ಉಡುಪಿ: ಕೊಂಕಣ ರೈಲ್ವೆ ವಿಲೀನಕ್ಕೆ ಹೆಚ್ಚಿದ ಕೂಗು

ಉಡುಪಿ: ಕೊಂಕಣ ರೈಲ್ವೆ ವಿಲೀನಕ್ಕೆ ಹೆಚ್ಚಿದ ಕೂಗು

ಉಡುಪಿ: ಕೊಂಕಣ ರೈಲ್ವೆ ವಿಲೀನಕ್ಕೆ ಹೆಚ್ಚಿದ ಕೂಗು

ಉಡುಪಿ: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕೆಂಬ ಬೇಡಿಕೆಯೂ ಹೆಚ್ಚಿದೆ.

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಈಗಾಗಲೇ ಕೆಲವು ರಾಜ್ಯಗಳು ಒಪ್ಪಿಗೆ ನೀಡಿದರೂ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬುದು ಜಿಲ್ಲೆಯ ರೈಲು ಪ್ರಯಾಣಿಕರ ಆರೋಪವಾಗಿದೆ.

ಈಗಾಗಲೇ ಜಿಲ್ಲೆಯ ಹಲವು ರೈಲು ನಿಲ್ದಾಣಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾದರೆ ಮಾತ್ರ ಹೆಚ್ಚು ಅನುದಾನ ಹರಿದು ಬರಬಹುದೆಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ.

ಕೊಂಕಣ ರೈಲ್ವೆ ನಿಗಮವು ಸ್ವತಂತ್ರವಾಗಿ ಬಜೆಟ್‌ ಬೆಂಬಲವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಾರಣ ಜೋಡಿ ಹಳಿ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಸಮರ್ಪಕ ಅನುದಾನವಿಲ್ಲದೆ ಹಿನ್ನಡೆಯಾಗಿದೆ ಎನ್ನುವುದು ರೈಲು ಪ್ರಯಾಣಿಕರ ಅಭಿಪ್ರಾಯವಾಗಿದೆ.

ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸಿರುವುದರಿಂದ ರಾಜ್ಯದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಅದೇ ರೀತಿ ಮುತುವರ್ಜಿ ವಹಿಸಿ ಕೊಂಕಣ ರೈಲ್ವೆಯನ್ನೂ ಶೀಘ್ರ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಲೀನ ಪ್ರಕ್ರಿಯೆಗೆ ಸಂಬಂಧಿಸಿ ಷೇರು ಹಂಚಿಕೆ ಮತ್ತು ಹಣಕಾಸಿನ ಮರುಪಾವತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳಕೆಂದು ಒತ್ತಾಯಿಸಿದ್ದಾರೆ.

‘ಬೆಂಗಳೂರಿನಿಂದ ಬರುವ ವಂದೇ ಭಾರತ್‌ ರೈಲನ್ನು ಪಡೀಲ್‌ ಮುಖಾಂತರ ಕನಿಷ್ಠ ಕುಂದಾಪುರದವರೆಗಾದರೂ ವಿಸ್ತರಿಸಬೇಕು. ಮಂಗಳೂರಿನಿಂದ ಮಡಗಾಂವ್‌ ವರೆಗೆ ಸಂಚರಿಸುವ ವಂದೇ ಭಾರತ್‌ ರೈಲಿಗೆ ಉಡುಪಿಯಲ್ಲಿ ಮಾತ್ರ ನಿಲುಗಡೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಜನರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಈ ರೈಲಿಗೆ ಕುಂದಾಪುರದಲ್ಲೂ ನಿಲುಗಡೆ ನೀಡಬೇಕು ಮತ್ತು ಈ ರೈಲನ್ನು ಮುಂಬೈವರೆಗೆ ವಿಸ್ತರಿಸಬೇಕು’ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌ ಆಗ್ರಹಿಸಿದ್ದಾರೆ.

‘ಜಿಲ್ಲೆಯ ಬಾರ್ಕೂರು ರೈಲು ನಿಲ್ದಾಣದಲ್ಲಿ ಒಂದೇ ಫ್ಲಾಟ್‌ ಫಾರಂ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅಲ್ಲಿ ಇನ್ನೊಂದು ಫ್ಲಾಟ್‌ ಫಾರಂ ನಿರ್ಮಿಸಲು ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕುಂದಾಪುರದಲ್ಲಿ ವಾಟರಿಂಗ್‌ ಸ್ಟೇಷನ್‌ ನಿರ್ಮಿಸಬೇಕೆಂಬ ಬೇಡಿಕೆ ಇದ್ದು, ಆ ಕುರಿತೂ ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

‘ಆಶಾದಾಯಕ ಬೆಳವಣಿಗೆ ಇದೆ’

‘ಕೊಂಕಣ ರೈಲು ನಿಗಮದಲ್ಲಿ ಕೇರಳ, ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಷೇರುಗಳಿವೆ. ಕೇರಳ ಮತ್ತು ಗೋವಾ ರಾಜ್ಯಗಳು ಈಗಾಗಲೇ ತಮ್ಮ ಪಾಲಿನ ಷೇರುಗಳನ್ನು ಬಿಟ್ಟು ಕೊಡುವುದಾಗಿ ಹೇಳಿವೆ. ರಾಜ್ಯದ ಷೇರು ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರ ಸ್ಪಂದಿಸುವ ಭರವಸೆ ಇದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಮಹಾರಾಷ್ಟ್ರ ಸರ್ಕಾರವು ತಮ್ಮ ಪಾಲಿನ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಷೇರು ಮೊತ್ತವನ್ನು ವಾಪಸ್‌ ನೀಡಬೇಕು ಮತ್ತು ಕೊಂಕಣ ಹೆಸರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ನೀಡುವುದು ಸುಲಭವಲ್ಲ ಈ ನಿಟ್ಟಿನಲ್ಲಿ ನಾವು ಈ ಭಾಗದ ನಾಲ್ಕು ಸಂಸದರು ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ. ಒಟ್ಟಿನಲ್ಲಿ ವಿಲೀನ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ ಇದೆ’ ಎಂದು ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-28-1843352536

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ