರದಿರುವುದು, ಅಂತರ್ಜಲ ಮಟ್ಟ, ಕೆರೆಗಳಲ್ಲಿನ ನೀರಿನ ಲಭ್ಯತೆ, ಮಣ್ಣಿನ ತೇವಾಂಶ, ಬಿತ್ತನೆಯಾದ ಬೆಳೆಯ ಸ್ಥಿತಿಗತಿ, ವಾತಾವರಣದ ತೇವಾಂಶ, ಸ್ಯಾಟಲೈಟ್‌ ದತ್ತಾಂಶವನ್ನು ಪರಿಗಣಿಸಿ ಬರ ಘೋಷಣೆ ಮಾಡಲಾಗುತ್ತದೆ. ಜೂನ್‌ನಿಂದ ಇಲ್ಲಿಯ ತನಕ ತಾಲ್ಲೂಕಿನಲ್ಲಿ ವಾಡಿಕೆಯಂತೆ 156 ಮಿ.ಮೀ ಮಳೆಯಾಗಬೇಕಿತ್ತು. ಆದರೆ 112 ಮಿ.ಮೀ ಬಿದ್ದಿದೆ. ಆಗಸ್ಟ್ ಆರಂಭದಲ್ಲಿ ಸ್ವಲ್ಪ ಮಳೆ ಬಂದಿದ್ದು ಬರ ಘೋಷಣೆಗೆ ಅಡ್ಡಿಯಾಗಿದೆ. ತಾಲ್ಲೂಕಿನಲ್ಲಿ ಶೇ 87ರಷ್ಟು ರೈತರು ವಿಮೆ ಮಾಡಿಸಿದ್ದು ಶೇ 25ರಷ್ಟು ಪ್ರೀಸೋಯಿಂಗ್ ವಿಮೆಗಾಗಿ ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಗಿರೀಶ್‌ ಹೇಳಿದರು.

‘ಮೊಳಕಾಲ್ಮುರು, ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕುಗಳು ಶೇಂಗಾ ವಿಮೆಗೆ ಆಯ್ಕೆಯಾಗಿದ್ದವು. ಮಳೆ ಇಲ್ಲದಿದ್ದರೆ ‘ಪ್ರೀಸೋಯಿಂಗ್‌’ ಮಾನದಂಡದಲ್ಲಿ ಒಟ್ಟು ವಿಮೆಯ ಶೇ 25 ರಷ್ಟು ಪರಿಹಾರ ಪಡೆಯಲು ಅರ್ಹವಾಗಿ ಜಿಲ್ಲಾಡಳಿತದ ಮೂಲಕ ರಾಜ್ಯ ಕಚೇರಿಗೆ ವರದಿ ಸಲ್ಲಿಕೆಯಾಗಿದೆ. ಪ್ರತಿ ಎಕರೆಗೆ ₹ 6,600 ರಂತೆ ಪರಿಹಾರ ನಿಗದಿಯಾಗಿದೆ. ಈಗ ರಾಜ್ಯ ಸರ್ಕಾರದ ಬರ ಘೋಷಣೆಗೂ ಇದಕ್ಕೂ ಸಂಬಂಧವಿಲ್ಲ. ಪರಿಹಾರ ಮಂಜೂರಿಗೆ ಒಂದೂವರೆ ತಿಂಗಳು ಬೇಕಾಗಬಹುದು’ ಎಂದು ಈ ವರ್ಷ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ಗುತ್ತಿಗೆ ಪಡೆದಿರುವ ಇಫ್ಕೋ ಟೋಕಿಯೋ ಜನರಲ್‌ ಇನ್ಸೂರೆನ್ಸ್‌ ಕಂಪನಿಯ ಜಿಲ್ಲಾ ಅಧಿಕಾರಿ ನಟೇಶ್‌ ಬಾಬು ತಿಳಿಸಿದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಬರ ಪಟ್ಟಿಯಿಂದ ತಾಲ್ಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕವು ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿತು. ಶನಿವಾರ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಹಾಗೂ ಬಿಜೆಪಿ ಮಂಡಲ ವತಿಯಿಂದ ಪ್ರತ್ಯೇಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಕ್ರಮ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟರ್‌ಗಳೂ ಹರಿದಾಡುತ್ತಿದೆ. ‘ನಾವೇನು ಮಲೆನಾಡಿನಲ್ಲಿ ಇದ್ದೇವಾ’ ಎಂದು ಜನ ಪ್ರಶ್ನಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-44-291887319

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ