ವೆಬ್ ಎಕ್ಸ್‌ಕ್ಲೂಸಿವ್| ಸೇವೆಯ ತುಡಿತ: ಶಾಲೆಗಳೆಡೆಗೆ ಸೆಳೆತ

ವೆಬ್ ಎಕ್ಸ್‌ಕ್ಲೂಸಿವ್| ಸೇವೆಯ ತುಡಿತ: ಶಾಲೆಗಳೆಡೆಗೆ ಸೆಳೆತ

ವೆಬ್ ಎಕ್ಸ್‌ಕ್ಲೂಸಿವ್| ಸೇವೆಯ ತುಡಿತ: ಶಾಲೆಗಳೆಡೆಗೆ ಸೆಳೆತ

ಮಂಗಳೂರು: ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್ಎಸ್‌) ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಯುವಕ–ಯುವತಿಯರ ತಂಡವೊಂದು, ಸೇವಾ ಕಾರ್ಯಗಳನ್ನೇ ಹವ್ಯಾಸವಾಗಿ ರೂಢಿಸಿಕೊಂಡಿರುವ ಸ್ಫೂರ್ತಿದಾಯಕ ಕಥನವಿದು.  

ಮಂಗಳೂರು ನಗರದಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಸುಳ್ಯ, ಕುಗ್ರಾಮಗಳು, ಒಳ ಹಳ್ಳಿಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು. ಸುಳ್ಯದಲ್ಲಿರುವ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಸಮಾಜ ಸೇವೆಯ ತುಡಿತದಿಂದ ಎನ್‌ಎಸ್‌ಎಸ್ ಸೇವಾ ಸಂಗಮ ಟ್ರಸ್ಟ್‌ ಎಂಬ ಸಂಘಟನೆ ಕಟ್ಟುಕೊಂಡಿದ್ದಾರೆ. ಈ ಸಂಘಟನೆಗೆ ಈಗ ಎಂಟರ ಹರೆಯ. ಈ ಎಂಟು ವರ್ಷಗಳಲ್ಲಿ ಸೇವಾ ಸಂಗಮದ ಸ್ವಯಂ ಸೇವಕರು ಸುಳ್ಯ, ಪುತ್ತೂರು ತಾಲ್ಲೂಕುಗಳ ಅನೇಕ ಸರ್ಕಾರಿ ಶಾಲೆಗಳು, ಪಕ್ಕದ ಕೊಡುಗು ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಿಗೆ ನವರೂಪ ನೀಡಿದ್ದಾರೆ. 

ಕೊಳ್ಚರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡ್ಡಡ್ಕದ ರಾಮಕೃಷ್ಣ ಅನುದಾನಿತ ಶಾಲೆ, ಮುಳ್ಯಅಟ್ಲೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ವಳಂಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಮಂಗಳದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೀಗೆ 20ಕ್ಕೂ ಹೆಚ್ಚು ಶಾಲೆಗಳು ಸೇವಾ ಸಂಗಮದ ಸೇವೆ ಪಡೆದು ಸ್ಮಾರ್ಟ್ ಆಗಿವೆ. 

‘ಸುಳ್ಯ ಕೆವಿಜೆ ಪಾಲಿಟೆಕ್ನಿಕ್ ಕಾಲೇಜಿನವರು ಬಹುತೇಕ ಎಲ್ಲ ಕಾರ್ಯಕ್ರಮಗಳಿಗೆ ಹಳೆ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿದ್ದರು. ನಿರಂತರ ಒಡನಾಟ, ಆಗಾಗ ಒಟ್ಟಿಗೆ ಸೇರುವ ನಮಗೆ ಹಳೆ ವಿದ್ಯಾರ್ಥಿ ಸಂಘವೊಂದನ್ನು ರಚಿಸಬಹುದೆಂಬ ಹೊಳಹು ಮೂಡಿತು. ಗಾಂಧಿ ಜಯಂತಿಯಂದು ಬಳ್ಳಕ ಅಂಗನವಾಡಿಯಲ್ಲಿ ಮೊದಲ ಕಾರ್ಯಕ್ರಮದೊಂದಿಗೆ ನಮ್ಮ ಸಂಘ ಮೂರ್ತ ರೂಪ ಪಡೆಯಿತು. ಅಂಗನವಾಡಿಗೆ ಶಾಶ್ವತ ಕೊಡುಗೆಯೊಂದನ್ನು ನೀಡಲು ನಿರ್ಧರಿಸಿದೆವು. ಅಲ್ಲಿನ ಶಿಕ್ಷಕಿ ಡಿಜಿಟಲ್ ಕ್ಲಾಸ್‌ರೂಮ್ ರೂಪಿಸುವ ಸಲಹೆ ನೀಡಿದಾಗ, ನಮಗೂ ಒಪ್ಪಿತವಾಯಿತು.

ನಮ್ಮ ಗಮನ ಸರ್ಕಾರಿ ಶಾಲೆಗಳತ್ತ ಬೀರಲು ಪ್ರೇರಣೆಯಾಗಿದ್ದು ಇದೇ ಕಾರ್ಯಕ್ರಮ’ ಎನ್ನುತ್ತಾರೆ ಎನ್‌ಎಸ್‌ಎಸ್ ಸೇವಾ ಸಂಗಮ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಸುಜಿತ್ ಎಂ.ಎಸ್.‘ಒಂದು ಶಾಲೆಗೆ ಕನಿಷ್ಠ ₹30 ಸಾವಿರದಿಂದ ಗರಿಷ್ಠ ₹5 ಲಕ್ಷದವರೆಗೆ ಖರ್ಚು ಮಾಡಿದ್ದಿದೆ. ಬಾಲವನ ನಿರ್ಮಾಣ, ಅಡುಗೆ ಕೋಣೆ ದುರಸ್ತಿ, ಕೊಳವೆಬಾವಿ ದುರಸ್ತಿ, ವಿದ್ಯುತ್ ವೈರಿಂಗ್ ದುರಸ್ತಿ, ಸುಣ್ಣ–ಬಣ್ಣ, ಪ್ರಿಂಟರ್, ಕಂಪ್ಯೂಟರ್, ಪ್ರಾಜೆಕ್ಟರ್ ಕೊಡುಗೆ ಹೀಗೆ ಶಾಲೆಯ ಅಗತ್ಯಗಳನ್ನು ಮನಗಂಡು ಸೇವೆ ನಮ್ಮ ಕೈಲಾದ ಸೇವೆ ಒದಗಿಸಿದ್ದೇವೆ’ ಎನ್ನುತ್ತಾರೆ ಅವರು.

‘ಎಂಟು ವರ್ಷಗಳ ಪಯಣದಲ್ಲಿ ಸ್ವಯಂ ಸೇವೆ, ಶ್ರಮದಾನದ ಚಟುವಟಿಕೆಗಳು ನಮಗೆ ಬದುಕಿನ ಪಾಠ ಕಲಿಸಿವೆ, ಸಮಾಜದೊಂದಿಗೆ ನಂಟು ಬೆಳೆಸಿವೆ. ಹವ್ಯಾಸವಾಗಿ ರೂಢಿಸಿಕೊಂಡ ಕೆಲಸವು ನಮ್ಮ ವೈಯಕ್ತಿಕ ಜೀವನಕ್ಕೆ ಶಿಸ್ತಿನ ಚೌಕಟ್ಟು ರೂಪಿಸಿದೆ. ನಮ್ಮ ತಂಡದಲ್ಲಿರುವ ಬಹುತೇಕರು ಗ್ರಾಮೀಣ ಹಿನ್ನೆಲೆಯವರು. ಬಡ, ಮಧ್ಯಮ ವರ್ಗದ ಕುಟುಂಬದವರು, ಕುಟುಂಬದ ನಿರ್ವಹಣೆಯ ಹೊಣೆ ಹೊತ್ತವರು. ನಮ್ಮ ಹೊಣೆಗಾರಿಕೆಯ ಅರಿವನ್ನು ಗಾಢವಾಗಿಸಿದ್ದು ಈ ಸೇವಾ ಚಟುವಟಿಕೆ’ ಎಂದು ಮಾತಿಗಾರಂಭಿಸಿದರು ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ವಿಜೇತ್ ಶಿರ್ಲಾಲು. 

ಸಮಾಜದ ಸ್ಪಂದನೆ, ಜನರ ಮಮತೆ, ಶಾಲೆಗಳಲ್ಲಿ ನೀಡುವ ಗೌರವ ನಮಗೆ ಸಾರ್ಥಕ ಭಾವ ಮೂಡಿಸಿದೆ ಎನ್ನುತ್ತ ಅವರು, ಎರಡು ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡರು. 

‘2024ರ ಜನವರಿ ತಿಂಗಳು. ವಳಂಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ವೈಭವ, ನಾಯಕತ್ವ ಶಿಬಿರ, ವಾರ್ಷಿಕ ಸಮ್ಮಿಲನ ಹಮ್ಮಿಕೊಂಡಿದ್ದೆವು. ಎತ್ತರದ ವೇದಿಕೆ, ಅದರ ಬೆನ್ನಿಗೊಂದು ದೊಡ್ಡ ಸ್ಕ್ರೀನ್, ಅಡಿಕೆ ಮರ ಬಳಸಿದ ಅಪ್ಪಟ ಗ್ರಾಮೀಣ ಶೈಲಿಯ ಅಲಂಕಾರ, ಎಲ್ಲರೂ ಸಂಭ್ರಮದಲ್ಲಿ ಮಿಂದೇಳುವ ಹೊತ್ತಿಗೆ, ಒಮ್ಮೆಲೇ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆ ನೀರಿನೊಂದಿಗೆ ಸಂಭ್ರಮವೂ ಕೊಚ್ಚಿ ಹೋಗುತ್ತಲಿತ್ತು. ದಿನವಿಡೀ ಶ್ರಮಿಸಿ ಕಟ್ಟಿದ ವೇದಿಕೆ ಜಲಬಟ್ಟಲಿನಂತಾಗಿತ್ತು. 

‘ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕಲಾ ತಂಡಗಳು, ಕಲಾವಿದರು ಮೇಕಪ್ ಮಾಡಿಕೊಂಡು ಪ್ರದರ್ಶನಕ್ಕೆ ಅಣಿಯಾಗಿದ್ದರು. ವೇದಿಕೆಯ ಮೇಲಿನ ನೀರು ಖಾಲಿ ಮಾಡಿದಷ್ಟೂ, ಮತ್ತಷ್ಟು ನೀರು ಬಂದು ಸೇರಿಕೊಳ್ಳುತ್ತಿತ್ತು. ಅರೆಕ್ಷಣ ಹತಾಶರಾದೆವು. ಊರವರು ನಮಗೆ ಗಜಬಲ ನೀಡಿದರು. ಶಾಲೆಯ ವೇದಿಕೆಯಿಂದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಲ್ಯಾಣ ಮಂಟಪಕ್ಕೆ ಕಾರ್ಯಕ್ರಮ ಸ್ಥಳಾಂತರಿಸಲು ನಿರ್ಧಾರವಾಯಿತು. ಊರವರ ವಾಹನ ಹತ್ತಿ ನಾವೆಲ್ಲ ಕಲ್ಯಾಣ ಮಂಟಪ ತಲುಪಿ, ವೇದಿಕೆ ಸಿದ್ಧಪಡಿಸಿದೆವು. ದೊಡ್ಡ ಸ್ಕ್ರೀನ್ ಅನ್ನು ಹೊತ್ತು ತರುವಾಗ ಯಾರಿಗೂ ಮಳೆಯಲ್ಲಿ ತೋಯುತ್ತಿದ್ದ ಭಾವ ಕಾಡಲಿಲ್ಲ. ಕಾರ್ಯಕ್ರಮದ ಯಶಸ್ಸೇ ಎಲ್ಲರ ಗುರಿಯಾಗಿತ್ತು. ನೂರಾರು ಕೈಗಳು ಸೇರಿದವು. ಸ್ಥಳೀಯ ಶಾಸಕರೂ ನಮ್ಮ ಜೊತೆ ನಿಂತರು. ಒಂದು ತಾಸಿನಲ್ಲಿ ಶಾಲೆಯ ಆವರಣದಲ್ಲಿ ತಯಾರಾಗಿದ್ದ ವೇದಿಕೆಯ ಪ್ರತಿರೂಪ ಸೃಷ್ಟಿಯಾಯಿತು. ನಿಗದಿಗಿಂತ ಕೇವಲ ಒಂದು ತಾಸು ವಿಳಂಬವಾಗಿ ಕಾರ್ಯಕ್ರಮ ಶುರುವಾಯಿತು, ಭರ್ಜರಿ ಯಶಸ್ಸು ಕಂಡಿತು’ ಎನ್ನುವಾಗ ಅವರಲ್ಲಿ ತಮ್ಮ ತಂಡದ ಬಗ್ಗೆ ಹೆಮ್ಮೆ ತುಳುಕುತ್ತಿತ್ತು. 

‘ನಾನು ಮೂಲತಃ ಬೆಳ್ತಂಗಡಿ ತಾಲ್ಲೂಕಿನವನು. 2009ರಿಂದ 2012ರವರೆಗೆ ಮೂರು ವರ್ಷ ಶಿಕ್ಷಣಕ್ಕಾಗಿ ಸುಳ್ಯದಲ್ಲಿ ನೆಲೆಸಿದ್ದೆ. ಆದರೆ, ಸೇವಾ ಸಂಗಮವು ನನ್ನನ್ನು ಸುಳ್ಯದ ಮಗನಾಗಿ ರೂಪಿಸಿದೆ. ಸುಳ್ಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಜನರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಇದು, ನನ್ನೊಬ್ಬನ ಅನುಭವ ಅಲ್ಲ, ಇಡೀ ನಮ್ಮ ಸೇವಾ ಸಂಗಮ ತಂಡದ ಎಲ್ಲರ ಮನದಾಳದ ಭಾವನೆ. ನಾವು ಸಮಾಜಕ್ಕೆ ಕೊಡುಗೆ ನೀಡಿದಾಗ ಪ್ರೀತಿಯ ಮೂಲಕ ಸಮಾಜ ನಮ್ಮ ಋಣ ತೀರಿಸುತ್ತದೆ. 10–15 ಸದಸ್ಯರೊಂದಿಗೆ ಶುರುವಾದ ಸಂಘಟನೆಯಲ್ಲಿ ಈಗ 145ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದೇ ನಮ್ಮ ಕಾಯಕಕ್ಕೆ ಹಿಡಿದ ಕನ್ನಡಿ. ಕೆವಿಜಿ ಪಾಲಿಟೆಕ್ನಿಕ್‌ನ ಹಳೆ ವಿದ್ಯಾರ್ಥಿಗಳೊಂದಿಗೆ ರಾಜ್ಯದ ಬೇರೆ ಬೇರೆ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ತೊರೆಗಳೆಲ್ಲ ಸೇರಿ ‘ಸೇವಾ ಸಂಗಮ’ವೆಂಬ ನದಿಯಾಗಿ ಹರಿಯುತ್ತಿದೆ’ ಎಂದು ಅವರು ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡರು. 

ಸೇವಾ ಸಂಗಮದಲ್ಲಿ 50ಕ್ಕೂ ಹೆಚ್ಚು ಯುವತಿಯರು ಇದ್ದಾರೆ. ಸಂಘದ ಸದಸ್ಯರಲ್ಲಿ ಹೆಚ್ಚಿನವರು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಸಾಮಾಜಿಕ ಚಟುವಟಿಕೆಗೆ ಮೀಸಲಿಡುತ್ತಾರೆ. 2018ರಲ್ಲಿ ರಚನೆಯಾದ ಸಂಘಟನೆಯನ್ನು 2020ರಲ್ಲಿ ಎನ್‌ಎಸ್‌ಎಸ್ ಸೇವಾ ಸಂಗಮ ಟ್ರಸ್ಟ್‌ ಎಂದು ನೋಂದಾಯಿಸಿಕೊಂಡಿದ್ದೇವೆ. ಈವರೆಗೆ ಶಾಲೆಗಳಿಗೆ ಖರ್ಚು ಮಾಡಿದ ಮೊತ್ತ ₹15 ಲಕ್ಷದಿಂದ ₹18 ಲಕ್ಷ ದಾಟಿದೆ. ನಮ್ಮ ತಂಡದಲ್ಲಿ ಸ್ವ ಉದ್ಯೋಗಿಗಳು, ಕಾರ್ಪೊರೇಟ್ ಉದ್ಯೋಗಿಗಳು, ಉದ್ಯಮಿಗಳು ಇದ್ದಾರೆ. ಶಾಲೆಗಳ ಸೇವಾ ಕೈಂಕರ್ಯಕ್ಕೆ ನಾವು ವಾರದ ಕೊನೆಯ ದಿನಗಳನ್ನು ಆಯ್ದುಕೊಳ್ಳುವುದೇ ಹೆಚ್ಚು. ಹಲವು ಕರಗಳು ಸೇರಿದಾಗ ಕೆಲಸ ಬೇಗ ಪೂರ್ಣಗೊಳ್ಳುತ್ತದೆ. ವೃತ್ತಿ ಬದುಕಿನಿಂದ ನಿರಾಳರಾಗಿ ವಾರದ ಕೊನೆಯನ್ನು ಖುಷಿಯಿಂದ ಕಳೆಯುತ್ತೇವೆ. ಸೇವಾ ಸಂಗಮದ ಕೆಲಸಗಳೆಂದರೆ ನಮಗೆ ಮನೆ ಕೆಲಸವಿದ್ದಂತೆ’ ಎನ್ನುತ್ತಾರೆ ದಾಖಲಾತಿ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ. ಅವರ ಜೊತೆ ಉಪಾಧ್ಯಕ್ಷೆ ಭವ್ಯಶ್ರೀ, ಸೌಜನ್ಯಾ ಕೂಡ ದನಿಗೂಡಿಸಿದರು. 

ಶಾಲೆಗಳ ಆಯ್ಕೆ ಹೇಗೆ?: ಸುಳ್ಯದಲ್ಲೇ ನೆಲೆಸಿರುವ ಸಂಘಟನೆಯ ಸದಸ್ಯರು ಗ್ರಾಮಗಳ ಶಾಲೆಗಳನ್ನು ಗುರುತಿಸುತ್ತಾರೆ. ಕೆಲವೊಮ್ಮೆ ಶಾಲೆಯವರೇ ನಮ್ಮನ್ನು ಸಂಪರ್ಕಿಸುತ್ತಾರೆ. ಶಾಲೆಗಳ ಸ್ಥಿತಿಗತಿ ಆಧರಿಸಿ ಯೋಜನೆ ರೂಪಿಸಿ, ಕೆಲಸ ಕೈಗೆತ್ತಿಕೊಳ್ಳುತ್ತೇವೆ. ಹೆಚ್ಚಾಗಿ ನಾವು ಆಯ್ದುಕೊಂಡಿದ್ದು ಸರ್ಕಾರಿ ಶಾಲೆಗಳನ್ನು. ವಿದ್ಯುದೀಕರಣದ ಕೆಲಸ, ಬಣ್ಣ ಬಳಿಯುವ ಕಾಯಕಗಳಿದ್ದರೆ ತಂಡದ ಸದಸ್ಯರೇ ನಿರ್ವಹಿಸುತ್ತೇವೆ. ಕಾಂಕ್ರೀಟ್ ಕೆಲಸಗಳಿದ್ದರೆ ಕಾರ್ಮಿಕರ ಮೂಲಕ ಆ ಕೆಲಸ ಮಾಡಿಸುತ್ತೇವೆ. ಎಲ್ಲರೂ ನಿರ್ದಿಷ್ಟ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಶಾಲೆಗಳ ಸೇವಾ ಕಾರ್ಯದಲ್ಲಿ ನಮಗೆ ಕಹಿ ಅನುಭವ ಆಗಿದ್ದೇ ಇಲ್ಲ, ಎಲ್ಲವೂ ನಮಗೆ ಶ್ರೇಯಸ್ಸನ್ನೇ ತಂದುಕೊಟ್ಟಿವೆ ಎನ್ನುತ್ತಾರೆ ಟ್ರಸ್ಟ್ ಪದಾಧಿಕಾರಿಗಳಾದ ಯಶವಂತ, ಸುಶಾಂತ್, ಸಂದೀಪ್.

ಭವಿಷ್ಯದ ಸ್ವಯಂ ಸೇವಕರನ್ನು ಅಣಿಗೊಳಿಸುವ ಉದ್ದೇಶದಿಂದ ಸೇವಾ ಸಂಗಮವು ನಾಯಕತ್ವ ಶಿಬಿರಗಳನ್ನು ನಡೆಸುತ್ತದೆ. ಈ ಶಿಬಿರಗಳಿಂದ ಪ್ರೇರಿತರಾದ ಅನೇಕರು, ಸೇವಾ ಕಾರ್ಯಕ್ಕೆ ಅಳಿಲು ಸೇವೆ ನೀಡುತ್ತಿದ್ದಾರೆ. 

ಇಷ್ಟೆಲ್ಲ ಸೇವಾ ಕಾರ್ಯಗಳಿಗೆ ಹಣಕಾಸು ಕ್ರೋಡೀಕರಣ ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ‘ನಾವು ಸಮಾಜದಿಂದಲೇ ಬೆಳೆದವರು. ತುಂಬಾ ದೊಡ್ಡ ಸಂಬಳದ ಕೆಲಸ ಮಾಡುವವರೂ ಅಲ್ಲ. ಗಳಿಕೆಯ ಶೇ 1ರಷ್ಟನ್ನು ಸಮಾಜಕ್ಕಾಗಿ ಮೀಸಲಿಡುತ್ತೇವೆ. ಕಾರ್ಪೊರೇಟ್ ಜಗತ್ತಿನಲ್ಲಿರುವ ಹಲವರು ವೀಕ್ ಎಂಡ್ ಅನ್ನು ಹಣ ಖರ್ಚು ಮಾಡುವ ಮೂಲಕ ‘ಎಂಜಾಯ್’ ಮಾಡಿದರೆ, ನಾವು ಸೇವೆಯಲ್ಲಿ ಆ ಖುಷಿ ಅನುಭವಿಸುತ್ತೇವೆ. ಇದೇ ನಮಗೆ ಬಹುದೊಡ್ಡ ರಿಲೀಫ್. . ದೊಡ್ಡ ಕಾರ್ಯಕ್ರಮಗಳನ್ನು ನಡೆಸುವಾಗ ಕೆಲವರು ಪ್ರಾಯೋಜಕತ್ವಕ್ಕೆ ಮುಂದೆ ಬರುತ್ತಾರೆ. ಆದರೆ, ಶಾಲೆಗಳಿಗೆ ಮಾಡುವ ವೆಚ್ಚ ನಮ್ಮ ದುಡಿಮೆಯ ಹಣ ಎಂಬ ಧನ್ಯತಾ ಭಾವ ಇದೆ’ ಎಂದು ಎಲ್ಲರೂ ಏಕದನಿಯಲ್ಲಿ ಅರುಹಿದರು. 

‘ಸುಳ್ಯ ತಾಲ್ಲೂಕು ಗುತ್ತಿಗಾರು ಮತ್ತು ಪಂಜದ ನಡುವಿನ ಪುಟ್ಟ ಹಳ್ಳಿ ಬಳ್ಳಕ. ಇಲ್ಲಿನ ಅಂಗನವಾಡಿಗೆ ಸೇವಾ ಸಂಗಮ ಟ್ರಸ್ಟ್‌ನವರು ಡಿಜಿಟಲ್ ತರಗತಿ ಕೊಠಡಿ, ಸಿಸಿಟಿವಿ ಕ್ಯಾಮೆರಾ, ಲ್ಯಾಪ್‌ಟಾಪ್, ಮೇಜು, ಉಯ್ಯಾಲೆ ಹೀಗೆ ಅನೇಕ ಸಾಮಗ್ರಿಗಳ ಕೊಡುಗೆ ನೀಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಬಳ್ಳಕದ ಅಂಗನವಾಡಿ ಮಕ್ಕಳೂ ಡಿಜಿಟಲ್ ಕ್ಲಾಸ್‌ರೂಮ್ ನೋಡಲು ಸಾಧ್ಯವಾಗಿಸಿದ್ದು ಈ ಟ್ರಸ್ಟ್. ನಮ್ಮ ಅಂಗನವಾಡಿಗೆ ಟ್ರಸ್ಟ್ ₹5ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕೊಟ್ಟಿದೆ’ ಎಂದು ಸ್ಮರಿಸಿದರು ಅಂಗನವಾಡಿ ಶಿಕ್ಷಕಿ ಲತಾ ಅಂಬೆಕಲ್ಲು. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ