ವಿಜಯಪುರ | ಸಿಗದ ಸಚಿವ ಸ್ಥಾನ: ಭುಗಿಲೆದ್ದ ಅಸಮಾಧಾನ

ವಿಜಯಪುರ | ಸಿಗದ ಸಚಿವ ಸ್ಥಾನ: ಭುಗಿಲೆದ್ದ ಅಸಮಾಧಾನ

ವಿಜಯಪುರ | ಸಿಗದ ಸಚಿವ ಸ್ಥಾನ: ಭುಗಿಲೆದ್ದ ಅಸಮಾಧಾನ

ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನೆಲ್ಲೇ ಸಚಿವ ಸ್ಥಾನ ವಂಚಿತ ಜಿಲ್ಲೆಯ ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಸಿ.ಎಸ್‌.ನಾಡಗೌಡ ಪಕ್ಷದ ವರಿಷ್ಠರ ವಿರುದ್ಧ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರದ ಮತದಾರರು, ಬೆಂಬಲಿಗರ ಜೊತೆ ಚರ್ಚಿಸಿ, ಪಕ್ಷದಿಂದ ಹೊರನಡೆಯುವುದಾಗಿ ಹೇಳಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ ಅವರು ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದ(ಕೆ.ಎಸ್.ಡಿ.ಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿದ್ದ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಕೂಡ ಡಿ.ಕೆ.ಶಿವಕುಮಾರ್‌ ಸಂಪುಟ ಸೇರುವ ತವಕದಲ್ಲಿದ್ದರು. ಈ ಸಂಬಂಧ ಪ್ರಬಲ ಲಾಭಿ ನಡೆಸಿದ್ದರು. ಆದರೆ, ಅವರಿಗೂ ಮಂತ್ರಿ ಸ್ಥಾನ ಕೈತಪ್ಪಿದೆ. ಈ ಕುರಿತು ಅವರು ಇದುವರೆಗೂ ಬಹಿರಂಗವಾಗಿ ಎಲ್ಲಿಯೂ ತಮ್ಮ ಅಸಮಾದಾನ ವ್ಯಕ್ತಪಡಿಸಿಲ್ಲ.

ಜಿಲ್ಲೆಯ ಈ ಮೂವರು ಘಟಾನುಘಟಿ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಮೂವರಲ್ಲಿ ಯಾರೊಬ್ಬರಿಗೆ ನೀಡಿದರೂ ಇನ್ನುಳಿದ ಇಬ್ಬ ರಿಂದ ಅಸಮಾ ಧಾನ ನಿಶ್ಚಿತವಾಗಿತ್ತು. ಪಕ್ಷದ ವರಿಷ್ಠರು ಮೂವರನ್ನು ಕೂರಿಸಿ, ಒಮ್ಮತದ ತೀರ್ಮಾನ ಕೈಗೊಳ್ಳಲು ಅವಕಾಶವಿತ್ತಾದರೂ ಹಾಗೆ ನಡೆದಿಲ್ಲ.

ಶಾಸಕರ ಈ ಅಸಮಾದಾನವು ವಿಜಯಪುರ ಜಿಲ್ಲೆಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ಚಿತವಾಗಿದೆ.

ಈಗಾಗಲೇ ಕಾಂಗ್ರೆಸ್‌ ಶಾಸಕರ ನಡುವೆ ತೆರೆಮರೆಯಲ್ಲಿ ಇದ್ದ ಗುದ್ದಾಟ ಮುಂಬರುವ ದಿನಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಲಿದೆ.

ಯಶವಂತರಾಯ‌ರ ಮುಂದಿನ ನಡೆಯೇನು?

ಇಂಡಿ ಶಾಸಕ ಯಶವಂತರಾಯಗೌಡರು ಒಂದು ವೇಳೆ ಮನವೊಲಿಕೆ ಪ್ರಯತ್ನಕ್ಕೆ ಒಪ್ಪದೇ ಶಾಸಕ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದರೆ ಅವರು ಯಾವ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ತಮ್ಮ ತಂದೆಯವರ ಕಾಲದಿಂದಲೂ ಜಾತ್ಯತೀತ ಹಾಗೂ ಕೋಮು ಸೌಹಾರ್ದತೆ ಆಧಾರದ ಮೇಲೆ, ಕಾಂಗ್ರೆಸ್‌ ತತ್ವ, ಸಿದ್ಧಾಂತದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ಮುಂಬರುವ ದಿನಗಳಲ್ಲಿ ಬಿಜೆಪಿಗೆ ಹೋಗುವರೇ ಅಥವಾ ಜೆಡಿಎಸ್‌ಗೆ ಹೋಗುವರೇ ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಎದುರು ಸಚಿವ ಎಂ.ಬಿ.ಪಾಟೀಲ ವಿರುದ್ಧ ನೇರವಾಗಿ ಅಸಮಾದಾನ ವ್ಯಕ್ತಪಡಿಸಿರುವ ಯಶವಂತರಾಯಗೌಡರು, ‘2028ರ ಚುನಾವಣೆಯಲ್ಲಿ ಅವನಾದರೂ ಬರಬೇಕು. ಇಲ್ಲವೇ, ನಾನಾದರೂ ಬರಬೇಕು, ಈಗಲೇ ಯುದ್ಧ ಘೋಷಣೆ ಮಾಡಿದ್ದೇನೆ’ ಎಂದು ಬಹಿರಂಗವಾಗಿ ಹೇಳಿರುವುದು ಮುಂಬರುವ ದಿನಗಳಲ್ಲಿ ಜಿಲ್ಲೆಯ ರಾಜಕಾರಣದ ಮೇಲೆ ಅದರಲ್ಲೂ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

‘ಎಂ.ಬಿ.ಪಾಟೀಲ ಮತ್ತು ನಾನು ಒಂದೇ ಪಕ್ಷದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಇಷ್ಟು ದಿನ ಹೇಗೋ ನಡೆದಿತ್ತು. ಆದರೆ, ದಶಕಗಳಿಂದಲೂ ನಮ್ಮ ನಡುವೆ ಸಂಬಂಧ ಸರಿಯಾಗಿರಲಿಲ್ಲ. ಜಿಲ್ಲೆಯಲ್ಲಿ ಯಾರು, ಯಾರ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅನ್ನು ಇಂತವರ ಕೈಯಲ್ಲಿ ಬೆಳೆಸಬೇಕು ಎಂದು ಪಕ್ಷದ ವರಿಷ್ಠರು ತೀರ್ಮಾನ ಮಾಡಿದ ಬಳಿಕ ಅಂತಹ ವಾತಾವರಣದಲ್ಲಿ ಮುಂದುರಿಯಲು ಮನಸ್ಸು ಒಪ್ಪುವುದಿಲ್ಲ’ ಎಂದು ಯಶವಂತರಾಯ ಗೌಡರು ನೋವು ತೋಡಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260804-26-1591568537

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ