ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ: ವಿಜಯೇಂದ್ರ ಹೇಳಿಕೆ

ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ: ವಿಜಯೇಂದ್ರ ಹೇಳಿಕೆ

ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ: ವಿಜಯೇಂದ್ರ ಹೇಳಿಕೆ

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಇತ್ತ ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆ ಆರಂಭಿಸಿದರೆ, ಶಿಕಾರಿಪುರ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಶೀಲನಾ ಸಭೆಯ ಆರಂಭಕ್ಕೂ ಮೊದಲು ಸಚಿವ ಮಧು ಬಂಗಾರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಬಿ.ವೈ. ವಿಜಯೇಂದ್ರ ನಡುವಿನ ಲೋಕಾಭಿರಾಮ ಮಾತುಕತೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಶನಿವಾರ ನಡೆದ ಈ ಸಭೆಯ ಆರಂಭಕ್ಕೂ ಮೊದಲು ವೇದಿಕೆಯಲ್ಲಿ ಪಿಸು ಧ್ವನಿಯಲ್ಲಿ ಇಬ್ಬರೂ ಪರಸ್ಪರ ಮಾತುಕತೆ ನಡೆಸಿರುವುದು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಈ ಸಂಭಾಷಣೆಯ ತುಣುಕನ್ನು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್‌, ‘ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ. ಈ ಯೋಜನೆ ವಿರುದ್ಧದ ಪಾದಯಾತ್ರೆಗೆ ಬಿಜೆಪಿ ನೈತಿಕ ಬೆಂಬಲ ನೀಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರೇ ಹೇಳಿದ್ದಾರೆ. ಹೀಗಿರುವಾಗ ಪಾಪದ ಪ್ರಾಯಶ್ಚಿತ್ತ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ? ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ನೆಲೆಗಾಗಿಯೋ? ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿ ರಕ್ಷಣೆಗೋ ಎಂದು ವ್ಯಂಗ್ಯವಾಡಿದೆ.

ಸಭೆಯ ಸ್ವಾಗತದ ವೇಳೆಯಲ್ಲಿ, ‘ಇಂದು ನಿಮ್ಮದೇನೊ ಇರಬೇಕಲ್ಲ. ಅದೇನೊ ಪಾದಯಾತ್ರೆ ಏನೋ ಇಟ್ಟುಕೊಂಡಿದ್ದೀರಿ. ಮಾಡುತ್ತಾ ಇಲ್ಲವಾ?’ ಎಂದು ಮಧು ಬಂಗಾರಪ್ಪ ಪ್ರಶ್ನಿಸುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಬಿ.ವೈ. ವಿಜಯೇಂದ್ರ, ‘ಮಾಡುತ್ತಾ ಇದ್ದಾರೆ ಅದು ಸಿಂಬಾಲಿಕ್ ಮಾತ್ರ. ಯಾರ‍್ಯಾರು ಹೋರಾಟಕ್ಕೆ ಬಂದಿದ್ದಾರೋ ಅವರೆಲ್ಲ ಪರಿಹಾರ ಪಡೆಯುತ್ತಿದ್ದಾರೆ’ ಎನ್ನುತ್ತಾರೆ.

‘ಎಷ್ಟು ಪರ್ಸೆಂಟ್ ತೆಗೆದುಕೊಂಡಿದ್ದಾರೆ’ ಎಂಬ ಮಧು ಬಂಗಾರಪ್ಪ ಪ್ರಶ್ನೆಗೆ, ‘ನಾನು ಅದನ್ನು ಫಾಲೊ ಮಾಡಿಲ್ಲ. ಆದರೆ, ಎಷ್ಟು ಪರ್ಸೆಂಟ್ ಗೊತ್ತಿಲ್ಲ. ಆದರೆ ಪರಿಹಾರ ಪಡೆಯುತ್ತಿದ್ದಾರೆ’ ಎಂದು ಹೇಳುತ್ತಾರೆ. ‘ಹಾಗಿದ್ದರೆ ಅದು ವೀಕ್ ಆಗುತ್ತಿದೆಯೇ’ ಎಂಬ ಮಧು ಬಂಗಾರಪ್ಪ ಪ್ರಶ್ನೆಗೆ ‘ನಿಮಗೆ ಗೊತ್ತಿದೆ. ರಿಯಲ್‌ ಎಸ್ಟೇಟ್‌ನವರ ವಿಚಾರ’ ಎನ್ನುತ್ತಾರೆ.

ಇಬ್ಬರು ಮಾತನಾಡುತ್ತಿದ್ದ ವೇಳೆಯಲ್ಲಿ ಎದುರಿಗಿದ್ದ ಮೈಕ್ ಆನ್ ಆಗಿದ್ದರಿಂದ ಈ ಸಂಭಾಷಣೆ ರೆಕಾರ್ಡ್ ಆಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ