
ಶೃಂಗೇರಿ-ಗುಂಡಗದ್ದೆಮಕ್ಕಿ ರಸ್ತೆ ಸಂಪೂರ್ಣ ಹಾಳು, ಗ್ರಾಮಸ್ಥರಿಗೆ ತೊಂದರೆ
ಶೃಂಗೇರಿ: ತಾಲ್ಲೂಕಿನ ಕೂತುಗೋಡು ಗ್ರಾಮ ಪಂಚಾಯಿತಿಯ ವೈಕುಂಠಪುರದಿಂದ ಗುಂಡಗದ್ದೆಮಕ್ಕಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮಸ್ಥರು ಮತ್ತು ಶಾಲೆ, ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ.
ಜಲ್ಲಿ ರಸ್ತೆಯೂ ಅಲ್ಲದ, ಮಣ್ಣು ರಸ್ತೆಯಂತೆಯೂ ಇಲ್ಲದ ಈ ಮಾರ್ಗದಲ್ಲಿ ಮಳೆಗಾಲದಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿವೆ. ರಸ್ತೆ ಬದಿಯಲ್ಲಿ ಜಂಗಲ್ ಕಟಿಂಗ್ ಮಾಡದ ಪರಿಣಾಮ, ಜೋರು ಗಾಳಿ ಮಳೆಯಾದರೆ, ಮರದ ಕೊಂಬೆಗಳು ಮುರಿದು ರಸ್ತೆಗೆ ಬೀಳುತ್ತವೆ. ಜಲ್ಲಿ ಮತ್ತು ಮಣ್ಣು ಹಾಕಿದ್ದ ರಸ್ತೆಯಲ್ಲಿ, ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸಮರ್ಪಕ ಚರಂಡಿ ಇಲ್ಲದೆ ರಸ್ತೆಯ ಮೇಲೆಯೇ ನೀರು ಹರಿಯುತ್ತದೆ. ಇದರಿಂದ ನಿತ್ಯ ಸಂಚರಿಸುವವರು ಯಾತನೆ ಅನುಭವಿಸುವಂತಾಗಿದೆ. ಜನರು ನೀಡಿದ ಅರ್ಜಿಗೆ ಜನಪ್ರತಿನಿಧಿಗಳ ಸ್ಪಂದನೆಯೂ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಗುಂಡಗದ್ದೆಮಕ್ಕಿ, ಬಾಕುರ್ಡಿ, ಗಾಳಿತೋಟ, ಕುಂದೂರು, ಗೋಚವಳ್ಳಿಯಲ್ಲಿ ವಾಸಿಸುವ 85 ಕುಟುಂಬಗಳ 300ಕ್ಕೂ ಹೆಚ್ಚು ಜನರು ಪಟ್ಟಣಕ್ಕೆ ಬರಲು ಇದೇ ರಸ್ತೆ ಅವಲಂಬಿಸಿದ್ದಾರೆ. ಲಭ್ಯವಿರುವ ವಾಹನಗಳಲ್ಲಿ ಪೇಟೆಗೆ ಬಂದು ಮನೆಗೆ ಬೇಕಾಗುವ ಆಹಾರ ಸಾಮಗ್ರಿ ಹಾಗೂ ತೋಟಕ್ಕೆ ಬೇಕಾಗಿರುವ ಗೊಬ್ಬರ ಸಾಗಣೆ ಮಾಡುವುದು ಅವರಿಗೆ ಕಷ್ಟವಾಗುತ್ತಿದೆ. ರಸ್ತೆಯ ದುಃಸ್ಥಿತಿಯಿಂದಾಗಿ ಬಾಡಿಗೆ ವಾಹನಗಳು ಬರಲು ಹಿಂದೇಟು ಹಾಕುತ್ತವೆ. ಅನಾರೋಗ್ಯದ ಸಂದರ್ಭದಲ್ಲಂತೂ ಗೋಳು ಹೇಳಲು ಆಗದು ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.
ಕಾಲ್ನಡಿಗೆಯಲ್ಲಿ ಬರಲು ಕಷ್ಟಪಡುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೆಸರು ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ. ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗ್ರಾಮಸ್ಥರಾದ ನಾಗರಾಜ್, ಶೇಷಗಿರಿ, ರಾಜಶೇಖರ್, ಸುಮಂತ್, ರವಿಸಂಜಯ್, ಅಮರ್‌ನಾಥ್ ಒತ್ತಾಯಿಸಿದ್ದಾರೆ.
ಗ್ರಾಮಗಳ ಉದ್ಧಾರದಿಂದ ಮಾತ್ರ ದೇಶ ಉದ್ಧಾರವಾಗುತ್ತದೆ ಎಂದು ಹೇಳುವ ನಾಯಕರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು. ಜನರ ಮೂಲಭೂತ ಅಗತ್ಯ ಪೂರೈಸಲು ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕು ಎಂದು ಗ್ರಾಮಸ್ಥ ನವೀನ್ ಗುಂಡಗದ್ದೆಮಕ್ಕಿ ಒತ್ತಾಯಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-126-1515951308