
ಎಡೂರಿನ ಎರಡೂ ರಸ್ತೆಗಳೂ ಸರಿ ಇಲ್ಲ!: ಹೈರಾಣಾದ ಗ್ರಾಮಸ್ಥರು, ವಾಹನ ಸವಾರರು
ಕಳಸ: ಪಟ್ಟಣದಿಂದ ಎಡೂರು ಗ್ರಾಮ ತಲುಪಲು ಬಾಳೆಕಾನು ಮತ್ತು ಮರಸಣಿಗೆ ಮೂಲಕ ಎರಡು ರಸ್ತೆಗಳಿವೆ ಆದರೆ ಎರಡೂ ವಾಹನ ಸಂಚಾರಕ್ಕೆ ಅಸಾಧ್ಯ ಎಂಬಷ್ಟರ ಮಟ್ಟಿಗೆ ಹದಗೆಟ್ಟಿವೆ.
ಕೃಷಿ ಭೂಮಿ ಇರುವ ಎಡೂರು ಗ್ರಾಮದಿಂದ ಕಳಸ ಮತ್ತು ಮರಸಣಿಗೆ ಕಡೆಗೆ ಪ್ರತಿದಿನವೂ ಬಹಳಷ್ಟು ಕೃಷಿಕರು, ಕಾರ್ಮಿಕರು ಸಂಚಾರ ಮಾಡುತ್ತಾರೆ. ಶಾಲಾ ಮಕ್ಕಳು ಕೂಡ ದೊಡ್ಡ ಸಂಖ್ಯೆಯಲ್ಲಿ ಕಳಸದ ಶಾಲೆಗೆ ಇದೇ ರಸ್ತೆಯಲ್ಲಿ ಬರುತ್ತಾರೆ. ಆದರೆ ರಸ್ತೆಯ ಅವ್ಯವಸ್ಥೆಯಿಂದ ಜನರಿಗೆ ಕಳಸದ ಪ್ರಯಾಣ ಅತ್ಯಂತ ಪ್ರಯಾಸಕರ ಆಗಿದೆ. ರಸ್ತೆಯಲ್ಲಿ ತುಂಬಿದ ಕೆಸರು, ಕೊಚ್ಚೆ ತುಂಬಿದ ಗುಂಡಿಗಳು ಪಾದಚಾರಿಗಳನ್ನು ಕಂಗೆಡಿಸುತ್ತವೆ.
‘ಬಾಳೆಕಾನು- ಎಡೂರು ರಸ್ತೆಯು ಕಳಸದಿಂದ ಎಡೂರಿಗೆ ಇರುವ ಅತ್ಯಂತ ಹತ್ತಿರದ ರಸ್ತೆ. ಆದರೆ ಕಳೆದ 30 ವರ್ಷದಿಂದ ಈ ರಸ್ತೆಗೆ ಡಾಂಬರ್ ಭಾಗ್ಯವೇ ಇಲ್ಲ’ ಎಂದು ಅಲ್ಲಿನ ಯುವ ಕೃಷಿಕ ಅನಿಲ್ ಕುಮಾರ್ ಜೈನ್ ಬೇಸರದಿಂದ ಹೇಳುತ್ತಾರೆ.
‘ಮರಸಣಿಗೆ- ಎಡೂರು ರಸ್ತೆಗೆ ಮೂರು ವರ್ಷದಿಂದ ಡಾಂಬರೀಕರಣ ಮಾಡುತ್ತಿದ್ದಾರೆ. ಈವರೆಗೆ ಕಾಮಗಾರಿ ಮುಗಿದಿಲ್ಲ. ಮಳೆಗಾಲ ಹಿಡಿಯುವ ಮೊದಲು ಸ್ವಲ್ಪ ಕೆಲಸ ಮಾಡುತ್ತಾರೆ. ಮತ್ತೆ 10 ತಿಂಗಳು ಕೆಲಸ ನಿಲ್ಲಿಸುತ್ತಾರೆ. ಈ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಎಡೂರಿನಲ್ಲಿ ಕೃಷಿ ಭೂಮಿ ಹೊಂದಿರುವ ಬಾಹುಬಲಿ ಆಕ್ರೋಶದಿಂದ ಹೇಳುತ್ತಾರೆ.
‘ನಮ್ಮ ಗ್ರಾಮಕ್ಕೆ ಕಳಸದಿಂದ ಎರಡು ರಸ್ತೆ ಇವೆ ಎಂಬ ಹೆಗ್ಗಳಿಕೆ. ಆದರೆ ಟಿಂಬರ್ ಸಾಗಾಟದಿಂದ ಎರಡೂ ರಸ್ತೆಗಳು ಹದಗೆಟ್ಟು ಹೋಗಿವೆ. ಜೀಪ್, ಟ್ರ್ಯಾಕ್ಟರ್ ಬಿಟ್ಟರೆ ದ್ವಿಚಕ್ರ ವಾಹನದಲ್ಲಿ ಹೋಗುವುದು ಸಾಹಸವೇ ಆಗಿದೆ. ಜನರು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಆಗುತ್ತಿಲ್ಲ’ ಎಂದು ಪ್ರತಿದಿನವೂ ಇದೇ ರಸ್ತೆ ಬಳಸಿ ಕಳಸಕ್ಕೆ ಬರುವ ತಂತ್ರಜ್ಞ ಸುಕ್ಷಿತ್ ಎಡೂರು ಹೇಳುತ್ತಾರೆ.
ರಸ್ತೆ ಅಭಿವೃದ್ಧಿಗೆ ಕ್ರಮ: ಶಾಸಕಿ
‘ಎಡೂರು ರಸ್ತೆ ಅಭಿವೃದ್ಧಿಯು 2 ದಶಕದ ಬೇಡಿಕೆ ಎಂದು ತಿಳಿದು ಬಂದಿದೆ’ ಎಂದು ಶಾಸಕಿ ನಯನಾ ಮೋಟಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಾಳೆಕಾನು ಮೂಲಕ ಎಡೂರು ರಸ್ತೆ ಸಂಪರ್ಕಿಸುವ 3 ಕಿ.ಮೀ ರಸ್ತೆಗೆ ಸಂಪೂರ್ಣವಾಗಿ ಕಾಂಕ್ರೀಟೀಕರಣ ಮಾಡಲು ಅನುಮೋದನೆ ಆಗಿದೆ. ಪ್ರಗತಿ ಪಥ ಯೋಜನೆಗೆ ಈ ರಸ್ತೆ ಆಯ್ಕೆ ಮಾಡಿದ್ದೇವೆ’ ಎಂದರು.
ಹಿರೇಬೈಲು- ಹೆಮ್ಮಕ್ಕಿ ರಸ್ತೆ ಗುಂಡಿಮಯ
ಹಿರೇಬೈಲು- ಹೆಮ್ಮಕ್ಕಿ ರಸ್ತೆಯು ಆ ಭಾಗದ ಪ್ರಮುಖ ರಸ್ತೆ. ಆದರೆ, ಈ ರಸ್ತೆಯು ಇಡಕಿಣಿ ಬಳಿ ಒಂದು ಕಿಮೀ ಹದಗೆಟ್ಟು ನಿಂತಿದೆ. ಯಾವುದೇ ಕಾಮಗಾರಿ ನಡೆಯದೆ ಗುಂಡಿಗಳ ಆಗರವಾಗಿದೆ. ಈ ರಸ್ತೆಗೆ 5 ವರ್ಷದ ಹಿಂದೆಯೇ ಕಾಮಗಾರಿ ನಡೆದಿದೆ. ಆದರೆ, ಒಂದು ಕಿಲೋ ಮೀಟರ್ ರಸ್ತೆ ಪಾಳು ಬಿದ್ದಿದೆ. ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟದಿಂದ ಈ ರಸ್ತೆ ಕಾಮಗಾರಿ ನಡೆದಿಲ್ಲ. ತಡೆಗೋಡೆ ಕಾಮಗಾರಿಗೆ ಸಂಬಂಧ ವಿವಾದ ಮೂಡಿದ್ದರಿಂದ ರಸ್ತೆ ಕಾಮಗಾರಿಗೆ ಹಿನ್ನೆಡೆ ಆಗಿದೆ ಎಂದು ಗ್ರಾಮಸ್ಥರು ಬೇಸರ ದಿಂದ ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-126-908888216